ಮನುಷ್ಯನ ದೇಹರಚನೆಯಲ್ಲಿ ಆಹಾರ ಸೇವಿಸಲು ಮತ್ತು ಮಾತನಾಡಲು ಇರುವ ಅಂಗ ಬಾಯಿ. ಆದರೆ, ಮನುಷ್ಯ ತನ್ನ ಚಟಗಳಿಗಾಗಿ ಬಾಯಿಯನ್ನು ಗಂಡಾಂತರಕ್ಕೀಡು ಮಾಡುತ್ತಿದ್ದಾನೆ. ಈಗಿನ ಕಾಲದ ಜನರಲ್ಲಿ ಅನಾರೋಗ್ಯಕರ ಜೀವನಶೈಲಿ ಮತ್ತು ಚಟಗಳು ಹೆಚ್ಚಾಗುತ್ತಿವೆ. ಮದ್ಯಪಾನ, ತಂಬಾಕು, ಗುಟ್ಕ, ಪಾನ್‌ಪರಾಗ್ ಮೊದಲಾದವುಗಳ ಸೇವನೆಗೆ ದಾಸರಾಗುತ್ತಿದ್ದಾರೆ. ಆ ಮೂಲಕ ಅಪಾಯಕಾರಿ ಬಾಯಿಯ ಕ್ಯಾನ್ಸರ್‌ಗೆ (Oral Cancer) ತುತ್ತಾಗುತ್ತಿದ್ದಾರೆ. ಹಾನಿಕಾರಕ ಪದಾರ್ಥಗಳ ಸೇವನೆಯಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದು, ಗಂಭೀರ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂಬ ಆತಂಕಕಾರಿ ವರದಿಯನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ದೇಶದಲ್ಲಿ ಹೆಚ್ಚುತ್ತಿರುವ ಬಾಯಿಯ ಕ್ಯಾನ್ಸರ್ ಪ್ರಕರಣಗಳ ನಿಯಂತ್ರಣಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (Indian Institute of Science) ಸಂಶೋಧಕರು ಹೊಸ ಚಿಕಿತ್ಸಾ ವಿಧಾನವೊಂದನ್ನು ಪರಿಚಯಿಸಿದ್ದಾರೆ. ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಬಾಯಿಯ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅಲ್ಟ್ರಾಸೌಂಡ್ ಸ್ಟಿಮ್ಯುಲೇಶನ್ ತಂತ್ರಜ್ಞಾನದ ಅನ್ವಯಿಕೆಗಳನ್ನು ಕಂಡುಹಿಡಿದಿದ್ದಾರೆ. ಇದು ಇತ್ತೀಚಿನ ವೈಜ್ಞಾನಿಕ ಪ್ರಗತಿಯಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ. ಅದರಲ್ಲೂ ಕರ್ನಾಟಕದ ಬೆಂಗಳೂರಿನ ಸಂಶೋಧಕರೇ ಈ ತಂತ್ರಜ್ಞಾನ ಪರಿಚಯಿಸಿರುವುದು ಹೆಮ್ಮೆಯ ಸಂಗತಿ. ಇದನ್ನೂ ಓದಿ: PublicTV Explainer: ಕೊರೊನಾ ಆಯ್ತು.. ಎಬೋಲಾ ಬಂತು – ಡೇಂಜರಸ್ ವೈರಸ್ ಬಗ್ಗೆ ಇರಲಿ ಎಚ್ಚರ!
ಏನಿದು ಬಾಯಿಯ ಕ್ಯಾನ್ಸರ್? ಇದು ಹೇಗೆ ಬರುತ್ತೆ? ಲಕ್ಷಣಗಳೇನು? ಭಾರತದಲ್ಲಿ ಇದರ ಪರಿಣಾಮ ಹೇಗಿದೆ? ನಿಯಂತ್ರಣಕ್ಕೆ ಬೆಂಗಳೂರಿನ ವಿಜ್ಞಾನ ಸಂಸ್ಥೆ ಪರಿಚಯಿಸಿರುವ ಚಿಕಿತ್ಸಾ ವಿಧಾನ ಏನು ಎಂಬುದರ ಬಗ್ಗೆ ವಿವರ ಇಲ್ಲಿದೆ.

ಬಾಯಿಯ ಕ್ಯಾನ್ಸರ್
ಮನುಷ್ಯನ ನಾಲಿಗೆ, ತುಟಿಗಳು, ಒಸಡುಗಳು ಅಥವಾ ಬಾಯಿಯ ಒಳಭಾಗದಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುವ ಗಂಭೀರ ಕಾಯಿಲೆಯಾಗಿದೆ. ಅಸಹಜ ಜೀವಕೋಶಗಳು ಬಾಯಿಯೊಳಗೆ ಬೆಳೆದು ವಿಭಜನೆಯಾದಾಗ ಕ್ಯಾನ್ಸರ್ ಬೆಳವಣಿಗೆಯಾಗುತ್ತದೆ. ಇದು ತುಂಬಾ ಅಪಾಯಕಾರಿ ಕ್ಯಾನ್ಸರ್‌ನಲ್ಲಿ ಒಂದು. ತಂಬಾಕು ಸೇವನೆ, ಗುಟ್ಕ, ಪಾನ್‌ಪರಾಗ್, ಮದ್ಯಪಾನದಿಂದ ಇದು ಉಂಟಾಗುತ್ತದೆ.
ಬಾಯಿ ಕ್ಯಾನ್ಸರ್ ಲಕ್ಷಣಗಳೇನು?
ಬಾಯಿಯ ತುಟಿಗಳು, ಗಂಟಲು ಅಥವಾ ಕುತ್ತಿಗೆಯಲ್ಲಿ ಕೆಂಪು ಅಥವಾ ಬಿಳಿ ತೇಪೆ ಕಾಣಿಸಿಕೊಳ್ಳುವುದು. ನೋವುರಹಿತ ಉಂಡೆ ಕಂಡುಬರುವುದು. ಬಾಯಿ ಅಥವಾ ನಾಲಿಗೆ ಮೇಲೆ ವಾಸಿಯಾಗದ ಹುಣ್ಣು. ಅಗಿಯುವಾಗ ಅಥವಾ ನುಂಗುವಾಗ ತೊಂದರೆ ಮತ್ತು ನೋವು ಕಾಣಿಸಿಕೊಳ್ಳುವುದು. ಕಾರಣವಿಲ್ಲದೇ ಬಾಯಿಯಲ್ಲಿ ಊಟ ಅಥವಾ ರಕ್ತಸ್ರಾವವಾಗುವುದು. ಹಲ್ಲುಗಳು ಸಡಿಲವಾಗುವುದು, ದೇಹದ ತೂಕ ಇಳಿಕೆ, ಮೂರು ವಾರಕ್ಕಿಂತ ಹೆಚ್ಚು ಸಮಯ ಊದಿಕೊಂಡ ಬಾಯಿ. ರುಚಿ ಪತ್ತೆ ಮಾಡುವಲ್ಲಿ ಸಮಸ್ಯೆ ಮೊದಲಾದವು ಬಾಯಿ ಕ್ಯಾನ್ಸರ್‌ನ ಲಕ್ಷಣಗಳು. ಈ ಲಕ್ಷಣ ಇರುವವರೆಲ್ಲ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದರ್ಥವಲ್ಲ. ಆದರೆ, ಇವು ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಇದನ್ನೂ ಓದಿ: ಹಾಸನ ಸರಣಿ ಹೃದಯಾಘಾತದ ವರದಿ ಬಹಿರಂಗ – ಮೃತಪಟ್ಟವರಲ್ಲಿ ಹೆಚ್ಚಿನವರು ಕ್ಯಾಬ್ ಚಾಲಕರು!
ಭಾರತದಲ್ಲಿ ಹೆಚ್ಚಿದ ಕೇಸ್‌ಗಳು
ಜಗಿಯಬಹುದಾದ ತಂಬಾಕು ಉತ್ಪನ್ನಗಳ ವ್ಯಾಪಕತೆಯನ್ನು ಗಮನಿಸಿದರೆ, ಭಾರತದಲ್ಲಿ ಬಾಯಿಯ ಕ್ಯಾನ್ಸರ್ ಒಂದು ಪ್ರಮುಖ ಆರೋಗ್ಯ ಬಿಕ್ಕಟ್ಟಾಗಿದೆ. ಜಾಗತಿಕವಾಗಿ ಕಂಡುಬರುವ ಎಲ್ಲಾ 4 ಪ್ರಕರಣಗಳ ಪೈಕಿ 1 ಭಾರತದ್ದೇ ಆಗಿದೆ. ಪ್ರತಿ ವರ್ಷ ಜಾಗತಿಕವಾಗಿ ಸುಮಾರು 3,90,000 ಕೇಸ್‌ಗಳು ವರದಿಯಾಗುತ್ತಿವೆ. ಅವುಗಳಲ್ಲಿ 1,88,000 ಮಂದಿ ಸಾವಿಗೀಡಾಗುತ್ತಿದ್ದಾರೆ. ಪ್ರಕರಣಗಳಲ್ಲಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಹೆಚ್ಚು ಪಾಲನ್ನು ಹೊಂದಿದೆ. ವಿಶ್ವದಲ್ಲೇ ಅತಿ ಹೆಚ್ಚು ಬಾಯಿಯ ಕ್ಯಾನ್ಸರ್ ರೋಗಿಗಳಿರುವ ದೇಶ ಭಾರತವಾಗಿದೆ. ದೇಶದಲ್ಲಿ ವರ್ಷಕ್ಕೆ ಸುಮಾರು 77,000 ರಿಂದ 1,00,000 ಹೊಸ ಪ್ರಕರಣಗಳು ವರದಿಯಾಗುತ್ತವೆ. ಇದು ಭಾರತೀಯ ಪುರುಷರಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ.
ಬೆಂಗಳೂರಿನ ವಿಜ್ಞಾನ ಸಂಸ್ಥೆ ಸಂಶೋಧನೆ ಏನು?
ಬಾಯಿಯ ಕ್ಯಾನ್ಸರ್‌ಗೆ ಹೊಸ ಚಿಕಿತ್ಸಾ ವಿಧಾನವೊಂದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಎಂಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನ ಸಂಶೋಧಕರು ಆವಿಷ್ಕರಿಸಿದೆ. ‘3ಆ ಕೋಕಲ್ಚರ್ ಪ್ಲಾಟ್‌ಫಾರ್ಮ್ ಮತ್ತು ಕಡಿಮೆ-ಆವರ್ತನ ಅಲ್ಟ್ರಾಸೌಂಡ್ ಬಳಸಿ ಬಾಯಿಯ ಕ್ಯಾನ್ಸರ್ ಕೋಶಗಳಲ್ಲಿ ಬಯೋಮೆಕಾನಿಕಲ್ ದುರ್ಬಲತೆಗಳನ್ನು ಬಹಿರಂಗಪಡಿಸುವುದು’ ಎಂಬ ಶೀರ್ಷಿಕೆಯ ಅಧ್ಯಯನವನ್ನು ಮೆಟೀರಿಯಲ್ಸ್ ಟುಡೇ ಬಯೋ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನವು, ನಾಲ್ಕನೇ ಹಂತದ ಬಾಯಿಯ ಕ್ಯಾನ್ಸರ್ ಇರುವ 15 ರೋಗಿಗಳಿಂದ ತೆಗೆದುಕೊಳ್ಳಲಾದ ಮಾದರಿಗಳನ್ನು ಬಳಸಿದೆ. ಈ ಹೊಸ ಚಿಕಿತ್ಸಾ ವಿಧಾನದಿಂದ ಬಾಯಿಯ ಕ್ಯಾನ್ಸರ್ ಕೋಶಗಳು ದುರ್ಬಲಗೊಳ್ಳುತ್ತವೆ ಎಂದು ಅಧ್ಯಯನ ತಿಳಿಸಿದೆ.

ಚಿಕಿತ್ಸೆ ಹೇಗೆ ಕೆಲಸ ಮಾಡುತ್ತೆ?
ಈ ಚಿಕಿತ್ಸಾ ವಿಧಾನದಿಂದ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಇರಲ್ಲ. ಇದು ಆರೋಗ್ಯಕರ ಅಂಗಾಂಶಗಳನ್ನು ಉಳಿಸುವಾಗ ಬಾಯಿಯ ಕ್ಯಾನ್ಸರ್ ಕೋಶಗಳನ್ನು ಹುಡುಕು ನಾಶಪಡಿಸುತ್ತದೆ. ಸಂಶೋಧಕರ ತಂಡವು ಚಿಕಿತ್ಸಾ ವಿಧಾನದಲ್ಲಿ ‘3ಡಿ ಕೋ-ಕಲ್ಚರ್ ಪ್ಲಾಟ್‌ಫಾರ್ಮ್’ ಅನ್ನು ಬಳಸಿದೆ. ಇದು ಗೆಡ್ಡೆಯ ಪರಿಸರವನ್ನು ಟಾರ್ಗೆಟ್ ಮಾಡುತ್ತದೆ. ಕ್ಯಾನ್ಸರ್ ಕೋಶಗಳು ಘನ ಗೆಡ್ಡೆಯ ಮಧ್ಯಭಾಗದ ಸುತ್ತಲೂ ತಡೆಗೋಡೆಯಂತಹ ರಚನೆಯನ್ನು ರೂಪಿಸುತ್ತವೆ. ಇದು ಸಾಮಾನ್ಯವಾಗಿ ಔಷಧಗಳು ಮತ್ತು ರೋಗನಿರೋಧಕ ಶಕ್ತಿಯು ಕ್ಯಾನ್ಸರ್ ಕೋಶಗಳಿಂದ ಒಳನುಸುಳುವಿಕೆಯನ್ನು ತಡೆಯುತ್ತದೆ. ಆದರೆ, ಈ ಹೊಸ ಚಿಕಿತ್ಸೆಯು ಈ ಕೋಶಗಳನ್ನು ಒಡೆಯುವ ಕೆಲಸ ಮಾಡುತ್ತದೆ. ಇದನ್ನೂ ಓದಿ: Diabetes: ಪ್ರತಿದಿನ ಬೇಡ ಇನ್ಮುಂದೆ ವಾರಕ್ಕೊಮ್ಮೆ ತೆಗೆದುಕೊಳ್ಳಿ ಇನ್ಸುಲಿನ್
ಅಧ್ಯಯನದ ಕುರಿತು ಲೇಖಕರಾದ ಸಹಾಯಕ ಪ್ರಾಧ್ಯಾಪಕ ಅಜಯ್ ಟಿಜೋರ್, ಹೆಚ್ಚಿನ ಆವರ್ತನದ ಅಲ್ಟ್ರಾಸೌಂಡ್ ಅನ್ನು ವೈದ್ಯಕೀಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ (ಹೆಚ್ಚಾಗಿ ರೋಗನಿರ್ಣಯ ಮತ್ತು ಚಿತ್ರಣ ಉದ್ದೇಶಗಳಿಗಾಗಿ). ಆದರೆ, ಇದು ದೇಹದಲ್ಲಿ ತುಲನಾತ್ಮಕವಾಗಿ ಕಡಿಮೆ ಪ್ರವೇಶದ ಗುಣಗಳನ್ನು ಹೊಂದಿದೆ. ಅದು ಕೆಲವು ಸೆಂಟಿಮೀಟರ್‌ಗಳವರೆಗೆ ಮಾತ್ರ. ಮತ್ತೊಂದು ವಿಧವೆಂದರೆ ಹೈ ಇಂಟೆನ್ಸಿಟಿ ಫೋಕಸ್ಡ್ ಅಲ್ಟ್ರಾಸೌಂಡ್ (ಊIಈU). ಇದು ಪ್ರಾಸ್ಟೇಟ್ ಕ್ಯಾನ್ಸರ್‌ನಂತಹ ಸಂದರ್ಭಗಳಲ್ಲಿ ಜೀವಕೋಶಗಳನ್ನು ಸುಡಲು ಶಾಖವನ್ನು ಉತ್ಪಾದಿಸುತ್ತದೆ. ಇದು ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಆದರೆ, ಬಾಯಿಯ ಕ್ಯಾನ್ಸರ್ ಕ್ಷೇತ್ರದಲ್ಲಿ ಕಡಿಮೆ ಆವರ್ತನದ ಅಲ್ಟ್ರಾಸೌಂಡ್ ಮೆಕ್ಯಾನೊಸ್ಟಿಮ್ಯುಲೇಶನ್ ಚಿಕಿತ್ಸಾ ವಿಧಾನವು ತುಂಬಾ ಅನುಕೂಲಕರವಾಗಿದೆ ಎಂದು ತಿಳಿಸಿದ್ದಾರೆ.
ಕ್ಯಾನ್ಸರ್ ಕೋಶಗಳನ್ನು ಹುಡುಕಿ ಕೊಲ್ಲುತ್ತೆ!
ವಿವಿಧ ಹಂತದ ಕ್ಯಾನ್ಸರ್ ರೋಗಿಗಳಿಂದ ಪಡೆದ ಕ್ಯಾನ್ಸರ್ ಕೋಶಗಳಲ್ಲಿ ಪ್ರತಿಕ್ರಿಯೆಯ ಸ್ಥಿರತೆಯು ನಮಗೆ ಹೆಚ್ಚು ಆಶ್ಚರ್ಯವನ್ನುಂಟು ಮಾಡಿತು. ಕ್ಯಾನ್ಸರ್ ಕೋಶಗಳು ಅಲ್ಟ್ರಾಸೌಂಡ್ ಚಿಕಿತ್ಸಾ ವಿಧಾನಕ್ಕೆ ಹೆಚ್ಚು ಗುರಿಯಾಗುತ್ತವೆ. ಅಲ್ಲದೇ, ದೇಹದ ಸಾಮಾನ್ಯ ಜೀವಕೋಶಗಳಿಗೆ ಇದರಿಂದ ಯಾವುದೇ ಹೆಚ್ಚಿನ ಅಡ್ಡಪರಿಣಾಮ ಆಗುತ್ತಿಲ್ಲ ಎಂದು ಅಧ್ಯಯನದ ಮೊದಲ ಲೇಖಕಿ ಪಿಎಚ್‌ಡಿ ವಿದ್ಯಾರ್ಥಿನಿ ರಶ್ಮಿತಾ ಲುಹಾ ತಿಳಿಸಿದ್ದಾರೆ.
ಟ್ರೋಪೊಮಿಯೋಸಿನ್ 2.1 ಎಂಬ ಪ್ರೊಟೀನ್‌ನ ಉಪಸ್ಥಿತಿಯು ಕ್ಯಾನ್ಸರ್ ಕೋಶಗಳನ್ನು ಹುಡುಕಿ ಕೊಲ್ಲಲು ಪ್ರಮುಖ ಕಾರಣವಾಗಿದೆ. ಇದು ಆರೋಗ್ಯಕರ ಜೀವಕೋಶಗಳ ಮೇಲೆ ಪರಿಣಾಮ ಬೀರುವುದಿಲ್ಲ. ‘ಈ ಪ್ರೊಟೀನ್ ನಷ್ಟವಾಗಿ, ನೀವು ಹೊರಗಿನಿಂದ ಅಂತಹ LFU ಯಾಂತ್ರಿಕ ಪ್ರಚೋದನೆಯನ್ನು ಅನ್ವಯಿಸಿದಾಗ ಕ್ಯಾನ್ಸರ್ ಕೋಶಗಳು ಈ ಶಕ್ತಿಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರೊಫೆಸರ್ ಟಿಜೋರ್ ತಿಳಿಸಿದ್ದಾರೆ.
ಭಾರತದಲ್ಲಿ ಹೇಗಿದೆ ಕ್ಯಾನ್ಸರ್ ಪರಿಸ್ಥಿತಿ?
ಬಾಯಿಯ ಕ್ಯಾನ್ಸರ್ ಇರುವ ಭಾರತೀಯರು ಚಿಕಿತ್ಸೆಯ ನಂತರ ಐದು ವರ್ಷಗಳ ವರೆಗೆ ಬದುಕುಳಿಯುವ ಪ್ರಮಾಣ ಶೇ.50 ರಷ್ಟಿದೆ. ಆದರೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಈ ಪ್ರಮಾಣ ಶೇ.68 ಇದೆ. ತಮಿಳುನಾಡು ಮೂಲದ ಬಾಯಿ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸಕ ಡಾ. ಸೆಂಥಿಲ್ ಕುಮಾರ್ ಅವರ ಪ್ರಕಾರ, ಭಾರತದಲ್ಲಿ ಬಾಯಿಯ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಬಯಸುವ ಜನರು ಪ್ರಸ್ತುತ ದುಬಾರಿ ವೆಚ್ಚದಂತಹ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಆರಂಭಿಕ ಹಂತಗಳಲ್ಲಿ ಪ್ರಕರಣವನ್ನು ಗುರುತಿಸುವುದು ಮತ್ತು ರೋಗಿಗಳು ಆರಂಭಿಕ ಚಿಕಿತ್ಸೆ ಪಡೆಯುವುದು. ರೋಗಿಗಳಿಗೆ ಶಿಕ್ಷಣ ನೀಡುವುದು ಮತ್ತು ಜಾಗೃತಿ ಮೂಡಿಸುವುದು ಸಹ ಮುಖ್ಯವಾಗಿದೆ. ಬಾಯಿಯಲ್ಲಿ ಸೌಮ್ಯವಾದ ಗಾಯವಿದ್ದರೆ, ಅದನ್ನು ಪ್ರತಿ 3 ರಿಂದ 6 ತಿಂಗಳಿಗೊಮ್ಮೆ ಮೇಲ್ವಿಚಾರಣೆ ಮಾಡಿ ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ ಚಿಕಿತ್ಸೆಯು ಶಸ್ತ್ರಚಿಕಿತ್ಸೆ, ವಿಕಿರಣ ಮತ್ತು ಕಿಮೊಥೆರಪಿಯನ್ನು ಹೊಂದಿರುತ್ತದೆ. ಹೊಸ LFU ವಿಧಾನವನ್ನು ಸ್ತನ ಕ್ಯಾನ್ಸರ್ ಮತ್ತು ಮೆಲನೋಮ (ಒಂದು ರೀತಿಯ ಚರ್ಮದ ಕ್ಯಾನ್ಸರ್) ನಂತಹ ವಿವಿಧ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಬಳಸಬಹುದು ಎಂದು ಪ್ರೊಫೆಸರ್ ಟಿಜೋರ್ ಹೇಳಿದ್ದಾರೆ.
