* ಎಬೋಲಾ ಮೂಲ ಯಾವುದು? ಮೊದಲು ಪತ್ತೆಯಾಗಿದ್ದು ಯಾವಾಗ?
* ವೈರಸ್ ನಿಯಂತ್ರಣಕ್ಕೆ ಲಸಿಕೆ ಇದೆಯೇ?
ಮಾರಕ ಕೋವಿಡ್-19 ವಿರುದ್ಧ ಹೋರಾಡಿ ಜನ ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಜಗತ್ತಿನಲ್ಲಿ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ‘ಎಬೋಲಾ’ ಭೀತಿ ಶುರುವಾಗಿದೆ. ಇದರಿಂದ ಕಳವಳಗೊಂಡ ವಿಶ್ವ ಆರೋಗ್ಯ ಸಂಸ್ಥೆ ಮತ್ತೊಮ್ಮೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಆಫ್ರಿಕಾದ ಕಾಂಗೊ ರಿಪಬ್ಲಿಕ್ ಮತ್ತು ಉಗಾಂಡದಲ್ಲಿ ಎಬೋಲಾ ಸೋಂಕು ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಮಾರಕ ಸೋಂಕಿಗೆ ತುತ್ತಾಗಿ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ವೈರಸ್‌ಗೆ ಇದುವರೆಗೆ 177 ಮಂದಿ ಉಸಿರು ಚೆಲ್ಲಿದ್ದಾರೆ. ಇದೊಂದು ಅಸಾಮಾನ್ಯ ವಿದ್ಯಮಾನ ಎಂದು ಡಬ್ಲ್ಯೂಹೆಚ್‌ಒ ಹೇಳಿದೆ. ಎಬೋಲಾ ಅಬ್ಬರ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದಲ್ಲೂ ಕಟ್ಟೆಚ್ಚರ ವಿಧಿಸಲಾಗಿದೆ.
ಏನಿದು ಎಬೋಲಾ? ಇದರ ಇತಿಹಾಸ ಏನು? ಸೋಂಕು ಹರಡೋದು ಹೇಗೆ? ವೈರಸ್ ಗುಣಲಕ್ಷಣ ಏನು? ಪತ್ತೆ ಹೇಗೆ? ಸೋಂಕು ವ್ಯಾಪಿಸದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು? ಆಫ್ರಿಕಾದಲ್ಲಿ ಈಗ ಪರಿಸ್ಥಿತಿ ಹೇಗಿದೆ? ಭಾರತ ಮತ್ತು ಕರ್ನಾಟಕದಲ್ಲಿ ಕೈಗೊಂಡ ಕ್ರಮಗಳೇನು?
ಎಬೋಲಾ
ಜಗತ್ತಿನ ಅತಿ ಅಪಾಯಕಾರಿ ವೈರಸ್ ಎಬೋಲಾ. ಇದು ತೀವ್ರವಾದ ಹಾಗೂ ಮಾರಣಾಂತಿಕ ರಕ್ತಸ್ರಾವ ಉಂಟುಮಾಡುವ ಹೆಮರಾಜಿಕ್ ಜ್ವರವಾಗಿದೆ.
ಮೊದಲು ಪತ್ತೆಯಾಗಿದ್ದು ಯಾವಾಗ?
1976 ರಲ್ಲಿ ಮಧ್ಯ ಆಫ್ರಿಕಾದಲ್ಲಿ ಎರಡು ಬಾರಿ ಏಕಕಾಲದಲ್ಲಿ ವೈರಲ್ ಹೆಮರಾಜಿಕ್ ಜ್ವರ ಹರಡಿದಾಗ ಎಬೋಲಾ ಪತ್ತೆ.
ಪತ್ತೆಯಾಗಿದ್ದು ಎಲ್ಲಿ?
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ (ಆಗ ಜೈರ್ ಎಂದು ಕರೆಯಲಾಗುತ್ತಿತ್ತು) ಯಂಬುಕು ಗ್ರಾಮ ಮತ್ತು ಸುಡಾನ್‌ನ ನ್ಜಾರಾ ಪಟ್ಟಣದಲ್ಲಿ ಮೊದಲು ಕಾಣಿಸಿಕೊಂಡಿತು. ಮುಳ್ಳುಹಂದಿ, ಬಾವಲಿಗಳಂತಹ ಪ್ರಾಣಿಗಳಲ್ಲಿ ಸ್ವಾಭಾವಿಕವಾಗಿ ವಾಸಿಸುವ ಈ ವೈರಸ್ ಕಾಂಗೋ ನದಿಯ ಎಬೋಲಾ ಉಪನದಿಯ ತೀರದಲ್ಲಿ ಮೊದಲು ಪತ್ತೆಯಾಯಿತು.
ವೈರಸ್ ಕಂಡುಹಿಡಿದವರು ಯಾರು?
ಕಿನ್ಶಾಸಾದಲ್ಲಿರುವ ಡಿಆರ್‌ಸಿಯ ಇನ್‌ಸ್ಟಿಟ್ಯೂಟ್ ನ್ಯಾಷನಲ್ ಡೆ ಲಾ ರೆಚೆರ್ಚೆ ಬಯೋಮೆಡಿಕೇಲ್‌ನ ಮುಖ್ಯಸ್ಥ ಡಾ. ಜೀನ್-ಜಾಕ್ವೆಸ್ ಮುಯೆಂಬೆ ಅವರು ಎಬೋಲಾ ಪತ್ತೆಹಚ್ಚಿದರು.
ಸೋಂಕು ಲಕ್ಷಣಗಳೇನು?
* ತೀವ್ರ ಜ್ವರ
* ತಲೆನೋವು
* ಸ್ನಾಯು ನೋವು
* ವಾಂತಿ
* ಭೇದಿ
* ಗಂಟಲು ನೋವು
* ತೀವ್ರ ದಣಿವು
* ಮೂತ್ರಪಿಂಡ
* ಯಕೃತ್ತಿನ ವೈಫಲ್ಯ
* ಆಂತರಿಕ & ಬಾಹ್ಯ ರಕ್ತಸ್ರಾವಗಳು
(ರೋಗದ ಲಕ್ಷಣಗಳು 2 ರಿಂದ 21 ದಿನಗಳ ಒಳಗೆ ಕಾಣಿಸಿಕೊಳ್ಳುತ್ತವೆ.)
ಹರಡೋದು ಹೇಗೆ?
* ಬಾವಲಿ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.
* ಸೋಂಕಿತ ವ್ಯಕ್ತಿಯ ರಕ್ತ, ಉಗುಳು, ಬೆವರು, ಮೂತ್ರ ಅಥವಾ ಇತರ ದೈಹಿಕ ದ್ರವಗಳ ನೇರ ಸಂಪರ್ಕದಿಂದ ಹರಡುತ್ತದೆ.
* ಕಲುಷಿತಗೊಂಡ ಸೂಜಿಗಳು ಮತ್ತು ಸೋಂಕಿತ ಪ್ರಾಣಿಗಳ ಮಾಂಸದ ಮೂಲಕವೂ ಸಂಭವಿಸಬಹುದು.
ಯಾವುದರಿಂದ ಹರಡುವುದಿಲ್ಲ?
ಗಾಳಿಯ ಮೂಲಕ ಎಬೋಲಾ ವೈರಸ್ ಹರಡುವುದಿಲ್ಲ.
ಲಸಿಕೆ ಇದೆಯೇ?
ಹೌದು, ಎಬೋಲಾ ವೈರಸ್ ರೋಗವನ್ನು ತಡೆಗಟ್ಟಲು ಪರವಾನಗಿ ಪಡೆದ ಸುರಕ್ಷಿತ ಮತ್ತು ಪರಿಣಾಮಕಾರಿ (ERVEBO, ಜಬ್ಡೆನೊ ಮತ್ತು ಮ್ವಾಬಿಯಾ ಲಸಿಕೆ) ಲಸಿಕೆಗಳಿವೆ.
ಮುನ್ನೆಚ್ಚರಿಕೆ ಕ್ರಮಗಳೇನು?
ನೇರ ಸಂಪರ್ಕ ತಪ್ಪಿಸಿ: ಸೋಂಕಿತರ ಅಥವಾ ಅವರ ದೇಹದ ದ್ರವಗಳ (ರಕ್ತ, ಲಾಲಾರಸ, ಬೆವರು, ಮೂತ್ರ, ವೀರ್ಯ ಇತ್ಯಾದಿ) ಸಂಪರ್ಕಕ್ಕೆ ಬರುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು.
ವೈಯಕ್ತಿಕ ನೈರ್ಮಲ್ಯ: ಕೈಗಳನ್ನು ಆಗಾಗ್ಗೆ ಸಾಬೂನು ಮತ್ತು ನೀರಿನಿಂದ ತೊಳೆಯಿರಿ ಅಥವಾ ಸ್ಯಾನಿಟೈಜರ್ ಬಳಸಬೇಕು.
ಸತ್ತವರ ಅಂತ್ಯಕ್ರಿಯೆ: ಎಬೋಲಾದಿಂದ ಮೃತಪಟ್ಟವರ ದೇಹವನ್ನು ಮುಟ್ಟಬಾರದು. ಅವರ ಅಂತ್ಯಕ್ರಿಯೆಗಳನ್ನು ವೈದ್ಯಕೀಯ ಶಿಷ್ಟಾಚಾರದ ಪ್ರಕಾರವೇ ನಡೆಸಬೇಕು.
ಪ್ರಯಾಣದಲ್ಲಿ ಎಚ್ಚರಿಕೆ: ಎಬೋಲಾ ಪೀಡಿತ ದೇಶಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿ. ಅನಿವಾರ್ಯವಿದ್ದಲ್ಲಿ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಗಾಗಬೇಕು.
ಪ್ರಾಣಿಗಳಿಂದ ದೂರವಿರಿ: ಸೋಂಕಿತ ಪ್ರಾಣಿಗಳ ಮಾಂಸವನ್ನು ತಿನ್ನುವುದನ್ನು ಅಥವಾ ಅವುಗಳ ಸಂಪರ್ಕಕ್ಕೆ ಬರುವುದನ್ನು ಸಂಪೂರ್ಣವಾಗಿ ವರ್ಜಿಸಬೇಕು.
ಇತಿಹಾಸದುದ್ದಕ್ಕೂ ಎಬೋಲಾ ಪರಿಣಾಮ ಏನು?
1970 ರಿಂದ 1990 ದಶಕದವರೆಗೆ: ಈ ದಶಕಗಳಲ್ಲಿ ಎಬೋಲಾ ಹಲವಾರು ಬಾರಿ ಕಾಣಿಸಿಕೊಂಡಿತು. ಸುಡಾನ್, ಗ್ಯಾಬೊನ್ ಮತ್ತು ಡಿಆರ್‌ಸಿಯ ಕೆಲವು ಭಾಗಗಳಲ್ಲಿ ಪ್ರಕರಣಗಳು ವರದಿಯಾಗಿವೆ. 1990 ರ ದಶಕದ ಹೊತ್ತಿಗೆ ಎಬೋಲಾದ ನಿಗೂಢತೆ ಗೊತ್ತಾಯಿತು. ಇದು ವರ್ಷಗಳವರೆಗೆ ಕಣ್ಮರೆಯಾಗಬಹುದು, ನಂತರ ಇದ್ದಕ್ಕಿದ್ದಂತೆ ಮರಳಬಹುದು.
1995: ಡಿಆರ್‌ಸಿಯ ಕಿಕ್ವಿಟ್‌ನಲ್ಲಿ ಅತ್ಯಂತ ಭೀಕರವಾಗಿ ಕಾಣಿಸಿಕೊಂಡಿತು. ಏಕಾಏಕಿ ನೂರಾರು ಜನರಿಗೆ ಸೋಂಕು ತಗುಲಿ ಅನೇಕರು ಸಾವಿಗೀಡಾದರು. ಆರೋಗ್ಯ ಸಿಬ್ಬಂದಿಗೆ ರಕ್ಷಣಾತ್ಮಕ ಸಾಧನಗಳು ಮತ್ತು ರೋಗದ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಆಸ್ಪತ್ರೆಗಳು ಆರಂಭದಲ್ಲಿ ಕಷ್ಟಪಟ್ಟವು.
2000-2001: ಉಗಾಂಡಾ ಸೋಂಕು ಹೆಚ್ಚಾಗಿ ಹರಡಿತು. ಆರೋಗ್ಯ ಕಾರ್ಯಕರ್ತರು ಕ್ವಾರಂಟೈನ್ ಕ್ರಮಗಳು ಮತ್ತು ಸಮುದಾಯ ಜಾಗೃತಿ ಅಭಿಯಾನಗಳನ್ನು ಪರಿಚಯಿಸಿದರು. ನಂತರ ಉಗಾಂಡಾ ಎಬೋಲಾ ಏಕಾಏಕಿ ಹರಡುವಿಕೆಯನ್ನು ನಿರ್ವಹಿಸುವಲ್ಲಿ ಹೆಚ್ಚಿನ ಅನುಭವ ಹೊಂದಿರುವ ದೇಶಗಳಲ್ಲಿ ಒಂದಾಯಿತು.
2001-2012: ಗ್ಯಾಬೊನ್, ಕಾಂಗೋ ಗಣರಾಜ್ಯ, ಉಗಾಂಡಾ ಮತ್ತು ಡಿಆರ್‌ಸಿಗಳಲ್ಲಿ ಏಕಾಏಕಿ ವೈರಸ್ ಕಾಣಿಸಿಕೊಂಡಿತು. 2007 ರಲ್ಲಿ ಉಗಾಂಡಾದಲ್ಲಿ ಬುಂಡಿಬುಗ್ಯೊ ಹೆಚ್ಚಿದ ಪ್ರಕರಣಗಳು.
ಕೋವಿಡ್‌ನಂತೆ ಕಾಡಿದ ಎಬೋಲಾ
2014-2016: ಗಿನಿಯಾದಲ್ಲಿ ಎಬೋಲಾ ಪ್ರಾರಂಭವಾಗಿ ಲೈಬೀರಿಯಾ ಮತ್ತು ಸಿಯೆರಾ ಲಿಯೋನ್‌ಗೆ ಹರಡಿತು. ಇದುವರೆಗೆ ದಾಖಲಾದ ಅತಿದೊಡ್ಡ ಎಬೋಲಾ ಬಿಕ್ಕಟ್ಟಾಯಿತು. ಸಾವಿರಾರು ಜನರು ಬಲಿಯಾದರು. ನಗರ ಕೇಂದ್ರಗಳಿಗೆ ವೈರಸ್ ತಲುಪಿ ವ್ಯಾಪಕವಾಗಿ ಹರಡಿತು. ವೇಗವಾಗಿ ಗಡಿಗಳನ್ನು ದಾಟಿ ವಿಶ್ವಾದ್ಯಂತ ಕಳವಳವನ್ನು ಸೃಷ್ಟಿಸಿತು. ಅಂತರರಾಷ್ಟ್ರೀಯ ಸಂಸ್ಥೆಗಳು ವೈದ್ಯಕೀಯ ತಂಡಗಳು, ಚಿಕಿತ್ಸಾ ಕೇಂದ್ರಗಳು ಮತ್ತು ತುರ್ತು ನಿಧಿಯನ್ನು ನಿಯೋಜಿಸಿದವು. ವೈರಸ್ ನಿಯಂತ್ರಣಕ್ಕೆ ಲಸಿಕೆ ಅಭಿವೃದ್ಧಿಯನ್ನು ವೇಗಗೊಳಿಸಿತು.
2018-2020: ಪೂರ್ವ ಡಿಆರ್‌ಸಿಯಲ್ಲಿ 2018ರಲ್ಲಿ ಮತ್ತೊಮ್ಮೆ ವೈರಸ್ ಕಾಣಿಸಿಕೊಂಡಿತು. ಲಸಿಕೆ ಅಭಿಯಾನಗಳು ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಇದು ಎಬೋಲಾ ನಿಯಂತ್ರಣದಲ್ಲಿ ಪ್ರಮುಖ ಸಾಧನವಾಯಿತು.
2021-2025: ಆಗಾಗ್ಗೆ ಸದ್ದು ಮಾಡಿ ಮರೆಯಾಗುತ್ತಿದ್ದ ಎಬೋಲಾ ಮತ್ತೆ ಕಾಣಿಸಿಕೊಂಡಿತು. ಗಿನಿಯಾ, ಉಗಾಂಡಾ ಮತ್ತು ಡಿಆರ್‌ಸಿಯ ವಿವಿಧ ಪ್ರಾಂತ್ಯಗಳಲ್ಲಿ ಏಕಾಏಕಿ ಕಾಣಿಸಿಕೊಂಡಿತು. ಮುನ್ನೆಚ್ಚರಿಕೆ ಕ್ರಮಗಳು ಮತ್ತು ವೇಗವಾದ ಪರೀಕ್ಷಾ ವಿಧಾನಗಳಿಂದಾಗಿ ವೈರಸ್ ಅನ್ನು ನಿಯಂತ್ರಿಸಲಾಯಿತು.
ಭಾರತದಲ್ಲಿ ಹೈಅಲರ್ಟ್
ಆಫ್ರಿಕಾ ಖಂಡದ ಕಾಂಗೋ ಮತ್ತು ಉಗಾಂಡಾದಲ್ಲಿ ಮಾರಣಾಂತಿಕ ಎಬೋಲಾ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಡಬ್ಲ್ಯೂಹೆಚ್‌ಒ ತರ್ತು ಪರಿಸ್ಥಿತಿ ಘೋಷಿಸಿದೆ. ಈ ಹಿನ್ನೆಲೆ ಭಾರತ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
* ದೇಶದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣ & ಬಂದರುಗಳಲ್ಲಿ ಹೈ-ಅಲರ್ಟ್.
* ವಿಮಾನ ನಿಲ್ದಾಣ & ಬಂದರುಗಳಲ್ಲಿ ಕಟ್ಟುನಿಟ್ಟಿನ ಸ್ಕ್ರೀನಿಂಗ್, ಕ್ವಾರಂಟೈನ್ ವ್ಯವಸ್ಥೆ.
* ರೋಗಿಗಳ ತುರ್ತು ನಿರ್ವಹಣೆ, ರೆಫರಲ್ ಪ್ರಕ್ರಿಯೆ & ಪ್ರಯೋಗಾಲಯ ಪರೀಕ್ಷೆಗಳಿಗೆ ಸಂಬಂಧಿಸಿ ಮಾರ್ಗಸೂಚಿ ಅನುಸರಿಸಲು ಸೂಚನೆ
* ಹೈ-ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರು ಇಮಿಗ್ರೇಷನ್ ಕ್ಲಿಯರೆನ್ಸ್‌ಗೂ ಮುನ್ನ ವಿಮಾನ ನಿಲ್ದಾಣದ ಹೆಲ್ತ್ ಡೆಸ್ಕ್ ಅಥವಾ ಹೆಲ್ತ್ ಆಫೀಸರ್‌ಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.
* ಆಫ್ರಿಕಾ ಪ್ರವಾಸ ಮುಗಿಸಿ ಬಂದ 21 ದಿನಗಳ ಒಳಗಾಗಿ ಜ್ವರ ಅಥವಾ ಇತರೆ ಯಾವುದೇ ಲಕ್ಷಣಗಳು ಕಂಡುಬಂದರೆ ಪ್ರಯಾಣಿಕರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ತಮ್ಮ ಪ್ರಯಾಣದ ಇತಿಹಾಸವನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು.
* ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬಂದಿದ್ದರೆ ಅಂತಹ ಪ್ರಯಾಣಿಕರು ಇಮಿಗ್ರೇಷನ್ ಪ್ರಕ್ರಿಯೆಗಿಂತ ಮುಂಚಿತವಾಗಿ ಆರೋಗ್ಯ ಅಧಿಕಾರಿಗಳಿಗೆ ಸ್ವಯಂಪ್ರೇರಿತರಾಗಿ ವರದಿ ಮಾಡಬೇಕು.
ಕರ್ನಾಟಕ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
* ಪಾಸಿಟಿವ್ ಆದ ವ್ಯಕ್ತಿಗಳಿಗೆ ಟ್ರೀಟ್‌ಮೆಂಟ್ ನೀಡೋದಕ್ಕೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ ಮತ್ತು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ ಗುರುತು.
* ಐಡಿಎಸ್‌ಪಿ ಅಡಿಯಲ್ಲಿ ತೀವ್ರ ನಿಗಾ ವ್ಯವಸ್ಥೆ ಮತ್ತು ಅನುಮಾನಾಸ್ಪದ ಪ್ರಕರಣಗಳ ಮೇಲ್ವಿಚಾರಣೆ.
* ವಿಮಾನ ನಿಲ್ದಾಣಗಳು ಮತ್ತು ಪ್ರವೇಶ ಕೇಂದ್ರದೊಂದಿಗೆ ನಿಗಾ.
* ಪ್ರತ್ಯೇಕ ಕ್ವಾರಂಟೈನ್ ಮತ್ತು ಐಸೋಲೇಷನ್ ಸೌಲಭ್ಯ, ರೆಫರಲ್ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು.
* ಆರೋಗ್ಯ ಸಿಬ್ಬಂದಿಗೆ ತರಬೇತಿ ಮತ್ತು ಸೋಂಕು ನಿಯಂತ್ರಣ ಕ್ರಮಗಳ ಬಲಪಡಿಸಬೇಕು.
* ಅಗತ್ಯ ಪಿಪಿಇ ಕಿಟ್ ಮತ್ತು ಔಷಧಿ ಸಂಗ್ರಹಕ್ಕೆ ಸಿದ್ಧತೆ.
* ತ್ವರಿತಾ ಪ್ರಕ್ರಿಯಾ ತಂಡಗಳನ್ನ ಸಜ್ಜುಗೊಳಿಸಬೇಕು.
