ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ (Hemavati Express Canal Link) ಕಾಮಗಾರಿ ವಿವಾದ ವಿಚಾರ ಈಗ ಹೈಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ತೀರ್ಪಿನ ಮೇಲೆ ಹೇಮಾವತಿ ಲಿಂಕ್ ಕಾಮಗಾರಿ ಭವಿಷ್ಯ ನಿಂತಿದೆ.
ತುಮಕೂರು ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಕುಣಿಗಲ್ ಮಾರ್ಗವಾಗಿ ರಾಮನಗರ ಜಿಲ್ಲೆಗೆ ಕೊಂಡೊಯ್ಯುವ ಯೋಜನೆ ಮರುಜೀವ ಪಡೆದುಕೊಳ್ಳುತ್ತಿದೆ. ಸಿಎಂ ಡಿ.ಕೆ ಶಿವಕುಮಾರ್ ಅವರ ಕನಸಿನ ಕೂಸಾಗಿದ್ದ ಯೋಜನೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ಯೋಜನೆ ವಿರೋಧಿಸಿ ಬೃಹತ್ ಹೋರಾಟ ನಡೆದದ್ದು ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಅಲ್ಲಿಂದ ಇಲ್ಲಿವರೆಗೂ ಒಂದು ವರ್ಷಗಳ ಕಾಲ ಕೆನಾಲ್ ಕಾಮಗಾರಿ ಸ್ಥಗಿತಗೊಂಡಿತ್ತು.

ಈಗ ಡಿಕೆ ಶಿವಕುಮಾರ್ ಸಿಎಂ ಆಗುತಿದ್ದಂತೆ ಮತ್ತೆ ಎಕ್ಸ್‌ಪ್ರೆಸ್ ಕೆನಾಲ್ ವಿಚಾರ ಗರಿಗೆದರಿದೆ. ಹೇಗಾದರೂ ಸರಿಯೇ ಎಕ್ಸ್‌ಪ್ರೆಸ್ ಕೆನಾಲ್ ಮಾಡಿಯೇ ತೀರುತ್ತೇನೆ ಎಂದು ಮುಖ್ಯಮಂತ್ರಿಗಳು ಹೊರಟಂತಿದೆ. ಮುಖ್ಯಮಂತ್ರಿಗಳ ಈ ಮಹಾದಾಸೆಗೆ ಜಿಲ್ಲೆಯ ಹಿರಿಯ ರಾಜಕೀಯ ನಾಯಕರಾದ ಡಿಸಿಎಂ ಜಿ.ಪರಮೇಶ್ವರ್, ಟಿ.ಬಿ ಜಯಚಂದ್ರ ಬೆಂಬಲವಾಗಿ ನಿಂತಿರೋದು ಜಿಲ್ಲೆಯ ರೈತರನ್ನ ಇನ್ನಷ್ಟು ಸಂಕಷ್ಟಕ್ಕೆ ದೂಕಿದೆ.
ಇನ್ನೂ ಈ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರು ಹಾಗೂ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪ್ರತಿಭಟನೆಗೂ, ರೈತರ ಕೂಗಿಗೂ ಕ್ಯಾರೇ ಅನ್ನದ ಸರ್ಕಾರದ ವಿರುದ್ಧ ರೈತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸುಮಾರು 80 ರೈತರು ಯೋಜನೆ ವಿರೋಧಿಸಿ ರಿಟ್ ಪಿಟಿಷನ್ ಹಾಕಿದ್ದಾರೆ. ಇದೀಗ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು ನಾವು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಮತ್ತೊಂದು ಕಡೆ ಹೇಮಾವತಿ ನೀರು ʻನಮ್ಮ ನೀರು ನಮ್ಮ ಹಕ್ಕು..ʼ ನಮಗೆ ಅನ್ಯಾಯ ಆಗಿದೆ ನಮ್ಮ ನೀರನ್ನ ನಾವು ಪಡೆದೆ ಪಡೆಯುತ್ತೇವೆ. ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ನವರು ಷಡ್ಯಂತ್ರ ಕೆಲಸ ಮಾಡಿದ್ರು. ರೈತರ ಜಮೀನನ್ನ ಭೂಸ್ವಾಧೀನಕ್ಕೆ ಮಾಡಲು ಮುಂದಾದಾಗ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈಗ ಕೋರ್ಟ್‌ನಲ್ಲಿ ವಾದ-ವಿವಾದಗಳು ನಡೆಯುತ್ತಿದೆ. ಕೋರ್ಟ್‌ನಿಂದ ಯಾವ ರೀತಿಯಲ್ಲಿ ತೀರ್ಪು ಬರುತ್ತೆ ಕಾದು ನೋಡೋಣ ಎಂದು ಕುಣಿಗಲ್ ಶಾಸಕ ಡಾ ರಂಗನಾಥ್ ಹೇಳಿದ್ದಾರೆ.
