ತುತ್ತು ಅನ್ನಕ್ಕಾಗಿ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅಲೆದಾಟ-ಯಾವುದು ಸತ್ಯ? ಯಾವುದು ಸುಳ್ಳು?

ಕಾರವಾರ/ಹುಬ್ಬಳ್ಳಿ/ಬೆಳಗಾವಿ: ತೆರೆಯ ಮೇಲೆ ಜನರನ್ನು ರಂಜಿಸಿ ಅದೆಷ್ಟೋ ಪಾತ್ರಕ್ಕೆ ಜೀವ ತುಂಬಿದ ಮೇರು ಕಲಾವಿದ ಸದಾಶಿವ ಬ್ರಹ್ಮಾವರ್ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬೀದಿ ಬೀದಿ ಅಲೆದಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಕುಮಟಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾಶಿವ ಅವರು ನಾನು ಮನೆಯಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು.

ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು. ನನ್ನನ್ನು ಮಗ ಮತ್ತು ಸೊಸೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಬೈಲಹೊಂಗಲದಲ್ಲಿ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಕುಮಟಾದಲ್ಲಿ ಹೇಳಿದ್ದೇನು?:
ತನ್ನ ಅಳಿಯ ಹಾಗೂ ಮಗಳ ವರ್ತನೆಯಿಂದ ಬೇಸತ್ತ ಕನ್ನಡದ ಪೋಷಕ ನಟ ಸದಾಶಿವ ಬ್ರಹ್ಮಾವರ್ ತನ್ನ ಕುಟುಂಬವನ್ನು ತೊರೆದು ಹೊರಬಂದಿದ್ದು ಕುಮಟಾದ ನಗರದಲ್ಲಿ ಕೈಯಲ್ಲಿ ಹಣವಿಲ್ಲದೇ ಒಂದು ತುತ್ತಿಗೂ ಪರದಾಡುತ್ತಾ ಅಲೆಯುತ್ತಿದ್ದರು. ಸದಾಶಿವ ಅವರನ್ನು ಗುರುತಿಸಿದ ಕೆಲವರು ಸ್ಥಳೀಯರು ಕುಮಟಾದ ಹೋಟೆಲ್ ನಲ್ಲಿ ಊಟ ಹಾಕಿಸಿ ನೆಡೆದಾಡಲೂ ಕಷ್ಟಪಡುತಿದ್ದ ಇವರನ್ನ ವಿಚಾರಿಸಿದಾಗ ಮೊದಲು ಏನನ್ನೂ ಹೇಳಲಿಲ್ಲ. ಆದ್ರೆ ನಂತರ ಮನದಲ್ಲಿದ್ದ ನೋವು ಹಾಗು ಕೆಲವು ವಿಷಯಗಳನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದರು.

ಸ್ಥಳೀಯರು ಗೂಡು ಸೇರಿಸುವ ಪ್ರಯತ್ನ ಮಾಡಿದರಾದರೂ ಅದಕ್ಕೆ ಒಪ್ಪದ ಅವರು ನನ್ನ ಮನಸ್ಸಿಗೆ ನೋವಾಗಿದೆ. ಹಾಗಾಗಿ ನೋವು ಮರೆಯುವವರೆಗೆ ನಾನೆಲ್ಲೂ ಹೋಗಲಾರೆ. ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ ಹೋಗುವುದಾಗಿ ತಿಳಿಸಿದ್ದು ಅವರ ಮಾತಿನಂತೆ ಹುಬ್ಬಳ್ಳಿಗೆ ಸ್ಥಳೀಯರೇ ಟಿಕೆಟ್ ಮಾಡಿಸಿ ಕಳುಹಿಸಿ ಕೊಟ್ಟಿದ್ದರು.

ಅಜ್ಜ ಎಲ್ಲವನ್ನು ಮರೆತು ಬಿಡ್ತಾರೆ:
ಅಜ್ಜನನ್ನು ಯಾರು ಮನೆಯಿಂದ ಹೊರ ಹಾಕಿಲ್ಲ. ಅವರು ತಾವಾಗಿಯೇ ಮನೆಯಿಂದ ಹೊರ ಹೋಗಿದ್ದಾರೆ. ಸದ್ಯ ಅವರಿಗೆ 90 ವರ್ಷ ವಯಸ್ಸಾಗಿದ್ದು, ನಾವುಗಳು ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದೇವೆ. ಆದರೂ ಮನೆಯಿಂದ ಹೊರಗಡೆ ಇದ್ದಿದ್ದಾರೆ. ಆದರೆ ನಿಮಗೆ ಸದ್ಯ ಅಜ್ಜ ಬೈಲಹೊಂಗಲದಲ್ಲಿ ಸಿಗುತ್ತಾರೆ. ವಯಸ್ಸಾಗಿದ್ದರಿಂದ ಅವರಲ್ಲಿ ಮರೆವಿನ ಕಾಯಿಲೆಯಿದ್ದು, ಎಲ್ಲವನ್ನು ಮರೆತು ಬಿಡುತ್ತಾರೆ.ಅವರು ಹೇಳಿರುವ ಮಾತುಗಳೇ ಅವರಿಗೆ ನೆನಪಿನಲ್ಲಿರುವದಿಲ್ಲ ಎಂದು ಸದಾಶಿವ ಅವರ ಮೊಮ್ಮಗಳು ಪ್ರೀತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಈ ರೀತಿಯಾಗಿ ಕುಮಟಾದಲ್ಲಿ ಹೇಳಿಕೆ ನೀಡಿದ ಸದಾಶಿವ ಅವರು ಇದ್ದಕ್ಕಿದಂತೆ ಬೆಳಗಾವಿಯ ಬೈಲಹೊಂಗಲದಲ್ಲಿ ನನ್ನ ಮಗ ಮತ್ತು ಸೊಸೆ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.

ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರ ನಟನೆಯ ಕೆಲವು ಸಿನಿಮಾದ ವಿಡಿಯೋಗಳನ್ನು ಈ ಕೆಳಗೆ ನೀಡಲಾಗಿದೆ 

Leave a Reply

Your email address will not be published. Required fields are marked *