ಕರಾಕಾಸ್: ವೆನೆಜುವೆಲಾದಲ್ಲಿ(Venezuela) ಸಂಭವಿಸಿದ ಪ್ರಬಲ ಅವಳಿ ಭೂಕಂಪ (Twin Earthquake) ದೇಶವನ್ನೇ ನಲುಗಿಸಿದೆ. ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 589ಕ್ಕೆ ಏರಿಕೆಯಾಗಿದ್ದು, 4,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಜೂನ್ 24ರಂದು ವೆನೆಜುವೆಲಾದ ಕೆರಿಬಿಯನ್ ಕರಾವಳಿ ಸಮೀಪ 7.2 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದವು. ಈ ಭೂಕಂಪದಿಂದ ಹಲವು ಕಟ್ಟಡಗಳು ಕುಸಿದಿದ್ದು, ವ್ಯಾಪಕ ಹಾನಿಯಾಗಿದೆ. ಭೂಕಂಪದಿಂದ ವೆನೆಜುವೆಲಾದ ಪ್ರಮುಖ ವಿಮಾನ ನಿಲ್ದಾಣಕ್ಕೂ ಹಾನಿಯಾಗಿದೆ. ಇದರಿಂದ ಪರಿಹಾರ ಸಾಮಗ್ರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಲುಪಿಸಲು ತೊಂದರೆ ಉಂಟಾಗಿದೆ.
ರಾಜಧಾನಿ ಕರಾಕಾಸ್‌ನಲ್ಲೂ ಜನರು ಭೂಕಂಪದ ಆತಂಕದಿಂದ ಮನೆಗಳನ್ನು ಬಿಟ್ಟು ರಸ್ತೆ ಹಾಗೂ ಕಾರುಗಳಲ್ಲೇ ರಾತ್ರಿ ಕಳೆದಿದ್ದಾರೆ. ಈ ಕಂಪನದ ಪರಿಣಾಮ ನೆರೆಯ ಕೊಲಂಬಿಯಾ ಮತ್ತು ಬ್ರೆಜಿಲ್‌ನ ಕೆಲವು ಪ್ರದೇಶಗಳಲ್ಲೂ ಕಂಡುಬಂದಿದೆ.
ವೆನೆಜುವೆಲಾದಲ್ಲಿ ಕಳೆದ 126 ವರ್ಷಗಳಲ್ಲೇ ಇದು ಅತಿ ಪ್ರಬಲ ಭೂಕಂಪ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1900ರ ಬಳಿಕ ಇಷ್ಟು ತೀವ್ರ ಭೂಕಂಪ ದೇಶದಲ್ಲಿ ದಾಖಲಾಗಿರಲಿಲ್ಲ. 1997ರಲ್ಲಿ ಸಂಭವಿಸಿದ್ದ 6.9 ತೀವ್ರತೆಯ ಭೂಕಂಪದಲ್ಲಿ 73 ಮಂದಿ ಮೃತಪಟ್ಟಿದ್ದರು.ಇದನ್ನೂ ಓದಿ: ವೆನೆಜುವೆಲಾ ಭೂಕಂಪಕ್ಕೆ ಪ್ರಧಾನಿ ದಿಗ್ಭ್ರಮೆ – ಭಾರತದಿಂದ ಅಗತ್ಯ ನೆರವು ನೀಡೋದಾಗಿ ಮೋದಿ ಘೋಷಣೆ
ಭೂಕಂಪದಿಂದ ಸಂಕಷ್ಟಕ್ಕೊಳಗಾದವರಿಗೆ ಹಲವು ದೇಶಗಳು ನೆರವಿನ ಹಸ್ತ ಚಾಚಿವೆ. ಸ್ವಿಟ್ಜರ್‌ಲ್ಯಾಂಡ್, ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಮತ್ತು ಮೆಕ್ಸಿಕೊ ರಕ್ಷಣಾ ತಂಡಗಳನ್ನು ಕಳುಹಿಸಿವೆ.
ಭಾರತ, ಚೀನಾ, ಬ್ರೆಜಿಲ್ ಮತ್ತು ಇರಾನ್ ಕೂಡ ನೆರವು ಘೋಷಿಸಿವೆ. ಅಮೆರಿಕ 150 ಮಿಲಿಯನ್ ಡಾಲರ್ ನೆರವು ನೀಡಲು ಮುಂದಾಗಿದ್ದು, ವಿಶ್ವಸಂಸ್ಥೆಯೂ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.ಇದನ್ನೂ ಓದಿ: ವೆನೆಜುವೆಲಾದಲ್ಲಿ 1 ನಿಮಿಷದ ಅಂತರದಲ್ಲಿ 7.2, 7.5 ತೀವ್ರತೆಯ ಭೂಕಂಪ – ಕಟ್ಟಡಗಳು ಕುಸಿತ, ಸಾವುನೋವಿನ ಶಂಕೆ
