ಚೆನ್ನೈ: ತಮಿಳುನಾಡಿನಲ್ಲಿ (Tamil Nadu) ಸರ್ಕಾರ ರಚನೆಗೆ ಬಹುಮತಕ್ಕೆ ನಡೆಯುತ್ತಿದ್ದ ಕಸರತ್ತಿಗೆ ಕೊನೆಗೂ ತೆರೆ ಬಿದ್ದಿದೆ. ಟಿವಿಕೆಗೆ (TVK) ವಿಸಿಕೆ ಬೇಷರತ್ ಬೆಂಬಲ ಘೋಷಿಸಿದೆ. ಆ ಮೂಲಕ ವಿಜಯ್‌ಗೆ (Vijay) 118 ಶಾಸಕರ ಬೆಂಬಲ ಸಿಕ್ಕಿದೆ.
ವಿಸಿಕೆ (VCK) ಇಬ್ಬರು ಶಾಸಕರು ಟಿವಿಕೆಗೆ ಬೆಂಬಲ ಪತ್ರ ನೀಡಿದ್ದಾರೆ. ಸರಳ ಬಹುಮತ ಬೆನ್ನಲ್ಲೇ ವಿಜಯ್ ಚೆನ್ನೈ ನಿವಾಸದಿಂದ ನಿರ್ಗಮಿಸಿದ್ದಾರೆ. ಇಂದು ಸಂಜೆ ರಾಜ್ಯಪಾಲ ಅರ್ಲೇಕರ್ ಅಲಭ್ಯರಾಗಿದ್ದಾರೆ. ಸಂಜೆ 7:10ಕ್ಕೆ ರಾಜ್ಯಪಾಲರು ಕೇರಳದ ತಿರುವನಂತಪುರಕ್ಕೆ ತೆರಳಲಿದ್ದಾರೆ. ಹೀಗಾಗಿ, ಅದಕ್ಕೂ ಮುನ್ನ ರಾಜ್ಯಪಾಲರ ಭೇಟಿಗೆ ವಿಜಯ್ ಮುಂದಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿಎಂ ಪಟ್ಟಕ್ಕೇರಲು ವಿಜಯ್‌ಗೆ ವಿಘ್ನ – ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ TVK ಕಾರ್ಯಕರ್ತ
ವಿಸಿಕೆ ಬೆಂಬಲವು ಟಿವಿಕೆ ಬಹುಮತಕ್ಕೆ ನಿರ್ಣಾಯಕವಾಗಿದೆ. ವಿಜಯ್ ನೇತೃತ್ವದ ಒಕ್ಕೂಟವು ಈಗಾಗಲೇ 116 ಚುನಾಯಿತ ಶಾಸಕರ ಬೆಂಬಲವನ್ನು ಹೊಂದಿದ್ದು, ಇದರಲ್ಲಿ ಕಾಂಗ್ರೆಸ್‌ನ ಐದು ಮತ್ತು ಎಡ ಪಕ್ಷಗಳ ನಾಲ್ಕು ಸ್ಥಾನಗಳು ಸೇರಿವೆ. ವಿಸಿಕೆಯ ಎರಡು ಸ್ಥಾನಗಳನ್ನು ಸೇರಿಸಿದಾಗ, ಅದರ ಬಲವು 118 ಕ್ಕೆ ಏರುತ್ತದೆ. ಇದು ರಾಜ್ಯದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರ ಸಂಖ್ಯೆಯಾಗಿದೆ.
ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಅವರಿಗೆ ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಬೆಂಬಲ ಪತ್ರ ನೀಡಿದ್ದಾರೆ. ವಿಸಿಕೆಯ ಇಬ್ಬರು ಶಾಸಕರ ಬೆಂಬಲವನ್ನು ಟಿವಿಕೆಗೆ ವ್ಯಕ್ತಪಡಿಸಲಾಗಿದೆ. ಈಗ ದಳಪತಿ ವಿಜಯ್ ಪಕ್ಷಕ್ಕೆ 118 ಶಾಸಕರ ಸರಳ ಬಹುಮತ ಸಿಕ್ಕಿದೆ. ರಾಜ್ಯಪಾಲರಿಗೂ ವಿಸಿಕೆಯಿಂದ ಬೆಂಬಲ ಪತ್ರ ರವಾನಿಸಲಾಗಿದೆ. ಇದನ್ನೂ ಓದಿ: ವಿಜಯ್ ವಿರುದ್ಧ ಕುದುರೆ ವ್ಯಾಪಾರ ಆರೋಪ – ಶಾಸಕ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೋ ಬಿಡುಗಡೆ ಮಾಡಿದ ಟಿವಿಕೆ
ವಿಸಿಕೆ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಟಿವಿಕೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ 5.45ಕ್ಕೆ ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗುವ ಸಾಧ್ಯತೆ ಇದೆ. ವಿಸಿಕೆಯ ತ್ರಿವೆಂಡ್ರಂ ಶಾಸಕ ವನ್ನಿ ಅರಸು, ಮನ್ನಾರ್‌ಕೊಯಿಲ್ ಶಾಸಕ ಜ್ಯೋತಿಮಣಿಯಿಂದ ಸಹಿ ಹಾಕಿದ ಬೆಂಬಲ ಪತ್ರ ರವಾನಿಸಲಾಗಿದೆ.

