ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ರಾಮನಗರದ ಐಜೂರು ವೃತ್ತದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.
ತಮಿಳುನಾಡು ಸರ್ಕಾರದ (TamilNadu Government) ವಿರುದ್ಧ ಆಕ್ರೋಶ ಹೊರಹಾಕಿದ ವಾಟಾಳ್ ನಾಗರಾಜ್, ಕಾವೇರಿ ವಿಚಾರದಲ್ಲಿ ತಮಿಳುನಾಡು ಪದೇಪದೇ ಕ್ಯಾತೆ ತೆಗೆಯುತ್ತಾ ಕಿರುಕುಳ ನೀಡುತ್ತಿದೆ. ಬೆಂಗಳೂರಿನ ಕುಡಿಯುವ ನೀರಿನ ದಾಹ ತೀರ್ಸಲು ಮೇಕೆದಾಟು ಯೋಜನೆ ತಕ್ಷಣವೇ ಆಗಬೇಕು. ಈ ಯೋಜನೆಗೆ ಯಾರ ಅಪ್ಪಣೆಯೂ ಬೇಕಿಲ್ಲ, ಸರ್ಕಾರ ಕಾವೇರಿ ವಿಚಾರದಲ್ಲಿ ಹುಡುಗಾಟ ಆಡಬಾರದು ಎಂದು ಎಚ್ಚರಿಸಿದ್ದಾರೆ.


ಮೇಕೆದಾಟು ಜಾರಿ ಮತ್ತು ಬಿಡದಿ ಟೌನ್ ಶಿಪ್ ಕೈಬಿಡುವಂತೆ ಆಗ್ರಹಿಸಿ ಆಗಸ್ಟ್ 13 ರಂದು ಸಮಗ್ರ ಕರ್ನಾಟಕ ಬಂದ್ ಮಾಡಲಾಗುವುದು. ಬಂದ್ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಆದರೆ ಡಿ.ಕೆ ಶಿವಕುಮಾರ್ ಅವರು ನಮ್ಮೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಹೀಗಾಗಿ ಬಂದ್ ಕರೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಬಂದ್‌ಗೂ ಮುನ್ನ ಆಗಸ್ಟ್ 10ರ ಸೋಮವಾರದಂದು ಅತ್ತಿಬೆಲೆ ಗಡಿಯನ್ನ ಬಂದ್ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

