– ‘ಕೈ’, ಕಮಲ ಪಾಳಯದಲ್ಲಿ ಟಿಕೆಟ್ ಕಗ್ಗಂಟು
– ಅನಂತಕುಮಾರ್ ಹೆಗಡೆಗೆ ಕೈಕೊಟ್ಟು ಹೊಸಬರಿಗೆ ಬಿಜೆಪಿ ಮಣೆ?
ಉತ್ತರ ಕನ್ನಡ: ಹಿಂದುತ್ವವನ್ನೇ ಉಸಿರಾಡುವ ಬಿಜೆಪಿಯ (BJP) ಭದ್ರ ನೆಲೆ ಉತ್ತರ ಕನ್ನಡ (Uttara Kannada Lok Sabha). ಮುಂಬರುವ ಲೋಕಸಭಾ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಬಿಜೆಪಿ ಭದ್ರಕೋಟೆ ಎನಿಸಿರುವ ಉತ್ತರ ಕನ್ನಡ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದರೆ 1991 ರವರೆಗೆ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕಾಲಾಂತರದಲ್ಲಿ ಬಿಜೆಪಿ ತೆಕ್ಕೆಗೆ ಬಂತು. ಈಗಲೂ ಕ್ಷೇತ್ರ ಕಮಲದ ಹಿಡಿತದಲ್ಲೇ ಇದೆ. ಇದನ್ನು ಭೇದಿಸಲು ಕಾಂಗ್ರೆಸ್ (Congress) ರಣತಂತ್ರ ರೂಪಿಸಿದೆ.
Advertisement
1999 ರ ಚುನಾವಣೆ ನಂತರ ಈ ಕ್ಷೇತ್ರ ಕಾಂಗ್ರೆಸ್ ಹಿಡಿತದಿಂದ ತಪ್ಪಿತು. ಕಳೆದ ಎರಡು ದಶಕಗಳಿಂದ ಬಿಜೆಪಿ ಹಿಡಿತದಲ್ಲಿದೆ. 1996 ರಿಂದ ಸತತ ಏಳು ಬಾರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಂತಕುಮಾರ್ ಹೆಗಡೆ (Anantkumar Hegde) ಮತ್ತೆ ಕಣಕ್ಕಿಳಿಯುವರೆ ಅಥವಾ ಹೊಸಬರಿಗೆ ಅವಕಾಶ ಸಿಗುವುದೇ ಎಂಬ ಕುತೂಹಲ ಮೂಡಿದೆ. 1999 ರ ಚುನಾವಣೆಯಲ್ಲಿ ಮಾತ್ರ ಹೆಗಡೆ ಕಾಂಗ್ರೆಸ್‌ನ ಮಾರ್ಗರೇಟ್ ಆಳ್ವಾ ವಿರುದ್ಧ ಸೋತಿದ್ದರು. ಕಳೆದ ಎರಡು ದಶಕಗಳಿಂದ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಇದನ್ನೂ ಓದಿ: Haveri-Gadag Lok Sabha 2024: ಬಿಜೆಪಿ v/s ಕಾಂಗ್ರೆಸ್ – ಗೆಲುವು ಯಾರಿಗೆ?
Advertisement
Advertisement
ಕ್ಷೇತ್ರ ಪರಿಚಯ
ಈ ಹಿಂದೆ ಕೆನರಾ ಲೋಕಸಭಾ ಕ್ಷೇತ್ರವಾಗಿತ್ತು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ಸಂಸದೀಯ ಕ್ಷೇತ್ರಗಳ ವಿಂಗಡಣೆಯ ನಂತರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವಾಗಿ ಮರುನಾಮಕರಣಗೊಂಡಿತು. ಪುನರ್ ವಿಂಗಡಣೆ ನಂತರ ಕ್ಷೇತ್ರಕ್ಕೆ ನಾಲ್ಕನೇ ಚುನಾವಣೆ ಇದಾಗಿದೆ. 1951, 1957, 1962, 1971, 1977, 1980, 1984, 1989, 1991, 1999 ರಲ್ಲಿ ಒಟ್ಟು 10 ಬಾರಿ ಕಾಂಗ್ರೆಸ್ ಲೋಕಸಭೆ ಚುನಾವಣೆ ಗೆದ್ದರೆ, ಆರು ಬಾರಿ ಬಿಜೆಪಿ ಗೆದ್ದಿದೆ. 1967 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಾಹಿತಿ, ಚುಟುಕು ಬ್ರಹ್ಮ ದಿನಕರ ದೇಸಾಯಿ ಗೆದ್ದಿದ್ದರು. ಇನ್ನು ಉತ್ತರ ಕನ್ನಡ ಜಿಲ್ಲೆ ಸಾಹಿತಿಗಳು, ಸಿನಿಮಾ ನಟರು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು ಸಹ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋತ ಇತಿಹಾಸ ಹೊಂದಿದೆ. 1951, 1971 ರಲ್ಲಿ ಎಸ್‌ಪಿ ಪಕ್ಷದಿಂದ ಸಾಹಿತಿ ದಿನಕರ ದೇಸಾಯಿ, 1977 ರಲ್ಲಿ ಬಿಎಲ್‌ಡಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, 1989 ರಲ್ಲಿ ಜನತಾ ದಳದಿಂದ ಸಿನಿಮಾ ನಟ ಅನಂತನಾಗ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ್ ಕಾರಂತ್ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು.
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?
ಒಟ್ಟು ಮತದಾರರು
ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 15,35,047 ಇದೆ. ಪುರುಷರು – 7,78,538 ಹಾಗೂ ಮಹಿಳಾ ಮತದಾರರ ಸಂಖ್ಯೆ – 7,56,483 ಇದೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸದಾಗದಷ್ಟು ಕುಸಿತ ಕಂಡಿದ್ದ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಗೆ ಬೆಂಬಲ ನೀಡಿತ್ತು. ಆದರೂ ಬಿಜೆಪಿಯ ಅನಂತಕುಮಾರ್ ಹೆಗಡೆ ನಾಲ್ಕು ಲಕ್ಷಕ್ಕೂ ಅಧಿಕ ಅಂತರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರನ್ನು ಸೋಲಿಸಿ ಆರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. 4,79,649 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಗಡೆ ಪರಾಭವಗೊಳಿಸಿದ್ದರು.
27 ವರ್ಷಗಳ ಬಳಿಕ ಹೊಸಬರಿಗೆ ಬಿಜೆಪಿ ಟಿಕೆಟ್?
1996 ರಿಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅನಂತಕುಮಾರ್ ಹೆಗಡೆ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಪಕ್ಷ ಹೊಸಬರಿಗೆ ಮಣೆ ಹಾಕುತ್ತಾ ಎಂಬ ಪ್ರಶ್ನೆ ಮೂಡಿದೆ. ಹಲವು ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಘೋಷಿಸಿರುವ ಬಿಜೆಪಿ ಉತ್ತರ ಕನ್ನಡ ಸೇರಿ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹೈಕಮಾಂಡ್ ಈ ನಡೆ ಕುತೂಹಲ ಮೂಡಿಸಿದೆ. ಕಳೆದ ಅವಧಿ ಆರಂಭದಲ್ಲೇ ಇದು ಕೊನೆ ಚುನಾವಣೆ ಎಂದು ಹೆಗಡೆ ಹೇಳಿದ್ದರು. ಅದಾದ ಬಳಿಕ ಮೂರ್ನಾಲ್ಕು ವರ್ಷ ಅನಾರೋಗ್ಯ ಹಾಗೂ ಇತರೆ ಕಾರಣಗಳಿಂದ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಸ್ಥಳೀಯರಲ್ಲಿ ನಾಯಕನ ವಿರುದ್ಧ ಅಸಮಾಧಾನವಿದೆ. ಈಚೆಗೆ ಸಂವಿಧಾನ ಬದಲಾಯಿಸುವ ಹೆಗಡೆ ಮಾತು ದೇಶ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ಚುನಾವಣೆ ಹೊತ್ತಲ್ಲೇ ಸಂಸದನ ಈ ಮಾತಿನಿಂದ ಮುಜುಗರಕ್ಕೊಳಗಾದ ಪಕ್ಷವು ಹೆಗಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಸಂಸದನ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತು. ಈ ಎಲ್ಲಾ ಕಾರಣಗಳಿಂದ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ. ಇದನ್ನೂ ಓದಿ: Davanagere Lok Sabha 2024: ಬೆಣ್ಣೆ ನಗರಿನ ಕುಟುಂಬದ ಭದ್ರಕೋಟೆ ಮಾಡ್ತಾರಾ ಇಲ್ಲ ‘ಕೈ’ ಹಿಡೀತಾರಾ ಜನ?
ಕಾಂಗ್ರೆಸ್ ಲೆಕ್ಕಾಚಾರವೇನು?
ಸರ್ಕಾರದ ಗ್ಯಾರಂಟಿ ಯೋಜನೆಗಳು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಶಾಸಕರ ಗೆಲುವಿನಿಂದಾಗಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್ ಭರವಸೆ ಇಟ್ಟುಕೊಂಡಿದೆ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಟಫ್ ಫೈಟ್ ಕೊಡುವಂತಹ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ.
ವಿಧಾನಸಭಾ ಕ್ಷೇತ್ರವಾರು ಪಕ್ಷ/ಗೆದ್ದ ಅಭ್ಯರ್ಥಿಗಳ ವಿವರ
ಹಳಿಯಾಳ – ಕಾಂಗ್ರೆಸ್ – ಆರ್.ವಿ.ದೇಶಪಾಂಡೆ
ಕಾರವಾರ – ಕಾಂಗ್ರೆಸ್ – ಸತೀಶ ಸೈಲ್
ಕುಮಟಾ – ಬಿಜೆಪಿ – ದಿನಕರ ಶೆಟ್ಟಿ
ಭಟ್ಕಳ – ಕಾಂಗ್ರೆಸ್ – ಮಂಕಾಳ ವೈದ್ಯ
ಶಿರಸಿ – ಕಾಂಗ್ರೆಸ್ – ಭೀಮಣ್ಣ ನಾಯ್ಕ
ಯಲ್ಲಾಪುರ – ಬಿಜೆಪಿ – ಶಿವರಾಮ ಹೆಬ್ಬಾರ್
ಕಿತ್ತೂರು – ಕಾಂಗ್ರೆಸ್ – ಬಾಬಾ ಸಾಹೇಬ್ ಪಾಟೀಲ್
ಖಾನಾಪುರ – ಬಿಜೆಪಿ – ವಿಠ್ಠಲ ಹಳಗೇಕರ
ಜಾತಿವಾರು ಲೆಕ್ಕಾಚಾರ
ನಾಮಧಾರಿಗಳು – 1,94,032
ಬ್ರಾಹ್ಮಣರು – 1,60,413
ಮೀನುಗಾರರು – 1,30,100
ಕೊಂಕಣ ಮರಾಠ – 90,406
ಲಿಂಗಾಯತರು – 65,000
ಮುಸ್ಲಿಂ – 1,32,908
ಹಾಲಕ್ಕಿ/ಒಕ್ಕಲಿಗರು – 1,21,804
ಎಸ್.ಸಿ/ಎಸ್.ಟಿ – 80,719
ಇತರೆ – 5,59,665