ಇಂಪಾಲ: ಮಣಿಪುರದಲ್ಲಿ (Manipur) ಮೇ 13 ರಂದು ನಡೆದ ಕುಕಿ-ನಾಗಾ ಜನಾಂಗದ ನಡುವಿನ ಘರ್ಷಣೆಯ ವೇಳೆ ಅಪಹರಣಕ್ಕೊಳಗಾಗಿದ್ದ ಆರು ಜನರ ಶವ ಇಂದು (ಜೂ.10) ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಹರಣಕ್ಕೊಳಗಾದವರಿಗಾಗಿ ಮಣಿಪುರ ಪೊಲೀಸ್, ಸಿಆರ್‌ಪಿಎಫ್, ಅಸ್ಸಾಂ ರೈಫಲ್ಸ್‌ನ ಸುಮಾರು 450 ಸಿಬ್ಬಂದಿ, ಸ್ನಿಫರ್ ಶ್ವಾನಗಳು ಮತ್ತು ವಿಧಿವಿಜ್ಞಾನ ತಂಡಗಳ ಸಹಾಯದಿಂದ ಸುಮಾರು 24 ಗಂಟೆಗಳ ಕಾಲ ನಿರಂತರ ಶೋಧ ಕಾರ್ಯಾಚರಣೆ ವೇಳೆ ಶವಗಳು ಪತ್ತೆಯಾಗಿವೆ.
ಮಣಿಪುರದ ಬೆಟ್ಟದ ಜಿಲ್ಲೆಗಳಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವಿನ ಉದ್ವಿಗ್ನತೆಯಲ್ಲಿ ಮೂವರು ಕುಕಿ ಚರ್ಚ್ ನಾಯಕರು ಸಾವನ್ನಪ್ಪಿದ್ದರು. ಅಲ್ಲದೇ ಇತರ ಐವರು ಗಾಯಗೊಂಡಿದ್ದರು. ಇದಾದ ನಂತರ ಭುಗಿಲೆದ್ದ ಹಿಂಸಾಚಾರದ ಸಮಯದಲ್ಲಿ ಅಪಹರಿಸಲ್ಪಟ್ಟವರಲ್ಲಿ ಈ ಆರು ಮಂದಿ ಸೇರಿದ್ದಾರೆ ಎಂದು ಹೇಳಲಾಗಿದೆ.
ಅದೇ ಅವಧಿಯಲ್ಲಿ ಅಪಹರಿಸಲ್ಪಟ್ಟಿದ್ದರು ಎಂದು ಹೇಳಲಾದ 14 ಕುಕಿ ಒತ್ತೆಯಾಳುಗಳನ್ನು ನಾಗಾ ಗುಂಪುಗಳು ಬಿಡುಗಡೆ ಮಾಡಿವೆ ಎಂದು ಯುನೈಟೆಡ್ ನಾಗಾ ಕೌನ್ಸಿಲ್ ದೃಢಪಡಿಸಿದೆ. ಇದಾದ ಒಂದು ದಿನದ ನಂತರ ಈ ಬೆಳವಣಿಗೆಯಾಗಿದೆ.
ಕುಕಿ ಮತ್ತು ನಾಗಾ ಸಮುದಾಯಗಳ ಕನಿಷ್ಠ 48 ನಾಗರಿಕರನ್ನು ಕಾಂಗ್‌ಪೋಕ್ಪಿ ಮತ್ತು ಸೇನಾಪತಿ ಜಿಲ್ಲೆಗಳಲ್ಲಿ ಸಶಸ್ತ್ರ ಗುಂಪುಗಳು ಒತ್ತೆಯಾಳಾಗಿ ಇರಿಸಿಕೊಂಡಿವೆ ಎಂದು ವರದಿಯಾಗಿದೆ. ಮೇ 15 ರಂದು, ಅಪಹರಿಸಲ್ಪಟ್ಟವರಲ್ಲಿ 28 ಜನರನ್ನು ರಕ್ಷಿಸಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.
