ಲಕ್ನೋ: ಪ್ರೀತಿಸಿ ಮದುವೆಯಾದ (Love Marriage) ಪತಿಯನ್ನು ಬಿಟ್ಟು ಬರಲು ನಿರಾಕರಿಸಿದ್ದಕ್ಕೆ ಆಕೆಯ ಪೋಷಕರೇ ಪೊಲೀಸ್ ಠಾಣೆಯ ಆವರಣದಲ್ಲಿ ಮಗಳನ್ನು ಚಾಕು ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಶಿವಾನಿ (19) ಕೊಲೆಯಾದ ದುರ್ದೈವಿ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಶಿವಾನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಕಳೆದ ಮೇ 18ರಂದು ಶಿವಾನಿ ಮನೆ ಬಿಟ್ಟು ಬಂದು ದೇವಾಸ್ಥಾನದಲ್ಲಿ ಲಲಿತ್ ವರ್ಮಾ ಎನ್ನುವ ಯುವಕನೊಂದಿಗೆ ಮದುವೆಯಾಗಿದ್ದರು. ಬಳಿಕ ರಿಜಿಸ್ಟರ್ ಮ್ಯಾರೇಜ್ ಕೂಡ ಆಗಿತ್ತು. ಆದರೆ, ಶಿವಾನಿ ಪೋಷಕರು ಲಲಿತ್ ವರ್ಮಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದರು. ಕಳೆದ ಶುಕ್ರವಾರ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ದಂಪತಿಯನ್ನು ಬಂಧಿಸಿದ್ದ ಬಾಂದಾ ಪೊಲೀಸರು ವಿಚಾರಣೆಗಾಗಿ ಠಾಣೆಗಾಗಿ ಕರೆತಂದಿದ್ದರು. ಇದನ್ನೂ ಓದಿ: ಪರೀಕ್ಷಾ ಕೇಂದ್ರಗಳಿಗೆ ತೆರಳಲು ರೈಲು ಕೊರತೆ; ರೈಲು ತಡೆದು ಪೊಲೀಸ್ ಆಕಾಂಕ್ಷಿಗಳಿಂದ ಕಲ್ಲು ತೂರಾಟ
ವಿಚಾರಣೆ ವೇಳೆ ಶಿವಾನಿ ಮತ್ತು ಲಲಿತ್ ತಾವಿಬ್ಬರೂ ತಮ್ಮ ಸ್ವ-ಇಚ್ಛೆಯಿಂದ ಮದುವೆಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಲ್ಲದೆ, ಮದುವೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕೂಡ ಸಲ್ಲಿಸಿದ್ದರು. ಅಷ್ಟರಲ್ಲೇ ಎರಡೂ ಕುಟುಂಬಗಳ ಸದಸ್ಯರು ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಶಿವಾನಿಗೆ ತಮ್ಮ ಪೋಷಕರು ಮರಳಿ ಮನೆಗೆ ಬರುವಂತೆ ಒತ್ತಾಯಿಸಿದ್ದಾರೆ. ಆದರೆ ಶಿವನಿ ಇದಕ್ಕೊಪ್ಪದೇ ಪತಿಯ ಜೊತೆಗಿರುವುದಾಗಿ ಪಟ್ಟು ಹಿಡಿದಿದ್ದಾಳೆ.
ಈ ವೇಳೆ ಶಿವಾನಿ ಮತ್ತು ಆಕೆಯ ಪೋಷಕರ ನಡುವೆ ವಾಗ್ವಾದ ನಡೆದಿದೆ. ಆಕೆಯ ತಾಯಿ ಮಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದಾಳೆ. ಈ ವೇಳೆ ಆಕೆಯ ತಂದೆ ಚಾಕುವಿನಿಂದ ಇರಿದಿದ್ದಾರೆ. ದಾಳಿಯಿಂದ ಶಿವಾನಿ ಕೈ ಮತ್ತು ಅಂಗೈಗೆ ತೀವ್ರವಾದ ಗಾಯಗೊಂಡಿದ್ದವು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: Dehradun violence | ಬಿಜೆಪಿ ಮುಖಂಡನ ಹತ್ಯೆಯಿಂದ ಕೆರಳಿದ ಹಿಂದೂ ಸಂಘಟನೆಗಳು – 25 ಮಂದಿ ವಿರುದ್ಧ FIR
ಘಟನೆಯ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೊಲೆಗೈದ ಶಿವಾನಿಯ ತಂದೆಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಬಾಂದಾ ಎಸ್ಪಿ ಪಲಾಶ್ ಬನ್ಸಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

