Connect with us

Chikkaballapur

ಜಸ್ಟ್ 10 ರೂ. ಖರ್ಚು ಮಾಡಿ, ಲಕ್ಷ ಲಕ್ಷ ಹಣ ದೋಚುತ್ತಿದ್ದವರು ಅರೆಸ್ಟ್!

Published

on

ಚಿಕ್ಕಬಳ್ಳಾಪುರ: ಬ್ಯಾಂಕುಗಳಿಂದ ಭಾರೀ ಮೊತ್ತದ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಅವರ ಗಮನ ಬೇರೆ ಕಡೆಗೆ ಸೆಳೆದು ಕ್ಷಣ ಮಾತ್ರದಲ್ಲಿ ಲಕ್ಷ ಲಕ್ಷ ಎಗರಿಸುತ್ತಿದ್ದ ಖತರ್ನಾಕ್ ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓಜಿಕುಪ್ಪಂ ಗ್ರಾಮದ ರಮಣ ಹಾಗೂ ಸತೀಶ್ ಬಂಧಿತರು. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೀಗಿತ್ತು ಇವರ ಕೃತ್ಯ:
ಬಂಧಿತ ಕಳ್ಳರು ಕೆಳಗೆ 10 ರೂ. ಹಾಗೂ 100 ರೂಪಾಯಿ ನೋಟು ಬಿಸಾಡಿ ನಂತರ ನಿಮ್ಮ ದುಡ್ಡು ಬಿದ್ದಿದೆ ನೋಡಿ ಎಂದು ಗ್ರಾಹಕರ ಗಮನವನ್ನು ಬೇರೆಡೆ ಸೆಳೆಯುತ್ತಿದ್ದರು. ಈ ವೇಳೆ ಬೈಕ್ ಹಾಗೂ ಕಾರುಗಳಲ್ಲಿ ಇಟ್ಟಿರುತ್ತಿದ್ದ ಲಕ್ಷಾಂತರ ರೂ. ಹಣವನ್ನು ಎಗರಿಸುತ್ತಿದ್ದರು. ಅಷ್ಟೇ ಅಲ್ಲದೇ ಬೈಕ್ ಹಾಗೂ ಕಾರುಗಳನ್ನು ಫಾಲೋ ಮಾಡಿ ಸಾರ್ವಜನಿಕರನ್ನು ಯಾಮಾರಿಸಿ ಅದರಲ್ಲಿರುತ್ತಿದ್ದ ಹಣವನ್ನು ಎಗರಿಸುತ್ತಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?
ಚಿಕ್ಕಬಳ್ಳಾಪುರದ ಹಾರೋಬಂಡೆ ಬಳಿ ಹೊಂಡಾ ಆ್ಯಕ್ಟಿವಾದ ಡಿಕ್ಕಿಯಲ್ಲಿದ್ದ 2.40 ಲಕ್ಷ ರೂ. ಹಣ ಕದ್ದು ಪರಾರಿಯಾಗುತ್ತಿದ್ದಾಗ ಇಬ್ಬರು ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಂಧಿತರನ್ನು ವಿಚಾರಣೆ ನಡೆಸಿದಾಗ ಕಳೆದ 2 ವರ್ಷದಲ್ಲಿ ಜಿಲ್ಲೆಯಲ್ಲಿ ಎಸಗಿದ್ದ 8 ಪ್ರಕರಣಗಳು ಬೆಳಕಿಗೆ ಬಂದಿದೆ. ಸತತ 6 ದಿನಗಳ ಕಾಲ ಡಿಆರ್ ಸಿಬ್ಬಂದಿ ಹಾಗೂ ಪೊಲೀಸರು ಓಜಿಕುಪ್ಪಂ ಗ್ರಾಮದಲ್ಲೇ ಮೊಕ್ಕಾಂ ಹೂಡಿ ಬಂಧಿತರಿಂದ 15 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ರಾಮು, ಗಿರೀಶ್ ಎಂಬುವವರು ಕೂಡ ಪಾಲುದಾರರಾಗಿದ್ದು, ಪರಾರಿಯಾಗಿರುವ ಇಬ್ಬರಿಗೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಅಸಲಿಗೆ ಓಜಿಕುಪ್ಪಂ ಗ್ಯಾಂಗ್ ಅಂತಲೇ ಫೇಮಸ್ ಆಗಿರೋ ಈ ಗ್ಯಾಂಗ್ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ಕದಿಯೋದರಲ್ಲಿ ಎಕ್ಸ್‍ಪರ್ಟ್. ಬೆಂಗಳೂರು ಸೇರಿದಂತೆ ರಾಜ್ಯದ ನಾನಾಕಡೆ ಇದೇ ರೀತಿ ಕೃತ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು, ಹಲವರ ಮೇಲೆ ಪ್ರಕರಣಗಳು ದಾಖಲಾಗಿದೆ.

ಈಗಾಗಲೇ ಬಂಧಿತರು ಜೈಲಿಗೆ ಹೋಗಿ ಬಂದಿದ್ದು, ಕೆಲವರು ಜಾಮೀನು ಪಡೆದು ಹೊರ ಬಂದಿದ್ದಾರೆ. 350 ಮನೆಗಳಿರುವ ಓಜಿಕುಪ್ಪಂ ಅನ್ನೋ ಗ್ರಾಮದಲ್ಲಿ 100 ಕ್ಕೂ ಹೆಚ್ಚು ಮನೆಗಳ ಸದಸ್ಯರು ಕಳ್ಳತನವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರಂತೆ. ಇನ್ನೂ ಇವರು ಕದ್ದ ಹಣದಲ್ಲಿ ಒಂದಷ್ಟು ದೇವರ ಪಾಲು ಅಂತ ದೇವರ ಕಾರ್ಯಗಳಿಗೂ ಮೀಸಲಿಡುತ್ತಿದ್ದ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮತ್ತೆ ಕೃತ್ಯ:
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎಸ್‍ಪಿ ಕಾರ್ತಿಕ್ ರೆಡ್ಡಿ ಸುದ್ದಿಗೋಷ್ಠಿ ನಡೆಸಿ, ಕಳ್ಳರ ಬಂಧನಕ್ಕೆ ಸಹಕರಿಸಿದ ಪೊಲೀಸರನ್ನ ಪ್ರಶಂಸೆ ಮಾಡಿದ ಮರುಕ್ಷಣವೇ ಜಿಲ್ಲೆಯಲ್ಲಿ ಇಂತಹದ್ದೇ ಕೃತ್ಯ ನಡೆಸುವ ಮೂಲಕ ಕಳ್ಳರು ಪೊಲೀಸರಿಗೆ ಶಾಕ್ ನೀಡಿದ್ದಾರೆ. ಗೌರಿಬಿದನೂರು ಪಟ್ಟಣದಲ್ಲಿ ಎಸ್‍ಬಿಐ ಬ್ಯಾಂಕಿನಿಂದ 50 ಸಾವಿರ ರೂ. ಹಣ ಡ್ರಾ ಮಾಡಿ ಆಕ್ಟೀವಾ ಹೊಂಡಾ ಡಿಕ್ಕಿಯಲ್ಲಿಟ್ಟುಕೊಂಡು ಮನೆ ಕಡೆ ತೆರಳುತ್ತಿದ್ದ ಮಂಜುಳಾರನ್ನು ಹಿಂಬಾಲಿಸಿದ ಖದೀಮರು ಆಕೆಯ ಗಮನ ಬೇರೆಡೆ ಸೆಳೆದು ಅಷ್ಟು ಹಣವನ್ನು ಎಗರಿಸಿದ್ದಾರೆ.

ಮಂಜುಳಾರನ್ನು ಹಿಂಬಾಲಿಸಿದ ಕಳ್ಳರು ನಿಮ್ಮ ಬೆನ್ನ ಮೇಲೆ ಹುಳು ಇದೆ. ಹುಳು ತೆಗೆದುಬಿಡ್ತೀವಿ. ಗಲೀಜಾಗಿದೆ ತೊಳೆದುಕೊಳ್ಳಲು ನೀರು ತನ್ನ ಅಂತ ಹೋಟೆಲ್ ಕಡೆ ಕಳುಹಿಸಿ ಡಿಕ್ಕಿಯಲ್ಲಿದ್ದ 50 ಸಾವಿರ ರೂ. ಹಣ ಕಳವು ಮಾಡಿದ್ದಾರೆ. ಖತರ್ನಾಕ್ ಖದೀಮರ ಕೃತ್ಯ ಹೋಟೆಲ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಂಧಿತ ಕಳ್ಳರ ಗ್ಯಾಂಗ್ ಸದಸ್ಯರೇ ಈ ಕೃತ್ಯ ನಡೆಸಿದ ಶಂಕೆ ವ್ಯಕ್ತವಾಗಿದೆ.

Click to comment

Leave a Reply

Your email address will not be published. Required fields are marked *