– ಬ್ಲಾಕ್ ಲಿಸ್ಟ್ ಕಂಪನಿ ರಾಮ್ಕಿಗೆ 30 ವರ್ಷಕ್ಕೆ ಕಸದ ಟೆಂಡರ್; ಇದು ದೊಡ್ಡ ಹಗರಣ ಎಂದ ಆರ್.ಅಶೋಕ್
ಬೆಂಗಳೂರು: ನಗರದ ಕಸದ ಟೆಂಡರ್‌ನಲ್ಲಿ (Bengaluru Garbage Tender) ಭಾರೀ ಹಗರಣ ನಡೆದಿದೆ ಎಂದು ಬಿಜೆಪಿ (BJP) ಗಂಭೀರವಾಗಿ ಆರೋಪಿಸಿದೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ವಿಪಕ್ಷ ನಾಯಕ ಆರ್ ಅಶೋಕ್ ಮಾತಾಡಿದ್ದಾರೆ. ಇಡೀ ಬೆಂಗಳೂರು ಜನ ಬೆಚ್ಚಿ ಬೀಳುವ ಹಗರಣ ನಡೆದಿದೆ. ಕಸದ ಟೆಂಡರ್ ಹೆಸರಿನಲ್ಲಿ 36 ಸಾವಿರ ಕೋಟಿ ಲೂಟಿ ಮಾಡಲಾಗಿದೆ. ದೇಶದಲ್ಲೇ ಕಸದ ಟೆಂಡರ್‌ನಲ್ಲಿ ಇಷ್ಟು ದೊಡ್ಡ ಹಗರಣ ನಡೆದಿಲ್ಲ. ದೆಹಲಿ ಮೂಲದ ರಾಮ್‌ಕಿ ಹೆಸರಿನ ಕಂಪೆನಿಗೆ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಭಾಗದ ಕಸದ ಸಂಸ್ಕರಣೆ ಹಾಗೂ ಸಾಗಣೆಗೆ ಎರಡು ಪ್ಯಾಕೇಜ್‌ನಲ್ಲಿ ಟೆಂಡರ್ ಕೊಡಲಾಗಿದೆ. ಬರೋಬ್ಬರಿ 30 ವರ್ಷಕ್ಕೆ ಟೆಂಡರ್ ಕೊಡಲಾಗಿದೆ. ಈ ಟೆಂಡರ್ ಅವಧಿ ಮುಗಿದ ಬಳಿಕ ಮತ್ತೆ 35 ವರ್ಷಕ್ಕೆ ಟೆಂಡರ್ ಅವಧಿ ವಿಸ್ತರಣೆಗೂ ಅವಕಾಶ ಕೊಡಲಾಗಿದೆ. ಇಷ್ಟು ಸುದೀರ್ಘ ಅವಧಿಗೆ ಕಸದ ಟೆಂಡರ್ ಕೊಡ್ತಿರೋದು ಇತಿಹಾಸದಲ್ಲೇ ಇದೇ ಮೊದಲು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ 4.30 ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳ ಹೆಸರು ಡಿಲೀಟ್
ಒಟ್ಟು 36 ಸಾವಿರ ಕೋಟಿ ಟೆಂಡರ್ ಮೊತ್ತದಲ್ಲಿ 10 ಸಾಚಿರ ಕೋಟಿ ಕಿಕ್‌ಬ್ಯಾಕ್ ಪಡೆಯಲಾಗಿದೆ. ಕಾಂಗ್ರೆಸ್ ಹೈಕಮಾಂಡ್, ಹಳೇ ಸಿಎಂ ಹಾಗೂ ಹೊಸ ಸಿಎಂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ರಾಮ್‌ಕಿ ಕಂಪೆನಿಯನ್ನು ವರ್ಲ್ಡ್ ಬ್ಯಾಂಕ್, ಕೆಲವು ರಾಜ್ಯಗಳು ಹಾಗೂ ಹಿಂದಿನ ಬಿಬಿಎಂಪಿ ಈಗಾಗಲೇ ಕಪ್ಪು ಪಟ್ಟಿಗೆ ಸೇರಿಸಿವೆ. ಇಷ್ಟಾದ್ರೂ ಹೈಕಮಾಂಡ್ ಒತ್ತಡಕ್ಕೆ ಮಣಿದ ಮಾಜಿ ಸಿಎಂ ಸಿದ್ದರಾಮಯ್ಯನವ್ರು ಮೇ 22 ರಂದು ನಡೆದ ತಮ್ಮ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಕಸದ ಟೆಂಡರ್‌ಗೆ ಅನುಮೋದನೆ ಕೊಡ್ತಾರೆ. ಆದ್ರೆ ಇಷ್ಟೊಂದು ದುಬಾರಿ ಟೆಂಡರ್‌ಗೆ ಸಂಪುಟ ಸಚಿವರು ಗಾಬರಿ ಬಿದ್ದಿದ್ದಾರೆ. ಆರ್ಥಿಕ ಇಲಾಖೆ ಕಸದ ಟೆಂಡರ್‌ಗೆ ಹಲವು ಆಕ್ಷೇಪ ವ್ಯಕ್ತಪಡಿಸಿದೆ. ಟೆಂಡರ್ ಪರಿಶೀಲನೆಗೆ ಸಿದ್ದರಾಮಯ್ಯ ರಚಿಸಿದ್ದ ಸಂಪುಟ ಉಪಸಮಿತಿಯನ್ನು ಡಿಕೆಶಿ ಸಿಎಂ ಆದ ಮೇಲೆ ರದ್ದು ಮಾಡಿ ಅಧಿಕಾರಿಗಳ ಸಮಿತಿ ರಚಿಸಿದ್ದಾರೆ. ಅವರಿಗೆ ಬೇಕಾಗಿರುವ ಹಾಗೆ ವರದಿ ಪಡೀತಾರೆ ಎಂದು ಆರೋಪಿಸಿದ್ದಾರೆ.
ಈ ಕಸದ ಟೆಂಡರ್ ಹಗರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಆರ್ ಅಶೋಕ್ ಆಗ್ರಹಿಸಿದ್ದಾರೆ. ರಾಜ್ಯಪಾಲರಿಗೂ ಲೋಕಾಯುಕ್ತಕ್ಕೂ ಬಿಜೆಪಿ ನಾಯಕರು ಕಸದ ಟೆಂಡರ್ ವಿರುದ್ಧ ದೂರು ಕೊಟ್ಟಿದ್ದಾರೆ.

