ನವದೆಹಲಿ: ದೇಶದ ಪ್ರಮುಖ ಆಸ್ಪತ್ರೆಗಳು (Hospitals) ಮತ್ತು ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳಲ್ಲಿ ಕೀಮೋಥೆರಪಿ ಔಷಧಗಳ ಕೊರತೆ (Chemotherapy Drugs Shortage) ಉಂಟಾಗಿದ್ದು, ರೋಗಿಗಳ ಚಿಕಿತ್ಸೆಗೆ ಭಾರೀ ತೊಂದರೆಯಾಗಿದೆ. ಈ ಸಮಸ್ಯೆ ಬಗೆಹರಿಸಲು ಮತ್ತು ಮಾರುಕಟ್ಟೆಯಲ್ಲಿ ಔಷಧಿಗಳ ಪೂರೈಕೆ ಮರಳಿ ಯಥಾಸ್ಥಿತಿಗೆ ತರಲು ಕೇಂದ್ರ ಸರ್ಕಾರ ಕೆಲವು ಪ್ರಮುಖ ಕ್ಯಾನ್ಸರ್ ಔಷದಿಗಳ ಬೆಲೆ ಹೆಚ್ಚಿಸಲು ಅನುಮತಿ ನೀಡಿದೆ.
ಸರ್ಕಾರದ ಈ ನಿರ್ಧಾರದಿಂದ ಔಷಧಿ (Cancer Drugs) ಸಿಗಬಹುದೆಂಬ ನಿರೀಕ್ಷೆಯಿದ್ದರೂ, ಚಿಕಿತ್ಸಾ ವೆಚ್ಚದಿಂದ ಕಂಗಾಲಾಗಿರುವ ರೋಗಿಗಳಿಗೆ ಆರ್ಥಿಕವಾಗಿ ಮತ್ತಷ್ಟು ಹೊರೆಯಾಗಲಿದೆ ಎನ್ನುವ ಆತಂಕ ಶುರುವಾಗಿದೆ.
ಮುಖ್ಯವಾಗಿ ಶ್ವಾಸಕೋಶ, ಗರ್ಭಕೋಶ, ಕುತ್ತಿಗೆ, ಮೂತ್ರಕೋಶ ಮತ್ತು ಜಠರಕ್ಕೆ ಸಂಬಂಧಿಸಿದ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಬಳಸುವ ಸಿಸ್‌ಪ್ಲಾಟಿನ್ ಮತ್ತು ಕಾರ್ಬೋಪ್ಲಾಟಿನ್ ನಂತಹ ಪ್ಲಾಟಿನಂ ಆಧಾರಿತ ಕೀಮೋಥೆರಪಿಯ ಔಷಧಗಳ ಕೊರತೆ ಹೆಚ್ಚಾಗಿದೆ. ಈ ಕಾಯಿಲೆಗೆ ಕೀಮೋಥೆರಪಿಯೇ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರ ಜೊತೆಗೆ ಟೆಟಾನಸ್ ತಡೆಗಟ್ಟುವ ಎರಡು ಇಂಜಕ್ಷನ್‌ಗಳ ಬೆಲೆ ಹೆಚ್ಚಳಕ್ಕೂ ರಾಷ್ಟ್ರೀಯ ಔಷಧಿಯ ಬೆಲೆ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾದಾಗ ಮತ್ತು ಮಾರಾಟ ಬೆಲೆ ತೀರಾ ಕಡಿಮೆಯಾದಾಗ, ಔಷಧ ತಯಾರಕರು ನಷ್ಟವನ್ನು ಸರಿದೂಗಿಸಲು ಉತ್ಪಾದನೆಯನ್ನು ಕಡಿಮೆ ಮಾಡುತ್ತಾರೆ. ಇದು ಔಷಧಿಗಳ ಕೊರತೆಗೆ ಕಾರಣವಾಗುತ್ತದೆ. ಇದೀಗ 82 ಔಷಧಗಳ ತಯಾರಿಕೆಗೂ ಕೂಡ ಇದೇ ಸಮಸ್ಯೆ ಎದುರಾಗಿದೆ ಎಂದು ಭಾರತೀಯ ಔಷಧ ಉತ್ಪಾದನಾ ಸಂಘದ ಜೆನೆರಿಕ್ ಔಷಧ ತಯಾರಕರ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ ತೈಲ ಬಿಕ್ಕಟ್ಟಿನಿಂದಾಗಿ ಔಷಧ ತಯಾರಿಕಾ ವೆಚ್ಚ ಹೆಚ್ಚಾಗಿದೆ ಎಂದು ಔಷಧ ಕಂಪನಿಗಳು ತಿಳಿಸಿವೆ. ಇದರಿಂದಾಗಿ ಒಟ್ಟು 82 ಔಷಧಗಳ ಬೆಲೆ ಪರಿಷ್ಕರಣೆ ಮಾಡುವಂತೆ ಕಂಪನಿಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಆದರೆ ಸರ್ಕಾರ ಸಮಾಲೋಚನೆ ನಡೆಸಿ ಕೇವಲ 4 ಮುಖ್ಯ ಔಷಧಗಳ ಬೆಲೆ ಹೆಚ್ಚಳಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ.
ಭಾರತದಲ್ಲಿ ಅಗತ್ಯ ಔಷಧಗಳ ಪಟ್ಟಿಯಲ್ಲಿರುವ ಸುಮಾರು 387 ಔಷಧಗಳ ಗರಿಷ್ಠ ಮಾರಾಟ ಬೆಲೆಯನ್ನು ಸರ್ಕಾರವೇ ಪ್ರತಿ ವರ್ಷ ನಿಗದಿಪಡಿಸುತ್ತದೆ. ಆದರೆ ಉತ್ಪಾದನಾ ವೆಚ್ಚ ಹೆಚ್ಚಾಗಿ, ಮಾರಾಟ ಬೆಲೆ ತೀರಾ ಕಡಿಮೆಯಾದಾಗ ಕಂಪನಿಗಳು ನಷ್ಟ ಭರಿಸಲಾಗದೆ ಉತ್ಪಾದನೆಯನ್ನು ಕಡಿಮೆ ಮಾಡುತ್ತವೆ. ಸದ್ಯದ ಔಷಧಿಯ ಕೊರತೆಗೆ ಇದೇ ಮುಖ್ಯ ಕಾರಣವಾಗಿದೆ. ಔಷಧಗಳ ತಯಾರಿಕೆಗೆ ಬೇಕಾಗುವ ಪ್ರಮುಖ ಕಚ್ಚಾ ವಸ್ತುವಾದ ಪ್ಲಾಟಿನಂ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿರುವುದರಿAದ ಕಂಪನಿಗಳಿಗೆ ನಷ್ಟವಾಗಿದೆ ಎನ್ನಲಾಗಿದೆ.

ಇದರಿಂದಾಗಿ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್ ಮತ್ತು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗಳೂ ಸೇರಿದಂತೆ ಹಲವು ವೈದ್ಯಕೀಯ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ನಿಯಮಿತವಾಗಿ ಲಭ್ಯವಿದ್ದ ಚಿಕಿತ್ಸೆಗೆ ಇದೀಗ ಕೊರತೆ ಉಂಟಾಗಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಅಲೆಯವಂತಾಗಿದೆ ಎಂದು ಗಂಗಾರಾಮ್ ಆಸ್ಪತ್ರೆ ವೈದ್ಯ ಡಾ. ಶ್ಯಾಮ್ ಅಗರ್ವಾಲ್ ತಿಳಿಸಿದ್ದರೆ.
ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ರೋಗಿಗಳ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
