ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಲಾಹೌಲ್–ಸ್ಪಿತಿ ಜಿಲ್ಲೆಯಲ್ಲಿ ಶುಕ್ರವಾರ (ಇಂದು) ಭೀಕರ ದುರಂತವೊಂದು ಸಂಭವಿಸಿದೆ. ಅನೇಕರನ್ನ ಹೊತ್ತೊಯ್ಯುತ್ತಿದ್ದ ಟಾಟಾ ಸುಮೋ ಟ್ಯಾಕ್ಸಿ (TATA Sumo Taxi) ಮೇಲೆ ಬೃಹತ್ ಬಂಡೆಯೊಂದು ಉರುಳಿಬಿದ್ದ ಪರಿಣಾಮ, ಟ್ಯಾಕ್ಸಿ ನಜ್ಜುಗುಜ್ಜಾಗಿ 13 ಮಂದಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಸರ್ಕಾರದಿಂದ ಕಠಿಣಾತಿಕಠಿಣ ಕಾನೂನು – ಪ್ರಶ್ನೆಪತ್ರಿಕೆ ಲೀಕಾಸುರರಿಗೆ 10 ವರ್ಷ ಜೈಲು, 10 ಕೋಟಿವರೆಗೆ ದಂಡ
#Breaking – A massive landslide hits a moving Tata Sumo in Himachal’s Pangi Valley, killing 10 people and causing a fire. pic.twitter.com/dvGCLTLECB
— NEWS WALA (@NEWSWALApy) July 24, 2026
ಮಾಹಿತಿ ಪ್ರಕಾರ, ಈ ದುರ್ಘಟನೆ ಉದಯಪುರ–ಕಿಲ್ಲರ್ ರಸ್ತೆಯ ಕಾಡು ನಾಲಾ (Kadu Nallah) ಸಮೀಪ ಸಂಭವಿಸಿದೆ. ಚಂಬಾ ಜಿಲ್ಲೆಯ ನಿವಾಸಿಗಳನ್ನು ಹೊತ್ತೊಯ್ಯುತ್ತಿದ್ದ ಟಾಟಾ ಸುಮೋ ಟ್ಯಾಕ್ಸಿ ರಸ್ತೆ ಮೂಲಕ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಭೂಕುಸಿತ ಉಂಟಾಗಿ, ಬೃಹತ್ ಬಂಡೆಗಳು ವಾಹನದ ಮೇಲೆ ಉರುಳಿಬಿದ್ದಿವೆ. ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿ ಪ್ರಯಾಣಿಕರು ಅದರೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಭೂಕುಸಿತದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಉದಯಪುರ–ಕಿಲ್ಲರ್ ರಸ್ತೆಯನ್ನ ಮುಚ್ಚಲಾಗಿತ್ತು. ಇದರಿಂದ ಪ್ರಯಾಣಿಕರು ತಿಂಡಿ (Tindi) ಗ್ರಾಮದಲ್ಲಿ ತಂಗಿದ್ದರು. ನಂತರ ರಸ್ತೆ ಸಂಚಾರ ತೆರವುಗೊಳಿಸುತ್ತಿದ್ದಂತೆ ಮತ್ತೆ ಪ್ರಯಾಣ ಆರಂಭಿಸಿದ್ದರು. ಆದ್ರೆ ಪ್ರಯಾಣಿಕರು ಕಾಡು ನಾಲಾ (ಉದಯಪುರ ಕಿಲ್ಲರ್ ರಸ್ತೆಯ ಬಳಿಯಿರುವ ಪರ್ವತ ಪ್ರದೇಶ) ಸಮೀಪ ತಲುಪುತ್ತಿದ್ದಂತೆ ಮತ್ತೊಮ್ಮೆ ಭೂಕುಸಿತ ಸಂಭವಿಸಿ ಈ ದುರಂತ ನಡೆದಿದೆ. ಇದನ್ನೂ ಓದಿ: ದೆಹಲಿ ಪೊಲೀಸರಿಂದ ಪೆಲೆಟ್ ಗನ್ ಬಳಕೆ – ಮಾಧ್ಯಮಗಳ ಮುಂದೆ ಗಾಯಾಳುವಿನ ಟಿ ಶರ್ಟ್ ಎತ್ತಿ ತೋರಿಸಿದ ರಾಹುಲ್ ಗಾಂಧಿ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ 13 ಮಂದಿ ಮೃತಪಟ್ಟಿರುವುದು ಹಾಗೂ ಇಬ್ಬರು ಗಾಯಗೊಂಡಿರುವುದು ದೃಢಪಟ್ಟಿದೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.
