ನವದೆಹಲಿ/ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನಲ್ಲಿ (TMC) ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಬಂಡಾಯಗಾರರಿಗೆ ಬುದ್ಧಿಕಲಿಸಲು ಮಮತಾ ಬ್ಯಾನರ್ಜಿ (Mamata Banerjee) ಟಿಎಂಸಿ ಪಕ್ಷವನ್ನ ಕಾಂಗ್ರೆಸ್ ಜೊತೆ ವಿಲೀನ ಮಾಡಲು ಮುಂದಾಗಿದ್ದಾರೆ ಅಂತ ಚರ್ಚೆ ಆಗ್ತಿದೆ.
ಈ ಸಂಬಂಧ, ಸೋನಿಯಾ ಗಾಂಧಿ (Sonia Gandhi) ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದು, ಮಮತಾ ಬ್ಯಾನರ್ಜಿ ಸಮಯಾವಕಾಶ ಕೇಳಿದ್ದಾರೆ ಅಂತ ತಿಳಿದುಬಂದಿದೆ. ವಿಲೀನ ವದಂತಿ ಬೆನ್ನಲ್ಲೇ ಟಿಎಂಸಿ ಸಂಸದ, ಮಮತಾ ಅಳಿಯ ಅಭಿಷೇಕ್ ಬ್ಯಾನರ್ಜಿ ಜೊತೆ ರಾಹುಲ್ ಗಾಂಧಿ ಒಂದು ತಾಸಿಗೂ ಹೆಚ್ಚುಕಾಲ ಚರ್ಚೆ ಮಾಡಿದ್ದಾರೆ.
ವಿರೋಧ ಪಕ್ಷದೊಳಗಿನ ಉನ್ನತ ಮೂಲಗಳ ಪ್ರಕಾರ, ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ಪಕ್ಷ ವಿಲೀನಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾದ ಷರತ್ತುಗಳಲ್ಲಿ ಮಮತಾ ಬ್ಯಾನರ್ಜಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ಮತ್ತು ಅಭಿಷೇಕ್ ಬ್ಯಾನರ್ಜಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿವೆ.
ಇನ್ನೂ ಎಐಸಿಸಿ ಅಧ್ಯಕ್ಷ ಖರ್ಗೆ ಅವರು ನಾಳೆ ತುರ್ತು ಸಭೆ ಕರೆದಿದ್ದು, ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಬುಲಾವ್ ನೀಡಿದ್ದಾರೆ. ಆದರೆ, 80 ಶಾಸಕರ ಪೈಕಿ ನಮ್ಮ ಗುಂಪಿನಲ್ಲಿ 64 ಶಾಸಕರ ಬೆಂಬಲ ಇದೆ. ಹೀಗಾಗಿ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ ಆಗಲ್ಲ ಅಂತ ರೆಬೆಲ್ ಲೀಡರ್ ರುತಬ್ರತಾ ಹೇಳಿದ್ದಾರೆ.

ಇದಕ್ಕೂ ಮುನ್ನವೇ ಬಂಗಾಳದಲ್ಲಿ ದೀದಿಗೆ ದೊಡ್ಡ ಶಾಕ್ ಆಗಿದೆ. ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ಆಪ್ತೆ ಸುಷ್ಮಿತಾ ದೇವ್ ರಾಜಿನಾಮೆ ನೀಡಿದ್ದಾರೆ. ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ತಕ್ಷಣ ಜಾರಿಗೆ ಬರುವಂತೆ ಅಂಗೀಕರಿಸಬಹುದು ಅಂತ ರಾಜ್ಯಸಭೆಯ ಸಭಾಪತಿ ಸಿಪಿ ರಾಧಾಕೃಷ್ಣನ್‌ಗೆ ಪತ್ರ ಬರೆದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, 2 ದೋಣಿಯ ಪರಿಸ್ಥಿತಿಯಲ್ಲಿ ಇರಲು ನಾನು ಇಚ್ಛಿಸಲ್ಲ. ನಾನೇಕೆ ಟಿಎಂಸಿಗೆ ವಿದಾಯ ಹೇಳಿದೆ ಅನ್ನೋದರ ಹಿಂದೆ ದೊಡ್ಡಕಥೆಯೇ ಇದೆ. ಅಲ್ಲದೇ, ಮಮತಾ ಅವರ ಬಗ್ಗೆ ಹೇಳಿಕೆ ಕೊಡಲೂ ಬಯಸಲ್ಲ ಅಂತಲೂ ಸುಷ್ಮಿತಾ ದೇವ್ ಹೇಳಿದ್ದಾರೆ.
ರಾಜೀನಾಮೆಯ ಸ್ವಲ್ಪ ಸಮಯದ ನಂತರ ದೆಹಲಿಯಲ್ಲಿ ಅಸ್ಸಾಂ ಸಿಎಂ ಹಿಮಂತ ಶರ್ಮಾ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಮಮತಾ ಅವರ ಅತ್ಯಂತ ನಂಬಿಕಸ್ಥ, ರಾಜ್ಯಸಭಾ ಎಂಪಿ ಸುಖೇಂದು ಶೇಖರ್ ರಾಯ್ ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದರು.
ಮುಖ್ಯಾಂಶಗಳು: ಕಾಂಗ್ರೆಸ್‌ನಲ್ಲಿ ಟಿಎಂಸಿ ವಿಲೀನ?
* 1998 ಜೂನ್ 1 ರಂದು ಕಾಂಗ್ರೆಸ್‌ನಿಂದ ಹೊರ ಬಂದು ಟಿಎಂಸಿ ಕಟ್ಟಿದ ಮಮತಾ
* ಪಶ್ಚಿಮ ಬಂಗಾಳ ರಾಜ್ಯದ ಹಿತಾಸಕ್ತಿ ಕಾಪಾಡಲು ಆಗ್ತಿಲ್ಲ ಅಂತ ಹೊರಬಂದಿದ್ದ ದೀದಿ
* 1977 ರಿಂದ ಬಂಗಾಳದಲ್ಲಿ ದರ್ಬಾರ್ ನಡೆಸ್ತಿದ್ದ ಸಿಪಿಎಂ ವಿರುದ್ಧ ಸಮರ
* 1998 ರಲ್ಲಿ ಎನ್‌ಡಿಎ ಮೈತ್ರಿಕೂಟ ಸೇರಿ ಲೋಕಸಭೆ ಎಲೆಕ್ಷನ್‌ಗೆ ಸ್ಪರ್ಧಿಸಿ 7 ಸೀಟ್ ಗೆದ್ದಿದ್ದ ಟಿಎಂಸಿ
* ವಾಜಪೇಯಿ ಸರ್ಕಾರದಲ್ಲಿ ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ
* 2001 ರಲ್ಲಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ವಿರುದ್ಧದ ಭ್ರಷ್ಟಾಚಾರ ಸ್ಟಿಂಗ್ ಆಪರೇಷನ್
* ಈ ಕೇಸಲ್ಲಿ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಅಂತ ಎನ್‌ಡಿಎ ತೊರೆದ ಮಮತಾ
* 2004ರಲ್ಲಿ ಮತ್ತೆ ವಾಪಸ್ ಎನ್‌ಡಿಎಗೆ ವಾಪಸ್ ಬಂದು ಕಲ್ಲಿದ್ದಲು ಸಚಿವೆಯಾದ ಮಮತಾ
