ನವದೆಹಲಿ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರ ತಿರಸ್ಕಾರಗೊಂಡಿರುವುದನ್ನ ಪ್ರಶ್ನಿಸಿ ಕಾಂಗ್ರೆಸ್ ನಾಯಕರು ಬುಧವಾರ ಚುನಾವಣಾ ಆಯೋಗದ (Election Commission) ಮೊರೆ ಹೋಗಿದ್ದಾರೆ. ನಾಮಪತ್ರ ತಿರಸ್ಕಾರದ ಆದೇಶವನ್ನ ತಕ್ಷಣ ರದ್ದುಗೊಳಿಸುವಂತೆ ಪಕ್ಷ ಒತ್ತಾಯಿಸಿದೆ.
ಕಾಂಗ್ರೆಸ್ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ, ಜೈರಾಮ್ ರಮೇಶ್, ದೀಪಾ ದಾಸ್‌ಮುನ್ಶಿ, ವಿವೇಕ್ ಟಂಖಾ, ಅಭಿಷೇಕ್ ಮನು ಸಿಂಘ್ವಿ ಹಾಗೂ ಮೀನಾಕ್ಷಿ ನಟರಾಜನ್ ಅವರನ್ನೊಳಗೊಂಡ ನಿಯೋಗವು ಚುನಾವಣಾ ಆಯೋಗಕ್ಕೆ ಇಂದು ಭೇಟಿ ನೀಡಿತ್ತು.
ನಾಮಪತ್ರ ತಿರಸ್ಕಾರಕ್ಕೆ ರಿಟರ್ನಿಂಗ್ ಅಧಿಕಾರಿ ನೀಡಿರುವ ಕಾರಣ ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದು ಕಾಂಗ್ರೆಸ್ ನಿಯೋಗ ವಾದಿಸಿದೆ. ಮೀನಾಕ್ಷಿ ನಟರಾಜನ್ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲಿಲ್ಲ. ಆದರೂ ಪ್ರಕರಣದ ಮಾಹಿತಿ ಮುಚ್ಚಿಟ್ಟಿದ್ದಾರೆ ಎಂಬ ಕಾರಣ ನೀಡಿ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ಪಕ್ಷ ಹೇಳಿದೆ.ಇದನ್ನೂ ಓದಿ:ದುಬಾರಿಯಾಗಲಿದೆ ಕ್ಯಾನ್ಸರ್ ಕೀಮೋಥೆರಪಿ ಔಷಧಿ – ರಾಷ್ಟ್ರವ್ಯಾಪಿ ಔಷಧದ ಕೊರತೆಯ ನಡುವೆ ದರ ಏರಿಕೆಗೆ ಕೇಂದ್ರ ಒಪ್ಪಿಗೆ
ಈ ಕುರಿತು ಮಾತನಾಡಿದ ಅಭಿಷೇಕ್ ಮನು ಸಿಂಘ್ವಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೇ ಇಲ್ಲ. ಹಾಗಿದ್ದಾಗ ಯಾವ ಪ್ರಕರಣದ ಮಾಹಿತಿ ಬಹಿರಂಗಪಡಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಖಾಸಗಿ ದೂರು ದಾಖಲಾದ ಮಾತ್ರಕ್ಕೆ ಅದು ಕ್ರಿಮಿನಲ್ ಪ್ರಕರಣವಾಗುವುದಿಲ್ಲ. ಸಂಬಂಧಪಟ್ಟ ನ್ಯಾಯಾಲಯ ಆ ದೂರಿನ ಬಗ್ಗೆ ಪರಿಗಣನೆ ತೆಗೆದುಕೊಂಡಾಗ ಮಾತ್ರ ಪ್ರಕರಣ ಅಸ್ತಿತ್ವಕ್ಕೆ ಬರುತ್ತದೆ ಎಂದು ಸಿಂಘ್ವಿ ಹೇಳಿದ್ದಾರೆ.
ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರದಿಂದ ಚುನಾವಣಾ ಸ್ಪರ್ಧೆಯಿಂದಲೇ ಒಬ್ಬ ಅಭ್ಯರ್ಥಿಯನ್ನು ಹೊರಗಿಟ್ಟಂತಾಗಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಚುನಾವಣಾ ಆಯೋಗಕ್ಕೆ ಮನವಿ
ಚುನಾವಣಾ ಆಯೋಗವು ತನ್ನ ಅಧಿಕಾರ ಬಳಸಿ ನ್ಯಾಯ ಒದಗಿಸಬೇಕು. ನಡೆದಿರುವ ತಪ್ಪನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್ ಮನವಿ ಮಾಡಿದೆ. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿರುವ ಕಾರಣ, ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಪಕ್ಷ ಒತ್ತಾಯಿಸಿದೆ.
ನಾಮಪತ್ರ ತಿರಸ್ಕಾರಕ್ಕೆ ಕಾರಣವೇನು?
ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಸ್ಪರ್ಧಿಸಲು ಮೀನಾಕ್ಷಿ ನಟರಾಜನ್ ನಾಮಪತ್ರ ಸಲ್ಲಿಸಿದ್ದರು. ತೆಲಂಗಾಣದ ನ್ಯಾಯಾಲಯವೊಂದರಲ್ಲಿ ಬಾಕಿಯಿರುವ ಪ್ರಕರಣದ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿ ಬಿಜೆಪಿ ನಾಯಕ ಹಾಗೂ ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯವರ್ಗೀಯ ಅವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ರಿಟರ್ನಿಂಗ್ ಅಧಿಕಾರಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಆದರೆ, ನ್ಯಾಯಾಲಯ ಇನ್ನೂ ಪ್ರಕರಣವನ್ನು ಪರಿಗಣಿಸಿಲ್ಲ. ಹೀಗಾಗಿ ಯಾವುದೇ ಕ್ರಿಮಿನಲ್ ಪ್ರಕರಣ ಅಸ್ತಿತ್ವದಲ್ಲಿಲ್ಲ ಎಂಬುದು ಕಾಂಗ್ರೆಸ್ ವಾದವಾಗಿದೆ. ಇದನ್ನೂ ಓದಿ:ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ – ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ
