ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಮುಷ್ಕರ ವಿಚಾರದಲ್ಲಿ ಸಾರಿಗೆ ನೌಕರರ ಒಕ್ಕೂಟದಲ್ಲೇ ಭಿನ್ನಾಭಿಪ್ರಾಯ ಸ್ಫೋಟಗೊಂಡಿದೆ. ಇದರಿಂದ ಯುಗಾದಿ ಹಬ್ಬಕ್ಕೂ (Ugadi Festival) ಮುನ್ನಾ ದಿನವೇ ಅಂದರೆ ಮಾ.21ಕ್ಕೆ 8 ಟ್ರೇಡ್ ಯೂನಿಯನ್‌ಗಳು ಕರೆ ಕೊಟ್ಟಿದ್ದ ಮುಷ್ಕರ ವಾಪಸ್ ಪಡೆಯಲಾಗಿದೆ.
ಮಾರ್ಚ್ 21 ರಂದು ನಾಲ್ಕು ನಿಗಮಗಳ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದ್ದ ಅನಂತ ಸುಬ್ಬರಾವ್ (Anantha Subbarao) ನೇತೃತ್ವದ ಜಂಟಿ ಕ್ರಿಯಾ ಸಮಿತಿ ಮುಷ್ಕರ ವಾಪಸ್ ಪಡೆದುಕೊಂಡಿದ್ದು, ಇದಕ್ಕೆ ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ವಿರೋಧ ವ್ಯಕ್ತಪಡಿಸಿದೆ. ಮುಷ್ಕರ ವಾಪಸ್ ಪಡೆದಿರುವ ಬಗ್ಗೆ ಕೆಎಸ್‌ಆರ್‌ಸಿಟಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ ಸ್ಪಷ್ಟನೆ ನೀಡಿದೆ. ಆದರೆ ಇದಕ್ಕೆ ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಚಂದ್ರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾ.24ರಂದು ಮುಷ್ಕರ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!
ಜಂಟಿ ಕ್ರಿಯಾಸಮಿತಿ ಶೇ.20 ರಷ್ಟು ವೇತನ ಹೆಚ್ಚಿಸುವಂತೆ ಒತ್ತಾಯಿಸಿತ್ತು. ಆದರೆ ಶುಕ್ರವಾರ ರಾಜ್ಯ ಸರ್ಕಾರ ಶೇ.15 ರಷ್ಟು ವೇತನ ಹೆಚ್ಚಿಸಿ ಆದೇಶ ಹೊರಡಿಸಿತ್ತು. ವೇತನ ಹೆಚ್ಚಿಸುವ ಭರವಸೆ ಜೊತೆಗೆ ಈ ಹಿಂದಿನ ಎರಡು ಸಾರಿಗೆ ಮುಷ್ಕರದ ವೇಳೆ ವಜಾಗೊಂಡಿದ್ದ ನೌಕರರನ್ನ ಮರುನೇಮಕ ಮಾಡಿಕೊಳ್ಳುವುದು ಹಾಗೂ 3 ವರ್ಷದ ವೇತನ ಬಡ್ತಿ ಹೆಚ್ಚಳಕ್ಕೂ ಸಮ್ಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್ಆರ್‌ಟಿಸಿ ಎಂಡಿ ಅನ್ಬುಕುಮಾರ್ ಜೊತೆಗೆ ನಡೆದ ಸಾರಿಗೆ ಮುಖಂಡರ ಸಭೆಯಲ್ಲಿ ಮುಷ್ಕರ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಮಾ.25ರಂದು ಮತ್ತೆ ಮೋದಿ ರಾಜ್ಯಕ್ಕೆ – ಬೆಂಗಳೂರಿನಲ್ಲಿ ಮೆಗಾ ರೋಡ್ ಶೋಗೆ ಮುಹೂರ್ತ ಫಿಕ್ಸ್
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್, ಸರ್ಕಾರ ಹೊರಡಿಸಿದ ಆದೇಶದಲ್ಲಿ ಬೇಡಿಕೆ ಈಡೇರಿಲ್ಲ. ಅರಿಯರ್ಸ್, ವೇತನ ಹೆಚ್ಚಳ ವಿಚಾರವಾಗಿ ಗೊಂದಲ ಇತ್ತು. ಶೇ.15 ಏರಿಕೆ ಮಾಡಿದ ಕೂಡಲೇ ಜಂಟಿ ಕ್ರಿಯಾ ಸಮಿತಿ ಯಾವುದೇ ಕಾನೂನಡಿಯಲ್ಲಿ ಪ್ರಕ್ರಿಯೆಗಳನ್ನ ಪಾಲನೆ ಮಾಡದೇ ಮುಷ್ಕರ ವಾಪಸ್ ಪಡೆದಿದ್ದಾರೆ. ಇವರ ನಡೆ ನೋಡಿದ್ರೆ 24ರ ಮುಷ್ಕರ ದಾರಿ ತಪ್ಪಿಸುವ ಹುನ್ನಾರ ಅನಿಸುತ್ತಿದೆ. ಇವರು ಸರ್ಕಾರದ ಜೊತೆ ಏನು ಮಾತುಕತೆ ನಡೆಸಿದ್ದಾರೋ ಗೊತ್ತಿಲ್ಲ. ಸರ್ಕಾರದ ಆದೇಶ ಪ್ರತಿ ಬರುವ ತನಕ ನಾವು ಕಾದು ನೋಡುತ್ತೇವೆ. ಒಂದೊಮ್ಮೆ ಆದೇಶದಲ್ಲಿ ನಮ್ಮ ಬೇಡಿಕೆ ಈಡೇರಿಕೆ ಬಗ್ಗೆ ಸ್ಪಷ್ಟತೆ ಇದ್ದರೆ, ಮುಷ್ಕರ ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೇ ಯಾವುದೇ ಕಾರಣಕ್ಕೂ ಮುಷ್ಕರ ವಾಪಸ್ ಪಡೆಯುವ ಮಾತೇ ಇಲ್ಲ. ಮಾರ್ಚ್ 24 ರಂದು ಸಾರಿಗೆ ನೌಕರರ ಮುಷ್ಕರ ಮಾಡ್ತೇವೆ ಎಂದು ತಿಳಿಸಿದ್ದಾರೆ.