ಬಾಗಲಕೋಟೆ: ರೈತನ ಭೂ ಪರಿಹಾರ (Land Compensation) ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆದರೆ ಅವರು ಎದೆ ಮೇಲೆ ಕೈ ಹಾಕಿ ಬಟ್ಟೆ ಹಿಡಿದು ಎಳೆದಾಡಿ ಚಪ್ಪಲಿಯಿಂದ ಹೊಡೆದಿದ್ದಾರೆ. ಈ ರೀತಿ ಹಲ್ಲೆ ಮಾಡಿದರೆ ನಾವು ಹೇಗೆ ಸರ್ಕಾರಿ ಕೆಲಸ ಮಾಡಬೇಕು? ನಮಗೆ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ರೈತನಿಂದ ಹಲ್ಲೆಗೊಳಗಾದ ಬಿಟಿಡಿಎ ಹಿರಿಯ ಸಹಾಯಕ ಹಾಗೂ ಟೈಪಿಸ್ಟ್ ನೀಲಕಂಠ ಅಂಕದ ಆತಂಕ ವ್ಯಕ್ತಪಡಿಸಿದ್ದಾರೆ.
ಮುಳುಗಡೆ ಭೂಮಿಗೆ ಕಳೆದ ನಾಲ್ಕು ವರ್ಷಗಳಿಂದ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ರೈತ ಬಸಪ್ಪ ದೊಡ್ಡಮನಿ ಅವರು ನೀಲಕಂಠ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದರು.
ಈ ಬಗ್ಗೆ ಹಲ್ಲೆಗೊಳಗಾದ ನೀಲಕಂಠ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರೈತ ಏಕಾಏಕಿ ನನ್ನ ಬಳಿ ಬಂದು ನನ್ನ ಆಸ್ತಿಯ ಫೈಲ್ ನಿನ್ನ ಬಳಿ ಇದೆ. ನೀನೇ ಆ ಕೆಲಸ ಮಾಡಿಕೊಡಬೇಕೆಂದು ಕೇಳಿದರು. ನಾನು ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದೆ. ಇಷ್ಟಕ್ಕೆ ಕೋಪಗೊಂಡು ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಭೂ ಪರಿಹಾರ ನೀಡದ್ದಕ್ಕೆ ಆಕ್ರೋಶ – ಬಿಟಿಡಿಎ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ರೈತ!
ರೈತನಿಂದ ಹಲ್ಲೆಗೊಳಗಾದ ನೀಲಕಂಠ ಅಂಕದ, ಬಿಟಿಡಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನೆಯ ಸಂಬಂಧ ನವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಘಟನೆ?
ಕಳೆದ ಒಂದು ವರ್ಷದಿಂದ 15 ಜನ ಸಫಾಯಿ ಕರ್ಮಚಾರಿಗಳಿಗೆ ಸೈಟ್ ಮಂಜೂರು ಮಾಡಿಲ್ಲ ಎಂದು ಆಗ್ರಹಿಸಿ ಹೋರಾಟಗಾರರು ಬಿಟಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಚೇರಿಗೆ ಆಗಮಿಸಿದ ರೈತ ನನ್ನ ಭೂಮಿ ಮುಳುಗಡೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಬಿಟಿಡಿಎ ಅಧಿಕಾರಿಗಳು ಇದುವರೆಗೆ ನನಗೆ ಭೂಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ಕಚೇರಿಗೆ ಅಲೆದು ಸುಸ್ತಾಗಿದೆ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಬಸಪ್ಪ ದೊಡ್ಡಮನಿ ಆಕ್ರೋಶದ ಬೆನ್ನಲ್ಲೇ ಅಲ್ಲಿಯೇ ಇದ್ದ ಕಚೇರಿಯ ಸಿಬ್ಬಂದಿ ನೀಲಕಂಠ ಅಂಕದ್ ಮತ್ತು ರೈತನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ರೈತ ಬಸಪ್ಪ ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ನೀಲಕಂಠ ಅವರಿಗೆ ಹೊಡೆದು ಆಕ್ರೋಶ ತೀರಿಸಿಕೊಂಡಿದ್ದರು. ಇದನ್ನೂ ಓದಿ: 3,991 ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ – ಜೂ.10ರಿಂದ ಅರ್ಜಿ ಸಲ್ಲಿಕೆ ಆರಂಭ: ಕೆಇಎ
