ಕಳೆದ ಕೆಲವು ತಿಂಗಳುಗಳಿಂದ ತಮಿಳುನಾಡು ಸಿಎಂ ವಿಜಯ್ (Thalapathy Vijay) ಮತ್ತು ಪತ್ನಿ ಸಂಗೀತಾ ( Sangeeta Swarnalingam) ಅವರ ದಾಂಪತ್ಯ ಜೀವನದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ವಿಚ್ಛೇದನದ ಊಹಾಪೋಹಗಳ ನಡುವೆಯೇ ಇದೀಗ ದಂಪತಿ ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂಬ ಚರ್ಚೆ ಸಿನಿ ವಲಯದಲ್ಲಿ ಜೋರಾಗಿದೆ.
ನಟ ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ಅವರ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು, ವಿಚ್ಛೇದನದ ಹಂತಕ್ಕೆ ತಲುಪಿದೆ ಎಂಬ ವರದಿಗಳು ಈ ಹಿಂದೆ ವೈರಲ್ ಆಗಿದ್ದವು. ಈ ವಿಚಾರ ಅಭಿಮಾನಿಗಳಲ್ಲೂ ಸಾಕಷ್ಟು ಆತಂಕ ಮೂಡಿಸಿತ್ತು.
ಇದೀಗ ಈ ಬೆಳವಣಿಗೆಗೆ ಹೊಸ ತಿರುವು ಸಿಕ್ಕಿದೆ. ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಸೇರಿದಂತೆ ಕುಟುಂಬದ ಹಿರಿಯರು ದಂಪತಿಯನ್ನು ಮತ್ತೆ ಒಂದಾಗಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಕುಟುಂಬದ ಸದಸ್ಯರು ಮತ್ತು ಆಪ್ತರು ಸಂಧಾನದ ಮಾತುಕತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ನಿನ್ನೆ ಶುಕ್ರವಾರದಂದು ತಮಿಳುನಾಡು ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಉಡುಪಿಗೆ(Udupi) ಭೇಟಿ ನೀಡಿದ್ದ ವಿಜಯ್, ಕೊಲ್ಲೂರು ಮೂಕಾಂಬಿಕೆ ( kollur Mookambika) ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಾಲಯದಲ್ಲಿ ಕೆಲಕಾಲ ಕಳೆದ ಅವರು ದೇವಿಗೆ ವಿಶೇಷ ಕಾಣಿಕೆಯನ್ನಾಗಿ 1.6 ಕೆ.ಜಿ ಬೆಳ್ಳಿ ಖಡ್ಗವನ್ನು ಅರ್ಪಿಸಿದ್ದಾರೆ. ಈ ಭೇಟಿ ಬಳಿಕ ಅವರ ವೈಯಕ್ತಿಕ ಜೀವನದ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ. ಇದನ್ನೂ ಓದಿ: ಮೂಕಾಂಬಿಕಾ ಸನ್ನಿಧಿಯಲ್ಲಿ ವಿಜಯ್ ಶತ್ರು ಸಂಹಾರ ಸಂಕಲ್ಪ!
ಲಂಡನ್‌ನಲ್ಲಿ ವಾಸಿಸುತ್ತಿದ್ದ ಸಂಗೀತಾ ಸ್ವರ್ಣಲಿಂಗಂ ಕುಟುಂಬದ ಸಲಹೆಯ ಮೇರೆಗೆ ಚೆನ್ನೈನಲ್ಲಿರುವ ನಿವಾಸಕ್ಕೆ ಮರಳಿದ್ದಾರೆ. ಇಬ್ಬರೂ ಒಂದೇ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ ಎಂಬ ಮಾಹಿತಿ ವರದಿಗಳಿಂದ ತಿಳಿದುಬಂದಿದೆ.
ಜೂನ್ 22ರಂದು ವಿಜಯ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ದಿನ ದಂಪತಿ ಒಟ್ಟಾಗಿ ಕಾಣಿಸಿಕೊಳ್ಳಬಹುದು ಅಥವಾ ತಮ್ಮ ಸಂಬಂಧದ ಬಗ್ಗೆ ಮಹತ್ವದ ಘೋಷಣೆ ಮಾಡಬಹುದು ನಿರೀಕ್ಷೆ ವಿಜಯ್ ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತಿವೆ.
ಸಂಗೀತಾ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ 2021ರಿಂದ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾಗಿವೆ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಆದರೆ ಈ ಕುರಿತು ವಿಜಯ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ದಳಪತಿ ವಿಜಯ್ ಹುಟ್ಟು ಹಬ್ಬಕ್ಕೆ ಭರ್ಜರಿ ಗಿಫ್ಟ್ – 2 ಸಿನಿಮಾ ಬಿಡುಗಡೆ?
