ಲಕ್ನೋ: ಕಳೆದ ಕೆಲವು ದಿನಗಳಿಂದ ನಾನೊಬ್ಬ ಭಾರತೀಯ ಸೇನೆಯ (Indian Army) ಹಿರಿಯ ಬ್ರಿಗೇಡಿಯರ್ ಎಂದು ಸುಳ್ಳು ಹೇಳಿಕೊಂಡು ಉತ್ತರ ಪ್ರದೇಶದಲ್ಲಿ (Uttar Pradesh) ರಾಜಾರೋಷವಾಗಿ ತಿರುಗಾಡುತ್ತಿದ್ದ 21 ವರ್ಷದ ಯುವಕನೊಬ್ಬನನ್ನು ಸೇನಾ ಸಿಬ್ಬಂದಿ ಮಾಸ್ಟರ್ ಪ್ಲಾನ್ ಮಾಡಿ ಜಾಣ್ಮೆಯಿಂದ ಬಂಧಿಸಿದ್ದಾರೆ.
ಆರ್ಯಾನ್ ವರ್ಮಾ (21) ಬಂಧಿತ ಆರೋಪಿ. ಈತ ಮಿಲಿಟರಿ ಶೈಲಿಯ ಐಷಾರಾಮಿ ಕಾರು ಮತ್ತು ಬ್ರಿಗೇಡಿಯರ್(Brigadier) ಉಡುಪು ಧರಿಸಿ ಶಹಜಹಾನ್‌ಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತಾನೊಬ್ಬ ಉನ್ನತ ಸೇನಾ ಅಧಿಕಾರಿ ಎಂದು ಎಲ್ಲರನ್ನೂ ನಂಬಿಸಿಕೊಂಡು ಓಡಾಡುತ್ತಿದ್ದ. ಇದೀಗ ಶಹಜಹಾನ್‌ಪುರ ಶಹೀದ್ ಮ್ಯೂಸಿಯಂ ಬಳಿ ಸೇನಾ ಸಿಬ್ಬಂದಿ ಈತನನ್ನು ವಶಕ್ಕೆ ಪಡೆದಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?
ಈತನ ಅನುಮಾನಾಸ್ಪದ ಚಲನವಲನಗಳ ಬಗ್ಗೆ ಮಾಹಿತಿ ಪಡೆದಿದ್ದ ಸೇನಾ ಅಧಿಕಾರಿಗಳು ಕಳೆದ ಏಪ್ರಿಲ್ ತಿಂಗಳಿನಿಂದಲೇ ಆರ್ಯಾನ್ ವರ್ಮಾ ಮೇಲೆ ತೀವ್ರ ನಿಗಾ ಇಟ್ಟಿದ್ದರು. ಆದರೆ ಈತ ಪೊಲೀಸರ ಕೈಗೆ ಸಿಗದೆ ಜಾರಿಕೊಳ್ಳುತ್ತಿದ್ದ.

ಈತನನ್ನು ಖೆಡ್ಡಾಕ್ಕೆ ಕೆಡವಲು ಸೇನಾ ಅಧಿಕಾರಿಗಳೇ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದರು. ತಾವೇ ಸಾಮಾನ್ಯ ಜನರಂತೆ ನಟಿಸಿದ ಸೇನಾ ಸಿಬ್ಬಂದಿ, ಸೇನೆಗೆ ಸೇರಬಯಸುವ ಯುವಕರಿಗೆ ಪ್ರೇರಣಾದಾಯಕ ಭಾಷಣ ಮಾಡುವಂತೆ ಆರ್ಯನ್ ವರ್ಮನಿಗೆ ಗೌರವಪೂರ್ವಕ ಆಹ್ವಾನ ನೀಡಿದ್ದಾರೆ.
ಇದನ್ನು ನಿಜವೆಂದು ನಂಬಿ ಬೀಗಿದ ಆರ್ಯನ್ ವರ್ಮಾ, ಮುಖ್ಯ ಅತಿಥಿಯಂತೆ ಕಾರ್ಯಕ್ರಮಕ್ಕೆ ಬಂದಿದ್ದಾನೆ. ಆತ ಬಂದ ಹ್ಯಾರಿಯರ್ ಕಾರಿನ ಮೇಲೆ ಹಿರಿಯ ಸೇನಾ ಅಧಿಕಾರಿಗಳು ಬಳಸುವ ಮಿಲಿಟರಿ ಸ್ಟಾರ್‌ಗಳು ಮತ್ತು ಧ್ವಜಗಳನ್ನು ಅಳವಡಿಸಲಾಗಿತ್ತು. ಇದನ್ನೂ ಓದಿ: 24 ಗಂಟೆಗಳಲ್ಲಿ ಅಮೆರಿಕ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ: ಶೆಹಬಾಜ್ ಷರೀಫ್
ಆತ ಕಾರು ಇಳಿದು ಕಾರ್ಯಕ್ರಮ ನಡೆಯುತ್ತಿದ್ದ ಮ್ಯೂಸಿಯಂ ಆವರಣಕ್ಕೆ ಬರುತ್ತಿದ್ದಂತೆ ಅಲ್ಲಿಯೇ ಹೊಂಚು ಹಾಕಿ ಕಾಯುತ್ತಿದ್ದ ಸೇನಾ ಸಿಬ್ಬಂದಿ ಆತನನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಬಳಿಕ ತಪಾಸಣೆ ನಡೆಸಿದಾಗ ಆತನ ಡ್ರೈವರ್ ಬಳಿ ಇದ್ದ ಸರ್ಕಾರಿ ಗುರುತಿನ ಚೀಟಿ ನಕಲಿ ಎಂದು ತಿಳಿದುಬಂದಿದೆ.
ಆರ್ಯನ್ ವರ್ಮಾ ತನ್ನ ಜೊತೆಗೆ ಇಬ್ಬರು ಬೌನ್ಸರ್‌ಗಳನ್ನು ಕರೆದುಕೊಂಡು ತಿರುಗಾಡುತ್ತಿದ್ದ. ಅವರು ದೇಶದ ಅತ್ಯುನ್ನತ ಎನ್‌ಎಸ್‌ಜಿ (NSG) ಕಮಾಂಡೋಗಳು, ತನಗೆ ಸರ್ಕಾರವೇ ವಿಶೇಷ ಭದ್ರತೆ ನೀಡಿದೆ ಎಂದು ಎಲ್ಲರಿಗೂ ಸುಳ್ಳು ಹೇಳಿ ನಂಬಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಬಂಧಿತ ಆರೋಪಿಯಿಂದ ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜಿನ (AFMC) ಡೀನ್ ಹೆಸರಿನಲ್ಲಿದ್ದ, ನಕಲಿ ಸೀಲ್ ಹಾಕಿರುವ ಐಡೆಂಟಿಟಿ ಕಾರ್ಡ್, ಸೇನಾ ಅಧಿಕಾರಿಗಳು ಬಳಸುವ ಲಾಠಿ ಮತ್ತು ಒಂದು ನಕಲಿ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಬರೇಲಿಯಿಂದ ಬಂದಿರುವ ಸೇನಾ ಗುಪ್ತಚರ ತಂಡವು ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ನಕಲಿ ಮುಖವಾಡದ ಹಿಂದೆ ಯುವಕರನ್ನು ವಂಚಿಸುವ ಜಾಲವಿದೆಯೇ ಅಥವಾ ಬೇರೆನಾದರೂ ಕೃತ್ಯ ಅಡಗಿದೆಯೇ ಎಂಬ ಸತ್ಯಾಸತ್ಯತೆಯನ್ನು ಬಾಯಿಬಿಡಿಸುತ್ತಿದ್ದಾರೆ.
