– ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಅಸಲಿ ಸತ್ಯ
ಬೆಂಗಳೂರು: ಸಂಪಿಗೆಹಳ್ಳಿಯಲ್ಲಿ ನಡೆದಿದ್ದ ವೃದ್ಧ ದಂಪತಿಗಳ ನಿಗೂಢ ಸಾವು ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ. ಆರಂಭದಲ್ಲಿ ಪತ್ನಿಯನ್ನ ಕೊಲೆ ಮಾಡಿ ಪತಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎಂದು ಭಾವಿಸಲಾಗಿದ್ದ ಪ್ರಕರಣದಲ್ಲಿ, ಈಗ ಮರಣೋತ್ತರ ಪರೀಕ್ಷೆಯ (Post-Mortem) ವರದಿ ಹೊರಬಿದ್ದಿದ್ದು, ಅತ್ಯಂತ ಭಾವುಕ ಹಾಗೂ ಅಸಲಿ ಸತ್ಯವೊಂದು ಬೆಳಕಿಗೆ ಬಂದಿದೆ.
ಪತ್ನಿ ಸುಮಿತ್ರಾ ಪ್ರಸಾದ್(77) ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು ಆಕೆಯ ಸಾವನ್ನು ತಡೆಯಲಾರದೇ ನೊಂದ ಪತಿ ಶಿವಾನಂದಂ ಪ್ರಸಾದ್(83) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಸಂಪಿಗೆಹಳ್ಳಿಯ ನಿವಾಸದಲ್ಲಿ ಸುಮಿತ್ರಾ ಪ್ರಸಾದ್ ಹಾಗೂ ಶಿವಾನಂದಂ ಪ್ರಸಾದ್ ಅವರ ಶವಗಳು ಪತ್ತೆಯಾಗಿದ್ದವು. ನಿನ್ನೆ ಈ ದಂಪತಿಯ ಪುತ್ರ, ತಂದೆಯೇ ತಾಯಿಯನ್ನು ಕೊಲೆ ಮಾಡಿ ತದನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಅಸಲಿ ಸತ್ಯವನ್ನು ಹೊರಹಾಕಿದ್ದಾರೆ. ಸುಮಿತ್ರಾ ಪ್ರಸಾದ್ ಅವರ ದೇಹದ ಮೇಲೆ ಯಾವುದೇ ಹಲ್ಲೆಯ ಕುರುಹುಗಳಿರಲಿಲ್ಲ. ಅವರಿಗೆ ತೀವ್ರ ಹೃದಯಾಘಾತ (Heart Attack) ಆಗಿದ್ದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಆಕಸ್ಮಿಕ ಸಾವಲ್ಲ, ಪ್ರಿವೆಡ್ಡಿಂಗ್ ಫೋಟೋಶೂಟ್ ಹೆಸರಲ್ಲಿ ವರನನ್ನು 400 ಅಡಿ ಕಂದಕಕ್ಕೆ ತಳ್ಳಿ ಕೊಂದ ಹೈಟೆಕ್ ಜೋಡಿ!
ಸುಮಿತ್ರಾ ಪ್ರಸಾದ್ ಅವರು ಅಂಧ ಹಾಗೂ ಕಿವುಡರಾಗಿದ್ದರು. ಶಿವಾನಂದಂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಪತ್ನಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದನ್ನು ಕಂಡು ವೃದ್ಧ ಪತಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಪತ್ನಿಯ ಅಗಲಿಕೆಯನ್ನು ಸಹಿಸಲಾರದೇ ತನಗಿನ್ನು ಯಾರು ದಿಕ್ಕು ಎಂಬ ಮನನೊಂದ ಭಾವನೆಯಲ್ಲಿ ಅವರು ಆತ್ಮಹತ್ಯೆಯ ಹಾದಿ ತುಳಿದಿದ್ದಾರೆ.
ಬಿಹಾರ ಮೂಲದ ವೃದ್ಧ ದಂಪತಿ ನಗರದ ಚೊಕ್ಕನಾಯಕನಹಳ್ಳಿಯ ಅಪಾರ್ಟ್ಮೆಂಟ್ದರಲ್ಲಿ ವಾಸವಾಗಿದ್ದರು. ದಂಪತಿ ಪುತ್ರ ಕಿರಣ್ ಕುಮಾರ್ ಕಶ್ಯಪ್ ಏರ್ಪೋರ್ಸ್ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದು, ಪ್ರಸ್ತುತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ನಿ- ಮಕ್ಕಳು ಹಾಗೂ ತಂದೆ ತಾಯಿಯೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು.
