ಬೆಂಗಳೂರು: ರಾಜ್ಯದ ಜನರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗುಡ್‌ನ್ಯೂಸ್ ಕೊಟ್ಟಿದ್ದಾರೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಹಳೆಯ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ (Electricity Connection) ಪಡೆಯಲು 15 ದಿನಗಳ ಕಾಲಾವಕಾಶ ನೀಡುವುದಾಗಿ ತಿಳಿಸಿದ್ದಾರೆ.
ತಮ್ಮ 2ನೇ ಕ್ಯಾಬಿನೆಟ್ ಸಭೆ ನಡೆಸಿದ ಸಿಎಂ, ರಾಜ್ಯದ ಜನತೆಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. 2000 ನೇ ಇಸವಿಯ ಮೇ 31 ರ ಒಳಗೆ ಕಟ್ಟಡ ಪೂರ್ಣಗೊಂಡು ತಾತ್ಕಾಲಿಕ ಸಂಪರ್ಕ ಹೊಂದಿದ್ದರೇ, ಅಂತಹ ಕಟ್ಟಡಗಳಿಗೆ ಆದೇಶ ಪ್ರಕಟವಾದ ದಿನದಿಂದ 15 ದಿನಗಳ ಒಳಗೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು `ಪ್ರಜಾ ಸೇವೆ’ ಇಲಾಖೆ ಸ್ಥಾಪನೆ: ಡಿಕೆ ಶಿವಕುಮಾರ್
ಏನೇನು ದಾಖಲೆ ಕೊಡಬೇಕು?
ಅರ್ಜಿ ಸಲ್ಲಿಸುವವರು ಫಲಾನುಭವಿಗಳ ಫೋಟೋ, ಕಟ್ಟಡದ ಫೋಟೋ ಹಾಗೂ ಜಿಪಿಎಸ್ ಲೊಕೆಷನ್ ಜೊತೆಗೆ ಅರ್ಜಿ ಸಲ್ಲಿಸಬೇಕು. 31-05-2000 ನೇ ಇಸವಿಯೊಳಗೆ ಪೂರ್ಣಗೊಂಡ ಕಟ್ಟಡಗಳಿಗೆ ಮಾತ್ರ ಈ ಅವಕಾಶ ಇರಲಿದೆ. ಹೊಸದಾಗಿ ತರಾತುರಿಯಲ್ಲಿ ಕಟ್ಟಡ ಕಟ್ಟೋರಿಗೆ ಈ ರಿಯಾಯಿತಿ ಇರೋದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ರೈತರಿಗೆ ರೇಷ್ಮೆ ಹುಳು ಮನೆ, ಕೊಟ್ಟಿಗೆ, ಹೈನುಗಾರಿಕೆಗೆ ವಿನಾಯಿತಿ ನೀಡಲಾಗಿರುತ್ತದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಕರ್ನಾಟಕ ಭವನದ ಪ್ರಾದೇಶಿಕ ಆಯುಕ್ತರ ಕಚೇರಿ ಕಾರ್ಯ, ವ್ಯಾಪ್ತಿ ಮತ್ತು ವಿನ್ಯಾಸ ಬದಲಾವಣೆ ಮಾಡಲು, ನಿವೃತ್ತ ಅಧಿಕಾರಿಗಳ ಬಳಕೆ ಮಾಡಲು ಹಾಗೂ ಪ್ರತ್ಯೇಕವಾಗಿ ಕಾನೂನು ಸೆಲ್ ಮಾಡಲು ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 200 ಬೆಡ್ ಆಸ್ಪತ್ರೆ ಮಾಡಲು 100 ಕೋಟಿ ರೂ. ವೆಚ್ಚ ಮಾಡಲು ಸಂಪುಟ ಅನುಮೋದನೆ ನೀಡಲಾಗಿದೆ. ಇದನ್ನೂ ಓದಿ: ನಾನು ಅಡ್ಡ ಮತದಾನ ಮಾಡಿಲ್ಲ, ಮುಜುಗರ ಉಂಟು ಮಾಡಬೇಡಿ: ಚಂದ್ರು ಲಮಾಣಿ
ಮುಖ್ಯವಾಗಿ KSRTC ಮತ್ತು NWKRTCಗೆ ಒಟ್ಟು 620 ಹೊಸ ಬಿಎಸ್-VI ಬಸ್‌ಗಳನ್ನ 235.60 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ. ಜೊತೆಗೆ ರಾಜ್ಯದ 3 ಸಾರಿಗೆ ನಿಗಮಗಳಲ್ಲಿ 10 ನಗರಗಳ 11 ಸ್ಥಳಗಳಲ್ಲಿ ಎಲೆಕ್ಟ್ರಿಕ್ ಬಸ್ ಘಟಕ ನಿರ್ಮಾಣ ಮಾಡಲು 112.72 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ. ದೇವನಹಳ್ಳಿ ತಾಲೂಕಿನ 13 ಗ್ರಾಮಗಳ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಅವಧಿಯನ್ನ 31.10.2026 ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
