ಚಿತ್ರದುರ್ಗ: ಬಿ.ಎಸ್ ಯಡಿಯೂರಪ್ಪ (B.S Yediyurappa) ಅವರಂತಹ ನಾಯಕ ದಕ್ಷಿಣ ಭಾರತದಲ್ಲಿ ಯಾರೂ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಡಿ ಹೊಗಳಿದ್ದಾರೆ.
ಯಡಿಯೂರಪ್ಪ ಅಭಿಮಾನೋತ್ಸವ (Yediyurappa Abhimanotsava) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರೈತರ ನಾಯಕ ಯಡಿಯೂರಪ್ಪ ಅವರು 50 ವರ್ಷ ರಾಜಕೀಯ ಸೇವೆ ಮಾಡಿದ್ದಾರೆ. ಯಡಿಯೂರಪ್ಪ ವ್ಯಕ್ತಿತ್ವದ ಕಾರಣ ಎಲ್ಲಾ ಧರ್ಮದ ಸ್ವಾಮೀಜಿಗಳು ವೇದಿಕೆ ಮೇಲೆ ಇದ್ದಾರೆ. ವೇದಿಕೆಯಲ್ಲಿ ಎಲ್ಲಾ ವರ್ಗದ ಸ್ವಾಮೀಜಿಗಳನ್ನು ಆಶ್ಚರ್ಯ ಮತ್ತು ಸಂತೋಷವಾಗಿದೆ. ಇದರಿಂದ ರಾಜ್ಯ ಮತ್ತು ದೇಶಕ್ಕೆ ಒಂದು ಸಂದೇಶ ರವಾನೆ ಆಗಿದೆ. ಇದು ದೊಡ್ಡ ವಿಷಯವಾಗಿದೆ ಎಂದಿದ್ದಾರೆ.
ಕರ್ನಾಟಕ ಧರ್ಮಭೂಮಿ, ಇಲ್ಲಿ ಧರ್ಮದ ವಿಚಾರಗಳ ಮಾರ್ಗದರ್ಶನ ಆಗುತ್ತಿದೆ. ಶಿಕ್ಷಣ ಸೇರಿ ಹಲವು ಕ್ಷೇತ್ರದಲ್ಲಿ ಮಠ ಮಾನ್ಯಗಳು ಕೆಲಸ ಮಾಡುತ್ತಿವೆ. ಇದು ಮದಕರಿ ನಾಯಕನ ಪುಣ್ಯಭೂಮಿ. ಇಲ್ಲಿ ಒಂದು ಪ್ರತಿಮೆ ನಿರ್ಮಾಣ ಮಾಡಿಲ್ಲ. ಚಿಂತೆ ಬೇಡ ಮೋದಿ ಇದ್ದಾರೆ, ಮದಕರಿ ನಾಯಕನ ಪ್ರತಿಮೆ ನಿರ್ಮಾಣ ಮಾಡ್ತೀವಿ. ವೀರ ಓಬವ್ವಗೆ ಕೈ ಮುಗಿದು ನಮಸ್ಕಾರ ಮಾಡುತ್ತೇನೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಜನಸೇವೆ ಪ್ರಭು ಸೇವಾ ಎಂಬ ಮಂತ್ರದಲ್ಲಿ ಕೆಲಸ ಮಾಡಿದವರು. ರೈತರ ಕೆಲಸ ದೇಶದ ಕೆಲಸ ಅಂತ ಕೆಲಸ ಮಾಡಿದವರು. 4 ಬಾರಿ ಕರ್ನಾಟಕದ ಜನ ಅವರನ್ನು ಸಿಎಂ ಮಾಡಿದ್ದರು. ರಾಜಕೀಯದಲ್ಲಿ ಎರಡು ರೀತಿ ನಾಯಕರು ಇರುತ್ತಾರೆ. ಒಂದು ತಾನು ಮಾಡಿದ ದಾರಿಯಲ್ಲಿ ನಡೆಯೋದು. ಇನ್ನೊಂದು ಮತ್ತೊಬ್ಬರಿಗೆ ದಾರಿ ಮಾಡಿಕೊಡೋದು. ಯಡಿಯೂರಪ್ಪ ಎರಡನೇ ತರದ ನಾಯಕರು ಎಂದು ಬಣ್ಣಿಸಿದರು.
ಅವರು ಯಾವುದೇ ರಾಜಕೀಯ ಹಿನ್ನಲೆ ಇಲ್ಲದವರು. ಶಿಕಾರಿಪುರಿಂದ ಹೋರಾಟ ಶುರು ಮಾಡಿ, ಸೈಕಲ್‌ನಲ್ಲಿ ಇಡೀ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದರು. ಬಗರಹುಕುಂ ಸೇರಿ, ರೈತರ ಪರ ಅನೇಕ ಹೋರಾಟ ಮಾಡಿದ್ದರು.
ಯಡಿಯೂರಪ್ಪ ಜೊತೆ ಮೂರು ಚುನಾವಣೆ ಮಾಡಿದ್ದೇನೆ. ಅವರ ಜೇಬಿನಲ್ಲಿ ಚಿಕ್ಕ ಡೈರಿ ಇರುತ್ತದೆ. ಅದರಲ್ಲಿ ಎಲ್ಲಾ ವಿಷಯಗಳನ್ನು ಬರೆದುಕೊಳ್ತಾರೆ. ಅವರ ರೀತಿ ಯುವಕರು ಇರಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿ ಇರಲಿಲ್ಲ. ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತಂದವರು ಅವರು ಎಂದರು.
ದೇಶದಲ್ಲಿ ಮೊದಲ ಬಾರಿಗೆ ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದ್ದು ಯಡಿಯೂರಪ್ಪ ಅವರು, ಬೆಂಗಳೂರು ಗ್ಲೋಬಲ್ ಟೆಕ್ ಆಗೋಕೆ ಅವರ ಕೊಡುಗೆ ಇದೆ. ಎಲ್ಲಾ ವರ್ಗದ ಸಮುದಾಯದ ಅಭಿವೃದ್ಧಿಗೆ ಅವರು ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗೋ ಅವಕಾಶ ಕೊಟ್ಟರೂ ಯಡಿಯೂರಪ್ಪ ನನಗೆ ಮಂತ್ರಿ ಬೇಡ, ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋಕೆ ಕೆಲಸ ಮಾಡ್ತೀನಿ ಎಂದರು. ಇವತ್ತಿನ ದಿನ ಯಡಿಯೂರಪ್ಪ ದಿನವಾಗಿದೆ ಎಂದರು. ಇದೇ ವೇಳೆ ಚಿತ್ರದುರ್ಗದ ಜನರಿಗೆ ಧನ್ಯವಾದ ಅರ್ಪಿಸಿದರು.

