ಬೆಂಗಳೂರು: ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿರುವ ದಾವಣಗೆರೆ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳಿಗೆ(Vachananda Shree) ಕೆಳ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಧಾನದ ಕುರಿತು ಹೈಕೋರ್ಟ್ (High Court) ತೀವ್ರ ಆಘಾತ ವ್ಯಕ್ತಪಡಿಸಿದೆ.
ದೂರು ದಾಖಲಾಗುವ ಮುನ್ನವೇ ಜಾಮೀನು(Bail) ನೀಡಿರುವ ರೀತಿ ಆಘಾತಕಾರಿಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಚನಾನಂದ ಶ್ರೀಗಳಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಕೆಳ ನ್ಯಾಯಾಲಯದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಹೈಕೋರ್ಟ್ ಪೀಠವು, “ಸ್ವಾಮೀಜಿ ವಿರುದ್ಧ ಅತ್ಯಂತ ಗಂಭೀರ ಸ್ವರೂಪದ ಆರೋಪಗಳ ಅಡಿಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಹೀಗಿದ್ದರೂ, ಪೊಲೀಸರು ಅಧಿಕೃತವಾಗಿ ದೂರು ದಾಖಲಿಸಿಕೊಳ್ಳುವ ಮುನ್ನವೇ ಅವರಿಗೆ ನಿರೀಕ್ಷಣಾ ಜಾಮೀನು ಒದಗಿಸಲಾಗಿದೆ. ಮೇಲ್ನೋಟಕ್ಕೆ ಈ ಜಾಮೀನು ನೀಡಿದ ವಿಧಾನವೇ ಸರಿಯಾಗಿಲ್ಲ” ಎಂದು ನ್ಯಾ. ನಾಗಪ್ರಸನ್ನ ಅವರು ಕಳವಳ ವ್ಯಕ್ತಪಡಿಸಿದರು.
ಕೆಳ ನ್ಯಾಯಾಲಯದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಇದೀಗ ಆರೋಪಿ ವಚನಾನಂದ ಶ್ರೀಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಸಂತ್ರಸ್ತ ತಾಯಿಯ ಮೇಲ್ಮನವಿ ಅರ್ಜಿಯ ಮುಂದಿನ ಆಲಿಕೆಯನ್ನು ನ್ಯಾಯಾಲಯವು ಜೂನ್ 23ಕ್ಕೆ ನಿಗದಿಪಡಿಸಿದೆ.
