– ಪಳನಿ ಮುರುಗನ್ ದೇವಸ್ಥಾನಕ್ಕೆ ಸೇರಿದ ಜಾಗ; ಮೂವರು ಅರೆಸ್ಟ್
– ಮದುರೈ ದೇವಾಲಯದ ಆಸ್ತಿ ಪ್ರಕರಣದಲ್ಲೂ ಪ್ರತ್ಯೇಕ ಎಫ್‌ಐಆರ್
ಚೆನ್ನೈ: ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ಪ್ರಸಿದ್ಧ ಅರುಳ್ಮಿಗು ದಂಡಾಯುತಪಾಣಿ ಸ್ವಾಮಿ (ಪಳನಿ ಮುರುಗನ್) ದೇವಾಲಯಕ್ಕೆ ಸೇರಿದ ಸುಮಾರು 100 ಕೋಟಿ ರೂ. ಮೌಲ್ಯದ ಜಮೀನನ್ನು (Temple land ) ಕೇವಲ 2 ಕೋಟಿ ರೂ.ಗೆ ನಕಲಿ ದಾಖಲೆಗಳ ಮೂಲಕ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ತಮಿಳುನಾಡು ಸಿಬಿ-ಸಿಐಡಿ (Tamil Nadu CB-CID) ಪೊಲೀಸರು ಮೂವರನ್ನ ಬಂಧಿಸಿದ್ದಾರೆ.
ಬಂಧಿತರನ್ನ ತಿರುಪ್ಪೂರು ಜಿಲ್ಲೆಯ ಮದತುಕುಲಂ ತಾಲೂಕಿನ ಪಪ್ಪಂಕುಳಂ ನಿವಾಸಿ ವೆಳ್ಳೈತುರೈ (60), ದಿಂಡಿಗಲ್ (Dindigul) ಜಿಲ್ಲೆಯ ಪಳನಿ ತಾಲ್ಲೂಕಿನ ಗೌಂಡಂಕುಳಂ ನಿವಾಸಿ ಅನ್ವರ್‌ದೀನ್ (65) ಹಾಗೂ ವಿಲ್ಲುಪುರಂ ಜಿಲ್ಲೆಯ ಕಾಮರಾಜರ್ ನಗರ ನಿವಾಸಿ ಮುರುಗದಾಸ್ (56) ಎಂದು ಗುರುತಿಸಲಾಗಿದೆ.
ಸದ್ಯ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318 (4), 336(3), 340(2), 49 ಹಾಗೂ 61(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.
ತನಿಖಾಧಿಕಾರಿಳು ಹೇಳುವಂತೆ, ವಿವಾದಿತ ಜಮೀನು ಪಳನಿ ಮುರುಗನ್ ದೇವಾಲಯಕ್ಕೆ ಸೇರಿದ ಪಾರ್ಕಿಂಗ್ ಪ್ರದೇಶವಾಗಿದ್ದು, ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 100 ಕೋಟಿ ರೂಪಾಯಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಗಳು ನಕಲಿ ದಾಖಲೆಗಳನ್ನ ಸೃಷ್ಟಿಸಿ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ಅಕ್ರಮ ನೋಂದಣಿ ರದ್ದು
ಜಮೀನು ಅಕ್ರಮ ನೋಂದಣಿ ಪ್ರಕರಣ ಬೆಳಕಿಗೆ ಬಂದ ನಂತರ ತಮಿಳುನಾಡು ಸರ್ಕಾರ (Tamil Nadu Govt) ವಿವಾದಿತ ನೋಂದಣಿಯನ್ನ ರದ್ದುಗೊಳಿಸಿದೆ. ನೋಂದಣಿ ನಡೆದ ವೇಳೆ ಕರ್ತವ್ಯದಲ್ಲಿದ್ದ ಉಪ ನೋಂದಣಾಧಿಕಾರಿ ಜಸ್ಟಿನ್ ಮಣಿಕಂದನ್ ಅವರನ್ನೂ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಪ್ರಕರಣದ ತನಿಖೆಯ ಭಾಗವಾಗಿ ಸಿಬಿ-ಸಿಐಡಿ ಅಧಿಕಾರಿಗಳು ಅಮಾನತುಗೊಂಡ ಉಪ ನೋಂದಣಾಧಿಕಾರಿಯನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ನಕಲಿ ದಾಖಲೆಗಳನ್ನ ಹೇಗೆ ಸ್ವೀಕರಿಸಿದ್ರಿ? ನೋಂದಣಿ ಪ್ರಕ್ರಿಯೆ ಹೇಗೆ ಪೂರ್ಣಗೊಳಿಸಲಾಯಿತು? ಎಂಬೆಲ್ಲಾ ಆಯಾಮಗಳಲ್ಲಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಮದುರೈ ದೇವಾಲಯದ ಆಸ್ತಿ ಪ್ರಕರಣದಲ್ಲೂ ಪ್ರತ್ಯೇಕ ಎಫ್‌ಐಆರ್
ಇದೇ ವೇಳೆ, ಮದುರೈನ ಅರುಳ್ಮಿಗು ಮೀನಾಕ್ಷಿ ಸುಂದರೇಶ್ವರರ್ ದೇವಾಲಯಕ್ಕೆ ಸೇರಿದ ಮತ್ತೊಂದು ಆಸ್ತಿ ಪ್ರಕರಣದಲ್ಲೂ ಮದುರೈ ಕೇಂದ್ರ ಅಪರಾಧ ವಿಭಾಗ (CCB) 19 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ದೇವಾಲಯದ ಜಂಟಿ ಆಯುಕ್ತರು ನೀಡಿದ ದೂರಿನ ಅನ್ವಯ, ಮದುರೈನ ಚೊಕ್ಕಿಕುಳಂ ಪ್ರದೇಶದಲ್ಲಿರುವ ದೇವಾಲಯದ ಅಮೂಲ್ಯ ಆಸ್ತಿಯ ಗುತ್ತಿಗೆಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಸಂಚು ರೂಪಿಸಲಾಗಿದೆ. ಅಲ್ಲದೇ, ಅಕ್ರಮ ಅಡಮಾನ ಪತ್ರಗಳು ಹಾಗೂ ಪವರ್ ಆಫ್ ಅಟಾರ್ನಿ ದಾಖಲೆಗಳನ್ನ ಸೃಷ್ಟಿಸಿ ವಹಿವಾಟು ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ, ಮದುರೈನ ಈ ಆಸ್ತಿಯನ್ನು 1930ರಲ್ಲಿ ನೋಂದಾಯಿತ ವಿಲ್ ಮೂಲಕ ದೇವಾಲಯದ ಧಾರ್ಮಿಕ ಹಾಗೂ ಧಾರ್ಮಿಕ ಸೇವಾ ಚಟುವಟಿಕೆಗಳಿಗಾಗಿ ದಾನವಾಗಿ ನೀಡಲಾಗಿತ್ತು. ಆದರೆ, ಕೆಲ ಖಾಸಗಿ ವ್ಯಕ್ತಿಗಳು ಕಂದಾಯ ಇಲಾಖೆ ಹಾಗೂ ಉಪ ನೋಂದಣಿ ಇಲಾಖೆಯ ಮಾಜಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಭೂ ದಾಖಲೆಗಳಲ್ಲಿ ತಿರುಚಿದ್ದಾರೆ. ಅಕ್ರಮ ವಹಿವಾಟಿಗೆ ನೆರವಾದ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
