ಬೆಂಗಳೂರು/ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ದೊಡ್ಡ ಪ್ರಮಾಣದ ವಿನಾಶ ಸೃಷ್ಠಿಯಾಗಿದೆ. ಈ ಮಧ್ಯೆ ರಾಜ್ಯದ ಹಲವರು ಸಂಕಷ್ಟಕ್ಕೆ ಸಿಲುಕಿದ್ದು, 13 ಮಂದಿ ವಿವರ ಲಭ್ಯವಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (SEOC) ನೇಪಾಳ ಮತ್ತು ಟಿಬೆಟ್‌ನಲ್ಲಿ ಸಿಲುಕಿರುವವರ ಕನ್ನಡಿಗರ (Kannadigas) ವಿವರಗಳನ್ನು ಸಂಗ್ರಹಿಸಿದೆ ಎಂದು ಮಾಹಿತಿ ಹಂಚಿಕೊಂಡಿದೆ.
‘ಮಾಹಿತಿ ಲಭ್ಯವಾಗಿರುವ ಕರ್ನಾಟಕದವರು ಬೇರೆ ರಾಜ್ಯಗಳ ಪ್ರವಾಸಿಗರನ್ನೂ (Tourists) ಒಳಗೊಂಡ ಗುಂಪುಗಳಲ್ಲಿ ಇದ್ದಾರೆ. ಬೆಂಗಳೂರಿನ 11 ಮಂದಿ, ಮೈಸೂರು ಹಾಗೂ ಧಾರವಾಡ ಜಿಲ್ಲೆಯ ತಲಾ ಒಬ್ಬರು ಇವರಲ್ಲಿ ಸೇರಿದ್ದಾರೆ. ಬಹುತೇಕರು ನೇಪಾಳದ ರಸುವಾ ಜಿಲ್ಲೆಯ ಟಿಮುರೆ ಪ್ರದೇಶದಲ್ಲಿದ್ದು, ಕೆಲವರು ಟಿಬೆಟ್ ಸ್ವಾಯತ್ತ ಪ್ರದೇಶದ ದರ್ಚೆ ಎಂಬಲ್ಲಿ ಸಿಲುಕಿದ್ದಾರೆ.
ಎಸ್‌ಇಒಸಿ ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಗಳು ಸಂಕಷ್ಟಕ್ಕೆ ಸಿಲುಕಿರುವವರ ವಿವರಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕ್ಷಿಪ್ರ ಪ್ರತಿಕ್ರಿಯೆ ಘಟಕ ಹಾಗೂ ಕಂಡು, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳ ಜತೆ ನಿರಂತರವಾಗಿ ಹಂಚಿಕೊಳ್ಳುತ್ತಿವೆ. ಅವರ ರಕ್ಷಣೆ, ಸ್ಥಳಾಂತರ ಮತ್ತು ಸುರಕ್ಷಿತ ವಾಪಸಾತಿಗೆ ನೆರವಾಗುವಂತೆ ಕೇಂದ್ರ ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಗೂ ವಿನಂತಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ನೇಪಾಳ-ಟಿಬೆಟ್ ಗಡಿ ಪಕ್ಕದ ಪ್ರದೇಶಗಳಲ್ಲಿ ಸಂಭವಿಸಿದ ಆಕಸ್ಮಿಕ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಮೂಲಸೌಕರ್ಯಗಳಿಗೆ ತೀವ್ರ ಹಾನಿಯಾಗಿದೆ. ಇದು ಹಲವು ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಮತ್ತು ಸಂಚಾರವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.
ರಾಜ್ಯ ಸರ್ಕಾರದ ಮೇಲ್ವಿಚಾರಣೆ
ಕರ್ನಾಟಕದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕರ್ನಾಟಕದ ಜನರ ಸುರಕ್ಷತೆ ಮತ್ತು ಕ್ಷೇಮಾಭಿವೃದ್ಧಿಯ ಕುರಿತು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ (MEA) ಮತ್ತು ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ರವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರವಾಹ, ಭೂಕುಸಿತ, ರಸ್ತೆ ತಡೆ ಅಥವಾ ಇತರ ವಿಕೋಪ ಸಂಬಂಧಿತ ಅಡಚಣೆಗಳಿಂದಾಗಿ ಪ್ರಸ್ತುತ ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ (TAR) ಸಿಲುಕಿಕೊಂಡಿರುವ ಕರ್ನಾಟಕದ ವ್ಯಕ್ತಿಗಳ ವಿವರಗಳನ್ನ ಸಂಗ್ರಹಿಸುವ ಕಾರ್ಯವನ್ನು ಕರ್ನಾಟಕ ಸರ್ಕಾರವು ಸಕ್ರಿಯವಾಗಿ ಪ್ರಾರಂಭಿಸಿದೆ.
ನೊಂದಣಿಗೆ ಗೂಗಲ್ ಫಾರ್ಮ್ (Google Form):
ಸಿಲುಕಿಕೊಂಡಿರುವ ವ್ಯಕ್ತಿಗಳ ಪ್ರಸ್ತುತ ಸ್ಥಳ, ಸ್ಥಿತಿ, ಸಂಪರ್ಕ ವಿವರಗಳು, ಅಗತ್ಯವಿರುವ ನೆರವು, ಪ್ರಯಾಣ/ಗುಂಪಿನ ವಿವರಗಳು ಮತ್ತು ಪ್ರವಾಸ ಸಂಘಟಕರ (Tour Operators) ವಿವರಗಳನ್ನು ಸಂಗ್ರಹಿಸಲು ಗೂಗಲ್ ಫಾರ್ಮ್ ಪ್ರಕಟಿಸಲಾಗಿದೆ.

ರಕ್ಷಣೆ ಮತ್ತು ಸ್ಥಳಾಂತರಕ್ಕೆ ಸಮನ್ವಯ
ಸಂಗ್ರಹಿಸಿದ ಮಾಹಿತಿಯನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಮಂತ್ರಾಲಯ, ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಇತರ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪ್ರವಾಸ ಸಂಘಟಕರ ಸಮನ್ವಯದೊಂದಿಗೆ ರಕ್ಷಣೆ, ಸ್ಥಳಾಂತರ ಹಾಗೂ ಇತರ ಅಗತ್ಯ ನೆರವು ಒದಗಿಸಲು ಮಾತ್ರ ಬಳಸಲಾಗುತ್ತದೆ. ಅಲ್ಲದೇ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನೆರವು ನೀಡಲು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (SEOC) 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ನವದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಅವರು ಸಹ ಪರಿಸ್ಥಿತಿಯನ್ನ ವೀಕ್ಷಿಸಲು ಹಾಗೂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ವಿಶೇಷ ತಂಡಗಳನ್ನು ರಚಿಸಿದ್ದಾರೆ. ನೆರವಿಗಾಗಿ ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನು ಸಹ ಹಂಚಿಕೊಳ್ಳಲಾಗಿದೆ.
ಸಂತ್ರಸ್ತರ/ಸಿಲುಕಿಕೊಂಡಿರುವ ವ್ಯಕ್ತಿಗಳ ಪ್ರಸ್ತುತ ಸ್ಥಿತಿ
ಗುರುವಾರ ಮಧ್ಯಾಹ್ನ 5:00 ಗಂಟೆಯ ವೇಳೆಗೆ ಸ್ವೀಕೃತವಾದ ಮಾಹಿತಿಯಂತೆ, ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ (TAR) ಸಿಲುಕಿಕೊಂಡಿರುವ ಹಾಗೂ ಇತರ ರಾಜ್ಯಗಳ ಜನರನ್ನೊಳಗೊಂಡ ತಂಡಗಳಲ್ಲಿ ಪ್ರಯಾಣಿಸುತ್ತಿರುವ ಕರ್ನಾಟಕದ 13 ವ್ಯಕ್ತಿಗಳ ವಿವರಗಳನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (SEOC) ಸಂಗ್ರಹಿಸಿದೆ. ಇವರಲ್ಲಿ 11 ವ್ಯಕ್ತಿಗಳು ಬೆಂಗಳೂರು ನಗರ ಜಿಲ್ಲೆಯವರಾಗಿದ್ದು, ಒಬ್ಬರು ಮೈಸೂರು ಜಿಲ್ಲೆ ಮತ್ತು ಇನ್ನೊಬ್ಬರು ಧಾರವಾಡ ಜಿಲ್ಲೆಗೆ ಸೇರಿದವರಾಗಿದ್ದಾರೆ. ಸಿಲುಕಿಕೊಂಡಿರುವ ಹೆಚ್ಚಿನ ವ್ಯಕ್ತಿಗಳು ನೇಪಾಳದ ರಸುವಾ ಜಿಲ್ಲೆಯ ತಿಮುರೆ ಪ್ರದೇಶದಲ್ಲಿದ್ದರೆ, ಕೆಲವರು ಟಿಬೆಟ್ ಸ್ವಾಯತ್ತ ಪ್ರದೇಶದ (TAR) ದಾರ್ಚೆನ್‌ಪ್ರದೇಶದಲ್ಲಿದ್ದಾರೆ.

ಕೇಂದ್ರ ಸರ್ಕಾರದೊಂದಿಗೆ ಸಮನ್ವಯತೆ
ನೇಪಾಳ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವ್ಯಕ್ತಿಗಳ ವಿವರಗಳನ್ನು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ಹೊಸ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರ ಕಚೇರಿಯು, ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ತ್ವರಿತ ಸ್ಪಂದನಾ ಕೋಶಗಳಿಗೆ (Rapid Response Cells) ಹಾಗೂ ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಿಗೆ ನಿಯಮಿತವಾಗಿ ಹಂಚಿಕೊಳ್ಳುತ್ತಿವೆ. ಕರ್ನಾಟಕದ ನಿವಾಸಿಗಳಿಗೆ ಸೂಕ್ತ ಸಮಯದಲ್ಲಿ ನೆರವು, ತೆರವು ಕಾರ್ಯಾಚರಣೆ ಮತ್ತು ಸುರಕ್ಷಿತವಾಗಿ ಹಿಂತಿರುಗಲು ಅನುಕೂಲವಾಗುವಂತೆ ಈ ವಿವರಗಳನ್ನ ಭಾರತ ಸರ್ಕಾರದ ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯೊಂದಿಗೂ (Integrated Control Room) ಹಂಚಿಕೊಳ್ಳಲಾಗಿದೆ.
ಆಕಸ್ಮಿಕ ಪ್ರವಾಹದಲ್ಲಿ ಸಿಲುಕಿಕೊಂಡವರು ಮತ್ತು ಸಂಬಂಧಿಕರಿಗೆ ಮನವಿ
ಆಕಸ್ಮಿಕ ಪ್ರವಾಹದಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳು, ಅವರ ಸಂಬಂಧಿಕರು ಮತ್ತು ಪ್ರವಾಸ ಸಂಘಟಕರು ಗೂಗಲ್ ಫಾರ್ಮ್ ಮೂಲಕ ಅಗತ್ಯ ವಿವರಗಳನ್ನು ಒದಗಿಸಲು ವಿನಂತಿಸಲಾಗಿದೆ. ಇದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರಕ್ಷಣೆ ಮತ್ತು ಸ್ಥಳಾಂತರ ಪ್ರಕ್ರಿಯೆಯನ್ನು ಸುಲಭಗೊಳಿಸಲು ರಾಜ್ಯ ಸರ್ಕಾರಕ್ಕೆ ನೆರವಾಗಲಿದೆ.
ಪೀಡಿತ ಪ್ರದೇಶಗಳಲ್ಲಿರುವ ವ್ಯಕ್ತಿಗಳಿಗೆ ಸಲಹೆ
ಪರಿಸ್ಥಿತಿಯು ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ, ಪೀಡಿತ ಪ್ರದೇಶಗಳಲ್ಲಿರುವ ಕರ್ನಾಟಕದ ಪ್ರಜೆಗಳು ಸುರಕ್ಷಿತ ಸ್ಥಳಗಳಲ್ಲೇ ಉಳಿಯಲು ಮತ್ತು ಸ್ಥಳೀಯ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿಗಳು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸಲಹೆ ನೀಡಲಾಗಿದೆ. ಸಕ್ಷಮ ಪ್ರಾಧಿಕಾರಗಳು ಅನುಮತಿಸದ ಹೊರತು ಅಥವಾ ವ್ಯವಸ್ಥೆ ಮಾಡದ ಹೊರತು ಹಾನಿಗೊಳಗಾದ ಮಾರ್ಗಗಳಲ್ಲಿ ಪ್ರಯಾಣಿಸದಂತೆ ಸೂಚಿಸಲಾಗಿದೆ.
