ಲಕ್ನೋ: ಕರ್ನಾಟಕ, ದೆಹಲಿ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲೂ (Uttar Pradesh) ಆಹಾರ ಸುರಕ್ಷತಾ ಇಲಾಖೆ (Food Safety) ಎಚ್ಚೆತ್ತುಕೊಂಡಿದೆ. ಅಧಿಕಾರಿಗಳು ಲೈಸೆನ್ಸ್ ಇಲ್ಲದೇ ಸಿಹಿತಿಂಡಿ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿ, ಮಾನವ ಬಳಕೆಗೆ ಯೋಗ್ಯವಲ್ಲದ ಸುಮಾರು 200 ಕೆಜಿ ಸಿಹಿತಿಂಡಿಗಳನ್ನು ವಶಪಡಿಸಿಕೊಂಡು ಸ್ಥಳದಲ್ಲೇ ನಾಶಪಡಿಸಿದ್ದಾರೆ.
ಲಕ್ನೋದ ನೀವಾ ಖಾಸಿಂ ಖೇಡಾದಲ್ಲಿರುವ ರಿಂಕು ಸ್ವೀಟ್ಸ್ ಘಟಕದ ಮೇಲೆ ಆಹಾರ ಸುರಕ್ಷತಾ ತಂಡ ಏಕಾಏಕಿ ದಾಳಿ ನಡೆಸಿದೆ. ತಪಾಸಣೆ ವೇಳೆ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಕಳಪೆ ಗುಣಮಟ್ಟದ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.
ಸುಮಾರು 20 ಸಾವಿರ ರೂ. ಮೌಲ್ಯದ 200 ಕೆಜಿ ಸಿಹಿತಿಂಡಿಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ಸ್ಥಳದಲ್ಲೇ ಅದನ್ನು ನಾಶಪಡಿಸಿದ್ದಾರೆ. ಇದರ ಜೊತೆಗೆ ಸುಮಾರು 40,860 ರೂ. ಮೌಲ್ಯದ 180 ಲೀಟರ್ ಸಂಸ್ಕರಿಸಿದ ಸೋಯಾಬೀನ್ ಎಣ್ಣೆಯನ್ನೂ ಸೀಜ್ ಮಾಡಲಾಗಿದೆ.
ಲ್ಯಾಬ್ ಟೆಸ್ಟ್‌ಗೆ ಸ್ಯಾಂಪಲ್
ಪೇಡಾ, ಸ್ಕಿಮ್ಡ್ ಮಿಲ್ಕ್ ಪೌಡರ್, ಸೋಯಾಬೀನ್ ಎಣ್ಣೆ ಹಾಗೂ ಬೆಳ್ಳಿ ಖಾದ್ಯ ಹಾಳೆಯ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇವುಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೈಸೆನ್ಸ್ ಇಲ್ಲದಿದ್ದಕ್ಕೆ ಫ್ಯಾಕ್ಟರಿ ಬಂದ್
ರಿಂಕು ಸ್ವೀಟ್ಸ್ ಫ್ಯಾಕ್ಟರಿ ಮಾನ್ಯ ಆಹಾರ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಘಟಕವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ 168 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ಡ್ರಗ್ ಪೆಡ್ಲರ್ ಅರೆಸ್ಟ್
ಆಹಾರ ತಯಾರಿಸುವ ಜಾಗದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ಕೂಡ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಲ್ಯಾಬ್ ವರದಿಯಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ದೃಢಪಟ್ಟರೆ, ಸಿಹಿತಿಂಡಿ ತಯಾರಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರು ಅಮಾನತು

