ಗುವಾಹಟಿ: ಅಸ್ಸಾಂನ (Assam) ಕಚಾರ್ (Cachar) ಜಿಲ್ಲೆಯಲ್ಲಿ ಡ್ರಗ್ಸ್ ಜಾಲವನ್ನು ಭೇದಿಸಿರುವ ಭದ್ರತಾ ಪಡೆಗಳು, ಸುಮಾರು 168 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಓರ್ವ ಡ್ರಗ್ ಪೆಡ್ಲರ್‌ನನ್ನು (Drug Peddler) ಬಂಧಿಸಿದೆ.
ಆಗಸ್ಟ್ 25-26ರ ಮಧ್ಯರಾತ್ರಿ ಕಚಾರ್ ಜಿಲ್ಲೆಯ ಲಖಿಪುರದ ಜುಜಾಂಗ್ ಪಹಾರ್ ಪ್ರದೇಶದಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಸಿಲ್ಚಾರ್‌ನ ಕಂದಾಯ ಗುಪ್ತಚರ ನಿರ್ದೇಶನಾಲಯ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಕಾರ್ಯಾಚರಣೆಯಲ್ಲಿ ಬರೋಬ್ಬರಿ 5.60 ಲಕ್ಷ ಯಾಬಾ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ತೂಕ ಸುಮಾರು 60 ಕೆ.ಜಿ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರಗ್ಸ್ ಸಾಗಾಟಕ್ಕೆ ಬಳಸಲಾಗುತ್ತಿದ್ದ ಟ್ರಕ್ ಒಂದನ್ನೂ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ನಾಡಗೀತೆ ಧಾಟಿ, ಅವಧಿ ನಿಗದಿ ವಿಚಾರ – ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಸುಪ್ರೀಂ ನಕಾರ
ಈ ಡ್ರಗ್ಸ್ ಸರಕು ಮಣಿಪುರದಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ-37 ಮೂಲಕ ಅಸ್ಸಾಂ ಕಡೆಗೆ ಮಾದಕ ವಸ್ತುಗಳನ್ನು ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಶಪಡಿಸಿಕೊಳ್ಳುವಿಕೆ ಅಂತಾರಾಜ್ಯ ಮಾದಕ ವಸ್ತು ಸಾಗಾಟ ಜಾಲಕ್ಕೆ ದೊಡ್ಡ ಹೊಡೆತ ನೀಡಿದೆ. ಈಶಾನ್ಯ ಭಾರತದ ಯುವಕರನ್ನು ಡ್ರಗ್ಸ್ ಜಾಲದಿಂದ ರಕ್ಷಿಸಲು ಹಾಗೂ ಮಾದಕ ವಸ್ತುಗಳ ಸಾಗಾಟ ಮಾರ್ಗಗಳನ್ನು ತಡೆಯಲು ಅಸ್ಸಾಂ ರೈಫಲ್ಸ್ ಕಾರ್ಯಾಚರಣೆ ಮುಂದುವರಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: 180 ಕೋಟಿ ಹೈಕಮಾಂಡ್‌ಗೆ ಹೋಗಿರೋದು ಬಾಯಿಬಿಟ್ರೆ ಕಷ್ಟ ಅಂತ ನಾಗೇಂದ್ರನನ್ನ ಕ್ಯಾಬಿನೆಟ್‌ಗೆ ತಗೊಂಡ್ರಾ? – ಅಶೋಕ್ ಪ್ರಶ್ನೆ
ಇತ್ತೀಚಿನ ವಾರಗಳಲ್ಲಿ ಅಸ್ಸಾಂ ಪೊಲೀಸರು ಕೂಡ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಇಬ್ಬರು ಶಿಕ್ಷಕರು ಅಮಾನತು
