-ತಳಿರು ತೋರಣಗಳಿಂದ ಕಂಗೊಳಿಸುತ್ತಿರುವ ಜಲಾಶಯ, ಸುತ್ತಲೂ ಬಿಗಿ ಬಂದೋಬಸ್ತ್
-ಕರ್ನಾಟಕ, ಆಂಧ್ರ, ತೆಲಂಗಾಣ ಸಿಎಂಗಳಿಂದ ಉದ್ಘಾಟನೆ
ಬಳ್ಳಾರಿ/ಕೊಪ್ಪಳ: ಕಲ್ಯಾಣ ಕರ್ನಾಟಕ ಸೇರಿ ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ (Tungabhadra Dam) ಹೊಸ ಕ್ರಸ್ಟ್‌ಗೇಟ್‌ಗಳ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ.
ನಾಳೆ (ಜೂ.25) ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಭರದ ಸಿದ್ಧತೆ ಕೈಗೊಳ್ಳಲಾಗಿದೆ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಸಿಎಂ ಸೇರಿದಂತೆ ರಾಜ್ಯದ ಸಚಿವರು ಬರುತ್ತಿರುವುದರಿಂದ ಜಲಾಶಯದ ಎಂಟ್ರಿ ಗೇಟ್ ಸೇರಿದಂತೆ ಸುತ್ತಲೂ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆಂಧ್ರಪ್ರದೇಶದಲ್ಲಿ ಉದ್ಘಾಟನೆ
ಇನ್ನೂ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಸದ ಕೆ.ರಾಜಶೇಖರ ಹಿಟ್ನಾಳ, ರಾಯಚೂರು ವಿಧಾನ ಪರಿಷತ್ ಶಾಸಕರಾದ ಎನ್.ಎಸ್. ಬೋಸರಾಜು ಭೇಟಿ ನೀಡಿ, ಅಂತಿಮ ಹಂತದ ಸಿದ್ಧತೆಯನ್ನು ಪರಿಶೀಲಿಸಿದರು. ಈ ವೇಳೆ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಇಟ್ನಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಬಳ್ಳಾರಿ ವಲಯದ ಐಜಿಪಿ ಡಾ.ಪಿ.ಎಸ್ ಹರ್ಷ, ಗಂಗಾವತಿ ಡಿವೈಎಸ್ಪಿ ನ್ಯಾಮಗೌಡ ಹಾಗೂ ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೊಳ ಅವರು ವೇದಿಕೆ, ಭದ್ರತಾ ವ್ಯವಸ್ಥೆ, ವಾಹನ ನಿಲುಗಡೆ, ಸಂಚಾರ ನಿರ್ವಹಣೆ, ಕುಡಿಯುವ ನೀರು, ವಿದ್ಯುತ್ ಹಾಗೂ ಸಾರ್ವಜನಿಕರ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹಾಜರಿದ್ದರು.

ಕಾರ್ಯಕ್ರಮದ ಹಿನ್ನೆಲೆ ವಿಜಯನಗರ ಡಿಸಿ ಕವಿತಾ ಮನ್ನಿಕೇರಿ ಹಾಗೂ ಎಸ್ಪಿ ಜಾಹ್ನವಿ ಎಸ್ ಅವರು ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ನಾಳೆ ನಮ್ಮ ರಾಜ್ಯದ ಸಿಎಂ, ಕೇಂದ್ರ ಸಚಿವರು, ಆಂಧ್ರ ಸಿಎಂ ಮತ್ತು ತೆಲಂಗಾಣ ಸಿಎಂ ಬರ್ತಿದ್ದಾರೆ. ರಾಜ್ಯದ ಶಾಸಕರು ಮತ್ತು ಸಚಿವರು ಎಲ್ಲರೂ ಬರ್ತಿದ್ದಾರೆ. ಡ್ಯಾಮ್ ಮೇಲೆ ಎಂಎಲ್‌ಎ, ಎಂಪಿಗಳಿಗೆ ಮಾತ್ರ ಪ್ರವೇಶ. ಒಂದೇ ಸಲ ನಾಲ್ಕು ಗೇಟ್‌ಗಳನ್ನ ಓಪನ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಬಳಿಕ ಕೊಪ್ಪಳದ ಮುನಿರಾಬಾದ್‌ನಲ್ಲಿ ವೇದಿಕೆ ಕಾರ್ಯಕ್ರಮ ಇರುತ್ತದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬಾಗಿಲು ಮುಚ್ಚುವ ವಿಚಾರಕ್ಕೆ ಜಗಳ; ಚಲಿಸುತ್ತಿದ್ದ ರೈಲಿನಲ್ಲೇ ಚಾಕುವಿನಿಂದ ಇರಿದು ಯುವಕನ ಹತ್ಯೆ

ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಗಣ್ಯರು ಆಗಮಿಸುವ ಹಿನ್ನೆಲೆ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಪೊಲೀಸ್ ಇಲಾಖೆ, ನೀರಾವರಿ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಈ ಮಹತ್ವದ ಸಮಾರಂಭಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಸುಗಮ ಸಂಚಾರ ಮತ್ತು ಭದ್ರತೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಲಾಶಯದ ಮೇಲ್ಭಾಗ ಹಾಗೂ ಮುಂಭಾಗದಲ್ಲಿ ತಳಿರು ತೋರಣ ಹಾಗೂ ಹೂವಿನಿಂದ ಅಲಂಕರಿಸಿದ್ದು, ಕಂಗೊಳಿಸುತ್ತಿದೆ.ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನ: ಎಕರೆಗೆ 2.70 ಕೋಟಿ ಪರಿಹಾರಕ್ಕೆ ಶಿಫಾರಸು
