– ಆರ್ಥಿಕ ಸ್ಥಿತಿ ಕುರಿತು ವಿಜಯ್ ಸರ್ಕಾರದ ಶ್ವೇತಪತ್ರ ಬಿಡುಗಡೆ
ಚೆನ್ನೈ: ಹಲವು ಗ್ಯಾರಂಟಿ ಜಾರಿ ಮಾಡಿ ಅಧಿಕಾರಕ್ಕೆ ಏರಿರುವ (CM Vijay)ವಿಜಯ್ ಸರ್ಕಾರ ಈಗ ತಮಿಳುನಾಡು ರಾಜ್ಯದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಶ್ವೇತಪತ್ರ(white paper) ಬಿಡುಗಡೆ ಮಾಡಿದೆ. ರಾಜ್ಯದ ಒಟ್ಟು ಹಣಕಾಸು ಸಾಲ 13.18 ಲಕ್ಷ ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿರುವ ಶ್ವೇತಪತ್ರದ ಅನುಸಾರ, ರಾಜ್ಯದ ನೇರ ಸಾಲದ ಮೊತ್ತ ಈಗ ಸುಮಾರು 10 ಲಕ್ಷ ಕೋಟಿ ರೂ.ಗೆ ತಲುಪಿದೆ. ಐದು ವರ್ಷಗಳ ಹಿಂದೆ ಈ ಮೊತ್ತ ಸುಮಾರು 4.8 ಲಕ್ಷ ಕೋಟಿ ರೂ. ಇತ್ತು. ಕಳೆದ ಐದು ವರ್ಷಗಳಲ್ಲಿ ಸಾಲದ ಪ್ರಮಾಣ ಬಹುತೇಕ ದ್ವಿಗುಣಗೊಂಡಿದೆ.
ಸಾಲದ ಹೊರೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ, ತಮಿಳುನಾಡಿನಲ್ಲಿ ಜನಿಸುವ ಪ್ರತಿಯೊಂದು ಮಗುವಿನ ಮೇಲೂ ಸರಾಸರಿ 1.28 ಲಕ್ಷ ರೂ. ಸಾಲದ ಹೊರೆ ಇದೆ. ನೇರ ಸಾಲದ ಜೊತೆಗೆ, ಸರ್ಕಾರದ ಖಾತೆ ಹೊರಗಿನ ಸಾಲಗಳು, ಗ್ಯಾರಂಟಿಗಳು ಮತ್ತು ಇತರೆ ಹಣಕಾಸು ಬಾಧ್ಯತೆಗಳನ್ನು ಸೇರಿಸಿದರೆ ರಾಜ್ಯದ ಒಟ್ಟು ಹೊರೆ 13.18 ಲಕ್ಷ ಕೋಟಿ ರೂ.ಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: Operation Tiger | ಟಿಎಂಸಿ ಬಳಿಕ ಉದ್ಧವ್ ಶಿವಸೇನೆ ಸರದಿ – 16 ಶಾಸಕರು, 7 ಸಂಸದರು ಗುಡ್‌ಬೈ ಹೇಳುವ ಸಾಧ್ಯತೆ
ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಾಜ್ಯದ ಸಾಲದ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಈ ಅವಧಿಯಲ್ಲಿ ಹೆಚ್ಚಿದ ಸಾಲದ ಮೊತ್ತವು ಹಿಂದಿನ ಹಲವು ದಶಕಗಳಲ್ಲಿ ಸಂಗ್ರಹವಾಗಿದ್ದ ಸಾಲಕ್ಕಿಂತಲೂ ಹೆಚ್ಚಾಗಿದೆ ಎಂದು ವರದಿ ಸೂಚಿಸಿದೆ.
ಶ್ವೇತಪತ್ರದ ಪ್ರಕಾರ, ರಾಜ್ಯದ ಬಾಕಿ ಸಾಲದ ಪ್ರಮಾಣ 28.2% ಇದೆ. ಇದೇ ವೇಳೆ ಹಣಕಾಸು ಕೊರತೆ 78,324 ಕೋಟಿ ರೂ.ಗೆ ತಲುಪಿದೆ. ಸರ್ಕಾರ ಗಳಿಸುವ ಪ್ರತಿ ಒಂದು ರೂಪಾಯಿಯಲ್ಲಿ 22.8 ಪೈಸೆ ಕೇವಲ ಬಡ್ಡಿ ಪಾವತಿಗೆ ಖರ್ಚಾಗುತ್ತಿದೆ ಎಂದು ವರದಿ ತಿಳಿಸಿದೆ. ಆದಾಯ ಸಂಗ್ರಹಣೆಯಲ್ಲೂ ಸವಾಲುಗಳಿವೆ ಎಂದು ಶ್ವೇತಪತ್ರ ಉಲ್ಲೇಖಿಸಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯದ ಬೆಳವಣಿಗೆ ಕೇವಲ 5.45% ದಾಖಲಾಗಿದೆ. ವೆಚ್ಚ ಮತ್ತು ಸಾಲದ ಹೊರೆ ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಪ್ರಮಾಣ ಸಾಕಾಗುವುದಿಲ್ಲ ಎಂದು ವರದಿ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದ?: ಪ್ರಿಯಾಂಕ್ ಖರ್ಗೆ
ಕಳೆದ ತಿಂಗಳು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ವಿಜಯ್ ಸರ್ಕಾರದ ಪ್ರಮುಖ ಘೋಷಣೆಗಳಲ್ಲಿ ಈ ಶ್ವೇತಪತ್ರವೂ ಒಂದಾಗಿದ್ದು, ಹಿಂದಿನ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರದಿಂದ ಬಂದಿದ್ದ ಹಣಕಾಸಿನ ಸ್ಥಿತಿಯ ಚಿತ್ರಣವನ್ನು ಇದರಲ್ಲಿ ನೀಡಲಾಗಿದೆ.
