Recent News

ಸುವರ್ಣ ಸುಂದರಿ ಟ್ರೈಲರ್ ಜ.19ಕ್ಕೆ ರಿಲೀಸ್

ಬೆಂಗಳೂರು: ಬಾಹುಬಲಿ ಚಿತ್ರ ನೋಡಿ ಅದರ ಅದ್ಧೂರಿತನಕ್ಕೆ ಮಾರು ಹೋಗದವರಿಲ್ಲ. ಆದರೀಗ ಅಂಥಾದ್ದೇ ಗುಣಲಕ್ಷಣ ಹೊಂದಿರೋ ಅಪ್ಪಟ ಕನ್ನಡ ಚಿತ್ರವೊಂದನ್ನು ನೋಡೋ ಭಾಗ್ಯ ಕನ್ನಡದ ಪ್ರೇಕ್ಷಕರಿಗೆ ಒದಗಿ ಬಂದಿದೆ. ಅದಕ್ಕೆ ಕಾರಣವಾಗಿರೋದು ಎಸ್ ಟೀಮ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ತಯಾರಾಗಿರುವ ‘ಸುವರ್ಣ ಸುಂದರಿ’ ಚಿತ್ರ. ಇದೀಗ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮಹೂರ್ತ ಫಿಕ್ಸಾಗಿದೆ.

ಇದೇ 19ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಒಂದು ಟ್ರೈಲರ್ ಮತ್ತು ಪೋಸ್ಟರ್ ಗಳೇ ಜನಮನ ಸೆಳೆದಿದ್ದವು. ಇದೀಗ ಪ್ರೇಕ್ಷಕರಿಗೆ ಎರಡನೇ ಟ್ರೈಲರ್ ನೋಡೋ ಅವಕಾಶ ಸಿಗಲಿದೆ. ಸೂರ್ಯ ನಿರ್ದೇಶನದ ಈ ಚಿತ್ರ ನಾಲ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ ನಿರೀಕ್ಷೆ ಮೂಡಿಕೊಳ್ಳಲು ಸಾಕಷ್ಟು ಕಾರಣಗಳಿವೆ!

ಬಾಹುಬಲಿ ಚಿತ್ರ ಜನಮನ ಸೂರೆಗೊಂಡಿದ್ದಕ್ಕೆ ಅದರಲ್ಲಿನ ಗ್ರಾಫಿಕ್ಸ್ ಕೈಚಳಕವೂ ಮೂಲ ಕಾರಣ. ಆದರೆ ಕನ್ನಡದಂಥಾ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ಧೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ಸುವರ್ಣ ಸುಂದರಿ ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಕಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್ ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.

ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ 45 ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗದೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *