ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಪ್ರತಿಭಟನೆ ವೇಳೆ ಶಿಕ್ಷಕಿಯೊಬ್ಬರು ಸಚಿವರ ಕಾಲಿಗೆ ಬಿದ್ದು ಮನವಿ ಸಲ್ಲಿಸಿದ್ದಾರೆ. ಕೂಡಲೇ ಸಚಿವರು ಹೀಗೆಲ್ಲ ಮಾಡೋದು ತಪ್ಪು ಎಂದು ಹೇಳಿ ಶಿಕ್ಷಕಿಯ ಕಾಲಿಗೆ ನಮಸ್ಕರಿಸಿದರು.
ಬಸವೇಶ್ವರ ನಗರದಲ್ಲಿರುವ ಸುರೇಶ್ ಕುಮಾರ್ ನಿವಾಸಕ್ಕೆ ಆಗಮಿಸಿದ ನೂರಾರು ಶಿಕ್ಷಕರು ಪ್ರತಿಭಟನೆಗೆ ಮುಂದಾದರು. ಕೂಡಲೇ ಸಚಿವರು ಬಂದು ಶಿಕ್ಷಕರ ಬಳಿ ಮಾತನಾಡಿ ಅಹವಾಲು ಸ್ವೀಕರಿಸಿದರು. ಶಿಕ್ಷಕರೊಂದಿಗೆ ಚರ್ಚಿಸಿ ಕೂಡಲೇ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಯಾವ ಶಿಕ್ಷಕರು ಪ್ರತಿಭಟನೆ ಮಾಡಿಲ್ಲ. ನನ್ನನ್ನು ಭೇಟಿಯಾಗಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಕೆಲವು ಶಿಕ್ಷಕ ವರ್ಗ ವರ್ಗಾವಣೆ ಮಾಡಬೇಕು, ಮತ್ತೆ ಕೆಲವರು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ವಾರ ಬಂದು ಮನವಿ ಮಾಡಿಕೊಂಡಾಗ ಕಡ್ಡಾಯ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕೆಲವು ಶಿಕ್ಷಕರೊಂದಿಗೆ ಬಂದು ಕಷ್ಟ ಹೇಳಿಕೊಂಡಿದ್ದಾರೆ. ಕಡ್ಡಾಯ ವರ್ಗಾವಣೆಯ ವಿಚಾರವನ್ನೇ ಕೈ ಬಿಡಬೇಕೆಂದು ಎಂದು ಹೇಳುತ್ತಿದ್ದಾರೆ.
Advertisement
ಗ್ರಾಮೀಣ ಮತ್ತು ನಗರ ಭಾಗದ ಶಿಕ್ಷಕರ ಮನವಿಗಳು ತುಂಬಾ ವಿಭಿನ್ನವಾಗಿವೆ. ಇಬ್ಬರಿಗೂ ಅವರದ್ದೇ ಆದ ಕಷ್ಟಗಳಿವೆ. 2017ರಲ್ಲಿ ತನ್ವೀರ್ ಸೇಠ್ ಅವರಿದ್ದಾಗ ಕಡ್ಡಾಯ ವರ್ಗಾವಣೆ ಜಾರಿಗೆ ಬಂದಿತ್ತು. ಕೆಲ ಲೋಪ ದೋಷಗಳಿಂದಾಗಿ ಶಿಕ್ಷಕರು ಕಷ್ಟ ಅನುಭವಿಸುತ್ತಿದ್ದಾರೆ. ಲೋಪ ದೋಷಗಳನ್ನು ಸರಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಾಧ್ಯವಾದಷ್ಟು ಎಲ್ಲರಿಗೂ ನ್ಯಾಯ ನೀಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.