– ಪಾಕ್ ಮಧ್ಯಸ್ಥಿಕೆಯಲ್ಲಿ ಸಕ್ಸಸ್ ಆಗುತ್ತಾ ಸಂಧಾನ?
ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಕೊನೆಗಾಣಿಸುವ ಶಾಂತಿ ಒಪ್ಪಂದಕ್ಕೆ ಮುಂದಿನ 24 ಗಂಟೆಗಳಲ್ಲಿ ಅಮೆರಿಕ – ಇರಾನ್ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಹೇಳಿದ್ದಾರೆ.
We are closer to a peace deal than ever before. With finalisation likely expected in the next 24 hours, Pakistan is preparing for the electronic signing of the peace deal immediately after, followed by technical level talks next week.
We would like to thank United States of…
— Shehbaz Sharif (@CMShehbaz) June 13, 2026
ತನ್ನ 5 ಬೇಡಿಕೆಗಳನ್ನ ಒಪ್ಪಿದರಷ್ಟೇ ಸಂಧಾನ ಮಾಡಿಕೊಳ್ಳುವುದಾಗಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಷರತ್ತು ವಿಧಿಸಿದ ಕೆಲ ಗಂಟೆಗಳಲ್ಲಿ ಪಾಕ್ ಪ್ರಧಾನಿಯಿಂದ (Pakistan PM) ಈ ಹೇಳಿಕೆ ಹೊರಬಂದಿದೆ. ಶೆಹಬಾಜ್ ಷರೀಫ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊಟ್ಟ ಮಾತಿಗೆ ತಪ್ಪೋದು ಅಮೆರಿಕದ ಹುಟ್ಟುಗುಣ – 5 ಬೇಡಿಕೆ ಒಪ್ಪಿದರಷ್ಟೇ ಸಂಧಾನ ಎಂದ ಇರಾನ್
ʻಉಭಯ ದೇಶಗಳು ಹಿಂದೆಂದಿಗಿಂತಲೂ ಶಾಂತಿ ಪಪ್ಪಂದಕ್ಕೆ ಹತ್ತಿರವಾಗುತ್ತಿವೆ. ಮುಂದಿನ 24 ಗಂಟೆಗಳಲ್ಲಿ ಎರಡೂ ರಾಷ್ಟ್ರಗಳು ಒಪ್ಪಂದವನ್ನು ಅಂತಿಮಗೊಳಿಸಿ ಸಹಿ ಹಾಕುವ ನಿರೀಕ್ಷೆಯಿದೆ. ಅದಕ್ಕಾಗಿ ಪಾಕಿಸ್ತಾನವು ಸಹಿ ಪ್ರಕ್ರಿಯೆಗೆ ತಕ್ಷಣವೇ ತಯಾರಿ ನಡೆಸುತ್ತಿದೆ. ಅದರ ನಂತರ ಇರಾನ್‌ನ ಪರಮಾಣು ಕಾರ್ಯಕ್ರಮದ ಭವಿಷ್ಯ ಸೇರಿದಂತೆ ಒಪ್ಪಂದದ ವಿವರಗಳನ್ನು ರೂಪಿಸಲು ತಾಂತ್ರಿಕ ಮಟ್ಟದ ಮಾತುಕತೆಗಳು ಮುಂದಿನ ವಾರ ಪ್ರಾರಂಭವಾಗಲಿವೆʼ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಲ್ಲದೇ, ʻಮಾತುಕತೆಗಳ ಸಂದರ್ಭದಲ್ಲಿ ತೋರಿದ ಬದ್ಧತೆಗಾಗಿ ನಾವು ಅಮೆರಿಕ ಮತ್ತು ಇರಾನ್‌ಗೆ ಧನ್ಯವಾದ ಅರ್ಪಿಸುತ್ತೇವೆ. ಜೊತೆಗೆ ಈ ಪ್ರದೇಶದಲ್ಲಿ ಬೆಂಬಲ ವ್ಯಕ್ತಪಡಿಸಿದ ಎಲ್ಲ ಸಹೋದರರಿಗೆ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತೇವೆ. ಈ ಐತಿಹಾಸಿಕ ಶಾಂತಿ ಒಪ್ಪಂದವು ವಿಶ್ವದ ಶಾಶ್ವತ ಶಾಂತಿಗೆ ಬಲವಾದ ಅಡಿಪಾಯ ಹಾಕಿಕೊಡುತ್ತದೆ ಅನ್ನೋ ವಿಶ್ವಾಸ ನಮಗಿದೆʼ ಎಂದು ಷರೀಫ್ ತಿಳಿಸಿದ್ದಾರೆ.

ಮತ್ತೆ 5 ಬೇಡಿಕೆ ಇಟ್ಟ ಇರಾನ್
ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ನಮ್ಮ ಬೇಡಿಕೆಗಳನ್ನ ಒಪ್ಪಿದರಷ್ಟೇ ಸಂಧಾನ ಮಾಡಿಕೊಳ್ಳುವುದಾಗಿ ಹೇಳಿದ್ದರು. ಇದನ್ನೂ ಓದಿ: ಭಾರತದ ಹಡಗು ಮೇಲೆ ದಾಳಿ ನಡೆಸಿದ್ದು ಯಾರು? – ಇರಾನ್ ವಿರುದ್ಧ ಟ್ರಂಪ್ ಕೆಂಡಾಮಂಡಲ
ಇರಾನ್‌ನ ಪ್ರಮುಖ ಬೇಡಿಕೆಗಳೇನು?
ಇರಾನ್ ಮತ್ತು ಒಮನ್ ಸಮುದ್ರ ಮಾರ್ಗಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿವೆ. ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ, ಅಲ್ಲಿ ನೇರ ತೆರಿಗೆಗಳನ್ನು ಸಂಗ್ರಹಿಸಲಾಗುವುದಿಲ್ಲ. ಹಾಗಾಗಿ ಅಲ್ಲಿ ಹಾದುಹೋಗುವ ಹಡಗುಗಳಿಗೆ ಸೆಸ್ ವಿಧಿಸಲಾಗುತ್ತದೆ. ಅಲ್ಲದೇ ಹಾರ್ಮುಜ್ ಜಲಸಂಧಿಯಲ್ಲಿ (Strait Of Hormuz) ಕಡಲ ಭದ್ರತೆ ಖಚಿತಪಡಿಸುವುದು ಮತ್ತು ನೌಕಾ ದಿಗ್ಭಂಧನ ತೆಗೆದುಹಾಕುವುದು, ಸ್ಥಗಿತಗೊಂಡಿರುವ ಇರಾನ್ ನಿಧಿಗಳನ್ನ ಬಿಡುಗಡೆಗೊಳಿಸಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದ್ದರು.

ಇಡೀ ಒಪ್ಪಂದವನ್ನ ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ, ಪರಮಾಣು ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದನ್ನು ಸಂಪೂರ್ಣವಾಗಿ 2ನೇ ಹಂತಕ್ಕೆ ಮುಂದೂಡಲಾಗಿದೆ. ಪುಷ್ಟೀಕರಿಸಿದ ಯುರೇನಿಯಂ ಬಗ್ಗೆ ಇರಾನ್‌ನ ನಿಲುವು ಕೂಡ ಸ್ಪಷ್ಟವಾಗಿದೆ. ಯುರೇನಿಯಂನ ಸಾಮರ್ಥ್ಯವನ್ನ ಕಡಿಮೆ ಮಾಡುವ ಅಗತ್ಯವಿದ್ದಲ್ಲಿ, ಅದನ್ನು ಬೇರೆ ಯಾವುದೇ ದೇಶದಲ್ಲಿ ಅಲ್ಲ, ಇರಾನ್‌ನೊಳಗೇ ಮಾಡಲಾಗುತ್ತದೆ ಎಂದು ಖಡಕ್ಕಾಗಿ ತಿಳಿಸಿದ್ದರು.
ಈಗಾಗಲೇ ಅಮೆರಿಕ ಇರಾನ್‌ನ ನಿಧಿಗಳನ್ನ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದೆ. ಆದ್ರೆ ಕೊಟ್ಟ ಮಾತಿಗೆ ತಪ್ಪುವುದು, ಭರವಸೆಗಳನ್ನು ಮುರಿಯುವುದು ಅಮೆರಿಕದ ಹುಟ್ಟುಗುಣ. ಆದ್ದರಿಂದ ಈ ಕರಡಿನಲ್ಲಿ ಪ್ರಸ್ತಾಪಿಸಲಾದ ಷರತ್ತುಗಳನ್ನು ಒಪ್ಪಿದರಷ್ಟೇ ಸಂಧಾನ ಎಂದು ಅರಘ್ಚಿ ಎಚ್ಚರಿಸಿದ್ದರು.
