– ಹಡಗುಗಳಿಗೆ ಶುಲ್ಕ, ಸ್ಥಗಿತಗೊಂಡ ಇರಾನ್ ನಿಧಿಗಳ ಬಿಡುಗಡೆಗೆ ಪಟ್ಟು
– ಪುಷ್ಟೀಕರಿಸಿದ ಯುರೇನಿಯಂ ವಿಚಾರದಲ್ಲಿ ಇರಾನ್ ನಿಲುವು ಸ್ಪಷ್ಟ
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷದಲ್ಲಿ ನಿರತವಾಗಿರುವ ಅಮೆರಿಕ ಮತ್ತು ಇರಾನ್ (US vs Iran), ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಲು ಕಂಡು ಕೇಳರಿಯದ ಯುದ್ಧ ತಂತ್ರದ ಮೊರೆ ಹೋಗುತ್ತಿವೆ. ಈ ಮಧ್ಯೆ ಇರಾನ್ ಮತ್ತೆ ಯುದ್ಧಕೊನೆಗೊಳಿಸುವ ಮಾತುಕತೆಗೆ (Iran Deal) ಆಸಕ್ತಿ ತೋರಿದೆ. ತನ್ನ 5 ಬೇಡಿಕೆಗಳನ್ನು ಒಪ್ಪಿದರಷ್ಟೇ ಸಂಧಾನ ಮಾಡಿಕೊಳ್ಳುವುದಾಗಿ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಅಮೆರಿಕದ (America) ಜೊತೆಗೆ ನಡೆಯುತ್ತಿರುವ ಸಂಧಾನ ಮಾತುಕತೆ ಕುರಿತ ಹಲವು ವಿಷಯಗಳನ್ನ ಪ್ರಸ್ತಾಪಿಸಿದ್ದಾರೆ. ಜೊತೆಗೆ ಅಮೆರಿಕಕ್ಕೆ ನೇರ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇರಾನ್‌ನ ಪ್ರಮುಖ ಬೇಡಿಕೆಗಳೇನು?
ಇರಾನ್ ಮತ್ತು ಒಮನ್ ಸಮುದ್ರ ಮಾರ್ಗಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿವೆ. ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ, ಅಲ್ಲಿ ನೇರ ತೆರಿಗೆಗಳನ್ನು ಸಂಗ್ರಹಿಸಲಾಗುವುದಿಲ್ಲ. ಹಾಗಾಗಿ ಅಲ್ಲಿ ಹಾದುಹೋಗುವ ಹಡಗುಗಳಿಗೆ ಸೆಸ್ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ ಹಾರ್ಮುಜ್ ಜಲಸಂಧಿಯಲ್ಲಿ (Strait Of Hormuz) ಕಡಲ ಭದ್ರತೆ ಖಚಿತಪಡಿಸುವುದು ಮತ್ತು ನೌಕಾ ದಿಗ್ಭಂಧನ ತೆಗೆದುಹಾಕುವುದು, ಸ್ಥಗಿತಗೊಂಡಿರುವ ಇರಾನ್ ನಿಧಿಗಳನ್ನ ಬಿಡುಗಡೆಗೊಳಿಸುವುದು ಒಪ್ಪಂದದಲ್ಲಿ ಸೇರಿವೆ. ಜೊತೆಗೆ ಯುರೇನಿಯಂ ಒಪ್ಪಂದದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಈ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಿದ ಅರಘ್ಚಿ, ಇಡೀ ಒಪ್ಪಂದವನ್ನ ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ ಹಂತದಲ್ಲಿ, ಪರಮಾಣು ವಿಷಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅದನ್ನು ಸಂಪೂರ್ಣವಾಗಿ 2ನೇ ಹಂತಕ್ಕೆ ಮುಂದೂಡಲಾಗಿದೆ. ಪುಷ್ಟೀಕರಿಸಿದ ಯುರೇನಿಯಂ ಬಗ್ಗೆ ಇರಾನ್‌ನ ನಿಲುವು ಕೂಡ ಸ್ಪಷ್ಟವಾಗಿದೆ. ಯುರೇನಿಯಂನ ಸಾಮರ್ಥ್ಯವನ್ನ ಕಡಿಮೆ ಮಾಡುವ ಅಗತ್ಯವಿದ್ದಲ್ಲಿ, ಅದನ್ನು ಬೇರೆ ಯಾವುದೇ ದೇಶದಲ್ಲಿ ಅಲ್ಲ, ಇರಾನ್‌ನೊಳಗೇ ಮಾಡಲಾಗುತ್ತದೆ ಎಂದು ಖಡಕ್ಕಾಗಿ ಹೇಳಿದ್ದಾರೆ.

ಭದ್ರತೆ ವಿಚಾರದಲ್ಲಿ ಇರಾನ್ ತನ್ನ ರಕ್ಷಣೆಗಾಗಿ ವಿಶ್ವಸಂಸ್ಥೆ ಅಥವಾ ಇನ್ಯಾವುದೇ ವಿದೇಶಿ ಒಕ್ಕೂಟವನ್ನ ಅವಲಂಬಿಸಿಲ್ಲ. ದೇಶದ ಜನರು ಮತ್ತು ನಮ್ಮ ಸೈನ್ಯವನ್ನು ಮಾತ್ರ ಅವಲಂಬಿಸಿದೆ. ಇರಾನಿನ ರಾಜತಾಂತ್ರಿಕರು ಮತ್ತು ಮಿಲಿಟರಿ ಕಮಾಂಡರ್‌ಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿ… ಈಗಾಗಲೇ ಅಮೆರಿಕ ಇರಾನ್‌ನ ನಿಧಿಗಳನ್ನ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದೆ. ಆದ್ರೆ ಕೊಟ್ಟ ಮಾತಿಗೆ ತಪ್ಪುವುದು, ಭರವಸೆಗಳನ್ನು ಮುರಿಯುವುದು ಅಮೆರಿಕದ ಹುಟ್ಟುಗುಣ. ಆದ್ದರಿಂದ ಈ ಕರಡಿನಲ್ಲಿ ಪ್ರಸ್ತಾಪಿಸಲಾದ ಷರತ್ತುಗಳನ್ನು ಒಪ್ಪಿದರಷ್ಟೇ ಸಂಧಾನ ಎಂದು ಅರಘ್ಚಿ ಹೇಳಿದ್ದಾರೆ.
