ಕೋಲಾರ: ಸಾಲ (Debt) ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ (Father) ರಾಡ್‌ನಿಂದ ಹೊಡೆದು ಮಗ (Son) ಕೊಂದಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಇನ್ನೂ ಘಟನೆ ಸಂಬಂಧ 24 ಗಂಟೆಯೊಳಗೆ ಪ್ರಕರಣ ಭೇದಿಸಿ ಆರೋಪಿಯನ್ನ ಬಂಧಿಸಲಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ (Bangarpet) ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಸಾಲ ತೀರಿಸಲು ತಂದೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಗನೇ ತಂದೆಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಇದಾಗಿದೆ. ಬಂಗಾರಪೇಟೆ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣದ ಬೆನ್ನತ್ತಿದ ಬಂಗಾರಪೇಟೆ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯನಗರ ಬಡಾವಣೆಯ ವೆಂಕಟಕೃಷ್ಣ ಬಾಬು (70) ಕೊಲೆಯಾದವರು. ಅವರ ಇಬ್ಬರು ಪುತ್ರರಲ್ಲಿ ದೊಡ್ಡ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದು, ಚಿಕ್ಕ ಮಗ ಸೀಮೇಶ್ಕರ್ ತಂದೆಯೊಂದಿಗೆ ಬಂಗಾರಪೇಟೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಚಿಕ್ಕ ಮಗ ಸೀಮೇಶ್ಕರ್ ಸುಮಾರು 75 ಸಾವಿರ ರೂ. ಕೈಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ತಂದೆಯ ಬಳಿ ಹಣ ನೀಡುವಂತೆ ಪದೇಪದೇ ಒತ್ತಾಯಿಸುತ್ತಿದ್ದ. ಇದೇ ವಿಚಾರವಾಗಿ ಆ.29ರ ರಾತ್ರಿ ತಂದೆ-ಮಗನ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ನಕಲಿ ಔಷಧಿ ದಂಧೆ – ಕಿಂಗ್‌ಪಿನ್ ಪ್ರಶಾಂತ್ ಕಸ್ಟಡಿಗೆ ಪಡೆಯಲು SIT ಸಜ್ಜು
ಮಾತಿಗೆ ಮಾತು ಬೆಳೆದು ಕೋಪಗೊಂಡ ಸೀಮೇಶ್ಕರ್, ಮನೆಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಂದೆಯ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ವೆಂಕಟಕೃಷ್ಣ ಬಾಬು ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಿದರೂ, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಯಾರೋ ಅಪರಿಚಿತರು ಮನೆಗೆ ನುಗ್ಗಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ, ಘಟನೆಗೆ ಸಂಬಂಧಿಸಿದಂತೆ ವೀಡಿಯೋವನ್ನೂ ಕಳುಹಿಸಲಾಗಿದೆ. ಬಳಿಕ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು ಘಟನಾ ಸ್ಥಳ, ಗಾಯಗಳ ಸ್ವರೂಪ ಹಾಗೂ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಪರಿಶೀಲಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ವಿಚಾರಣೆ ತೀವ್ರಗೊಳಿಸಿದಾಗ ಹಣದ ವಿಚಾರಕ್ಕೆ ತಂದೆ-ಮಗನ ನಡುವೆ ನಡೆದ ಜಗಳವೇ ಕೊಲೆಗೆ ಕಾರಣ ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಂನಿಂದ ನಿರಂತರ ಕಾವೇರಿ ನೀರು; ಒಳಹರಿವು ಕುಸಿತ
ಸದ್ಯ ಆರೋಪಿ ಸೀಮೇಶ್ಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ವಿವರ ಬಯಲಾಗಿದೆ. ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ ಆರೋಪಿಯನ್ನು 24 ಗಂಟೆಯೊಳಗೆ ಪತ್ತೆಹಚ್ಚಿದ ಬಂಗಾರಪೇಟೆ ಪೊಲೀಸರ ಕಾರ್ಯಾಚರಣೆಯನ್ನು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಪ್ರಶಂಸಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ 31 ಬಾಂಗ್ಲಾ ಪ್ರಜೆಗಳ ಗಡಿಪಾರು
