Sunday, 15th December 2019

ಸಹೋದರಿ ಬರ್ತ್ ಡೇ- ಸಂಪಾದಿಸಿದ ಹಣದಿಂದ್ಲೇ ಮಕ್ಕಳಿಗೆ ಅರ್ಜುನ್ ಇಟಗಿ ಸಹಾಯ ಹಸ್ತ

ಕೊಪ್ಪಳ: ಖಾಸಗಿ ವಾಹಿನಿಯ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಸಣ್ಣ ವಯಸ್ಸಿನಲ್ಲೇ ದೊಡ್ಡ ಯಶಸ್ಸು ಗಳಿಸಿಕೊಂಡ ಅರ್ಜುನ್ ಇಟಗಿ, ಸಂತ್ರಸ್ತರಿಗೆ ಸಹಾಯ ಮಾಡುವ ಮೂಲಕ ಈಗ ಮತ್ತೆ ಸುದ್ದಿಯಾಗಿದ್ದಾನೆ. ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳಿಗೆ ಅರ್ಜುನ್ ಸಹಾಯಹಸ್ತ ಚಾಚಿದ್ದಾನೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅರ್ಜುನ್ ಇಟಗಿ ತನ್ನದೇ ಸ್ಟೈಲ್‍ನಲ್ಲಿ ಹಾಡುತ್ತಾ, ಹಾಸ್ಯನಟರ ಧ್ವನಿಗಳನ್ನು ಮಿಮಿಕ್ರಿ ಮಾಡುತ್ತಾ ರಂಜಿಸಿದ್ದಾನೆ. ಈತನ ತುಂಟಾಟಗಳಿಗೆ ನಗುತ್ತಾ, ಹಾಡಿಗೆ ವಿದ್ಯಾರ್ಥಿಗಳು ಕೂಡ ತಲೆದೂಗಿದ್ದಾರೆ.

9 ವರ್ಷದ ಅರ್ಜುನ್ ಅಲ್ಲಿ ನೆರೆದಿದ್ದವರ ರಂಜಿಸಿಲ್ಲ. ಬದಲಿಗೆ ಎಲ್ಲರಿಗೂ ಮಾದರಿಯಾಗೋ ಕೆಲಸ ಮಾಡಿದ್ದಾನೆ. ಈ ಹೊಸಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಮಕ್ಕಳಿಗೆ ಪೆನ್ನು, ನೋಟ್‍ಬುಕ್ ಸಹಾಯ ಮಾಡಿದ್ದಾನೆ. ಬಡತನದಲ್ಲಿ ಬೆಳೆದಿದ್ದರೂ ತನ್ನ ಸಹೋದರಿ ಅಪೂರ್ವಳ ಹುಟ್ಟುಹಬ್ಬದ ಅಂಗವಾಗಿ ತಾನು ಸಂಪಾದಿಸಿದ ಹಣದಲ್ಲೇ ಮತ್ತೊಬ್ಬರಿಗೆ ಸಹಾಯ ಹಸ್ತ ಚಾಚಿದ್ದಾನೆ.

ಈ ಎಳೆವಯಸ್ಸಿನಲ್ಲೇ ಅರ್ಜುನ್ ಇಟಗಿಯ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಕಿತ್ತೂರ್ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು ಧನ್ಯವಾದ ತಿಳಿಸಿದ್ದಾರೆ. ಅರ್ಜುನ್ ಎಂದಿನಂತೆ ಎಲ್ಲ ಹಾಡು ಹಾಡುತ್ತಲೇ ವಿದ್ಯಾರ್ಥಿನಿಯರ ನಡುವೆ ಬಂದು ನಟಿಸಿದ್ರು. ವಿದ್ಯಾರ್ಥಿನಿಯರು ಕೂಡ ಅರ್ಜುನ್ ಕೈ ಹಿಡಿದು ನಟಿಸಿದ್ರು. ಅದರಲ್ಲೂ ಗಾನಯೋಗಿ ಗುರುವೇ ಹಾಡಿಗಂತು ಥೇಟ್ ಪಂಚಾಕ್ಷರಿ ಗವಾಯಿಗಳ ರೀತಿಯಲ್ಲೇ ಮನಮುಟ್ಟುವಂತೆ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದನು.

ಒಟ್ಟಿನಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ವಯಸ್ಸಿನಲ್ಲೇ ಮತ್ತೊಬ್ಬರ ಸಹಾಯಕ್ಕೆ ಮುಂದಾಗಿರೋ ಅರ್ಜುನ್ ನಿಜವಾಗಿಯೂ ಮಾದರಿ ಎನಿಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *