ನವದೆಹಲಿ: ದೇಶದಲ್ಲಿ ತೀವ್ರ ಸಂಚಲನ ಮೂಡಿಸಿರುವ ಅಸಾಮಾನ್ಯ ಬೆಳವಣಿಗೆಯೊಂದರಲ್ಲಿ ರಾಜಸ್ಥಾನ ಹೈಕೋರ್ಟ್‌ನ(Rajasthan High Court) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಪ್ರಕಾಶ್ ಶರ್ಮಾ(ACJ Sanjeev Prakash Sharma) ಅವರನ್ನು ತಕ್ಷಣವೇ ಹುದ್ದೆಯಿಂದ ತೆರವುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ನ್ಯಾ. ಸಂದೀಪ್ ಮೆಹ್ತಾ(Justice Sandeep Mehta) ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಮೂರು ಪತ್ರಗಳನ್ನು ಬರೆದಿದ್ದಾರೆ.
ಮೂಲತಃ ರಾಜಸ್ಥಾನ ಹೈಕೋರ್ಟ್‌ನಿಂದಲೇ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಹೊಂದಿರುವ ನ್ಯಾ.ಮೆಹ್ತಾ ಅವರು ನ್ಯಾ. ಶರ್ಮಾ ಅವರ ಕಾರ್ಯವೈಖರಿಯು ನ್ಯಾಯಮೂರ್ತಿ ಹುದ್ದೆಗೆ ಶೋಭೆ ತರುವಂತಿಲ್ಲ ಎಂದು ಆರೋಪಿಸಿದ್ದಾರೆ. ನ್ಯಾ. ಶರ್ಮಾ ಅವರ ಪ್ರಾಮಾಣಿಕತೆ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ. ಪದೇಪದೇ ಕಳವಳಗಳು ವ್ಯಕ್ತವಾಗುತ್ತಿದ್ದರೂ ಅವರು ಆ ಹುದ್ದೆಯಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಗಸ್ಟ್ 2, 10 ಮತ್ತು 17 ರಂದು ಬರೆಯಲಾದ ಈ ಪತ್ರಗಳ ಪ್ರತಿಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂನ ಇತರ ಸದಸ್ಯರಿಗೆ ಹಾಗೂ ಭಾರತದ ರಾಷ್ಟ್ರಪತಿಗಳಿಗೂ ರವಾನಿಸಲಾಗಿದೆ.
ಪತ್ರದಲ್ಲಿ ಏನಿದೆ?
ನ್ಯಾ.ಶರ್ಮಾ ಅವರ ನ್ಯಾಯಾಂಗ ಕಾರ್ಯವೈಖರಿಯ ಬಗ್ಗೆ ತಮಗೆ ಹಲವಾರು ದೂರುಗಳು ಬಂದಿವೆ ಎಂದು ಮೆಹ್ತಾ ಮೊದಲ ಪತ್ರದಲ್ಲಿ ತಿಳಿಸಿದ್ದಾರೆ. ತಾವು ರಾಜಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಹೈಕೋರ್ಟ್‌ನ ಹಲವು ನ್ಯಾಯಮೂರ್ತಿಗಳು ತಮ್ಮ ಅಳಲು ತೋಡಿಕೊಂಡಿದ್ದು, ಸಿಜೆಐ ಜೊತೆ ತಮಗೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡು ಹಂಗಾಮಿ ಸಿಜೆ ಅವರು ವರ್ಗಾವಣೆ ಸೇರಿದಂತೆ ಪ್ರತೀಕಾರದ ಕ್ರಮಗಳ ಬೆದರಿಕೆ ಹಾಕುತ್ತಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದರು ಎಂದು ಉಲ್ಲೇಖಿಸಿದ್ದಾರೆ.
ಕೆಲವು ನಿರ್ದಿಷ್ಟ ವಕೀಲರು ಹಾಗೂ ಕಕ್ಷಿದಾರರಿಗೆ ಅನುಕೂಲ ಮಾಡಿಕೊಟ್ಟಿರುವ ನಿರ್ದಿಷ್ಟ ಪ್ರಕರಣಗಳನ್ನು ಎರಡನೇ ಪತ್ರದಲ್ಲಿ ನ್ಯಾ.ಮೆಹ್ತಾ ವಿವರಿಸಿದ್ದಾರೆ. ಹಲವು ಮೇಲ್ಮನವಿಗಳ ವಿಚಾರಣೆ, ವಿಶೇಷ ಮೇಲ್ಮನವಿಯೊಂದರಲ್ಲಿ 457 ದಿನಗಳ ವಿಳಂಬವನ್ನು ಮನ್ನಾ ಮಾಡಿದ ಆದೇಶ ಹಾಗೂ ಕ್ರಿಮಿನಲ್ ಪ್ರಕರಣವೊಂದರಲ್ಲಿ ನ್ಯಾಯಾಲಯ ನಡೆದುಕೊಂಡ ರೀತಿಯನ್ನು ಅವರು ಪ್ರಸ್ತಾಪಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ರೋಸ್ಟರ್ ಅಧಿಕಾರ ಮತ್ತು ಹುದ್ದೆಯ ದುರುಪಯೋಗವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಬಣ್ಣಿಸಿದ್ದಾರೆ.
ನ್ಯಾ. ಶರ್ಮಾ ಅವರನ್ನು ಬರೋಬ್ಬರಿ 10 ತಿಂಗಳಷ್ಟು ಅಸಾಮಾನ್ಯ ದೀರ್ಘಾವಧಿಯವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಮುಂದುವರಿಯಲು ಹೇಗೆ ಅನುಮತಿಸಲಾಗಿದೆ ಎಂದು ಮೆಹ್ತಾ ಪ್ರಶ್ನಿಸಿದ್ದಾರೆ. ಈ ಹಿಂದೆ ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದ ನ್ಯಾ.ಶರ್ಮಾ ಅವರನ್ನು ಹಿಂದಿನ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಜಸ್ಥಾನಕ್ಕೆ ಮರಳಿ ತರಲು ಮಾರ್ಚ್ 2023 ರಲ್ಲಿ ಕೊಲಿಜಿಯಂ ನಿರಾಕರಿಸಿತ್ತು ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಸ್ಥಳಾಂತರಿಸಲು ಪ್ರಸ್ತಾಪಿಸಿತ್ತು. ಆದರೆ ನಂತರ ಮೇ 2026 ರಲ್ಲಿ ಅವರನ್ನು ರಾಜಸ್ಥಾನಕ್ಕೆ ಮರಳಲು ಕೊಲಿಜಿಯಂ ಅನುಮತಿ ನೀಡಿದ್ದು ಅರ್ಥಹೀನ ಮತ್ತು ಗ್ರಹಿಕೆಗೆ ಮೀರಿದ್ದು ಎಂದು ಮೆಹ್ತಾ ಹೇಳಿದ್ದಾರೆ.
ಜಿಲ್ಲಾ ನ್ಯಾಯಾಂಗದಲ್ಲಿ ಹಿರಿಯ ಅಧಿಕಾರಿಯಾಗಿರುವ ಹಾಲಿ ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಪತ್ನಿಯ ವಿರುದ್ಧ ನ್ಯಾ.ಶರ್ಮಾ ಸೇಡಿನ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಬಂದ ಸಂದೇಶವನ್ನು ಮೆಹ್ತಾ ಉಲ್ಲೇಖಿಸಿದ್ದಾರೆ.
ಸುಮಾರು 40 ನ್ಯಾಯಾಲಯ ಕೊಠಡಿಗಳನ್ನು ಹೊಂದಿದ್ದರೂ ಒಂದು ವರ್ಷದಿಂದ ಸಂಪೂರ್ಣವಾಗಿ ಸಿದ್ಧವಾಗಿದ್ದ ನೂತನ ಜೋಧಪುರ ಜಿಲ್ಲಾ ನ್ಯಾಯಾಲಯ ಕಟ್ಟಡದ ಉದ್ಘಾಟನೆಯನ್ನು ಏಕಪಕ್ಷೀಯವಾಗಿ ತಡೆಹಿಡಿದಿದ್ದಾರೆ. ಹಲವು ನ್ಯಾಯಾಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದರೂ ಮೂಲಸೌಕರ್ಯ ಬದಲಾವಣೆಗೆ ಆದೇಶಿಸಿದ್ದನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಇದನ್ನು ಆಡಳಿತಾತ್ಮಕ ಉದಾಸೀನತೆ, ಅಸಾಮರ್ಥ್ಯ ಮತ್ತು ಸಂಪೂರ್ಣ ಸಂಸ್ಥೆ-ವಿರೋಧಿ ನಿಲುವು ಎಂದು ಕರೆದಿದ್ದಾರೆ.
ಜುಲೈ 25, 2026 ರಂದು ವಕೀಲರೊಬ್ಬರು ನ್ಯಾ.ವಿಕ್ರಮ್ ನಾಥ್ ಅವರಿಗೆ ಬರೆದ ಪ್ರತ್ಯೇಕ ದೂರಿನಲ್ಲಿ ಖಾಯಂ ಲೋಕ ಅದಾಲತ್‌ಗಳ ನೇಮಕಾತಿಯಲ್ಲಿ ಸ್ವಜನಪಕ್ಷಪಾತ ನಡೆದಿದ್ದು, ಕೆಲವರ ನೇಮಕದಲ್ಲಿ ಕುಟುಂಬ ಅಥವಾ ಆಪ್ತ ವೈಯಕ್ತಿಕ ಸಂಬಂಧಗಳು ಒಳಗೊಂಡಿವೆ ಎಂದು ಆರೋಪಿಸಲಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ತಕ್ಷಣವೇ ಸಭೆ ಸೇರಿ, ಬೇರೆ ಹೈಕೋರ್ಟ್‌ನಿಂದ ಖಾಯಂ ಮುಖ್ಯ ನ್ಯಾಯಮೂರ್ತಿಯನ್ನು ರಾಜಸ್ಥಾನಕ್ಕೆ ನೇಮಿಸಬೇಕು ಹಾಗೂ ನ್ಯಾ. ಶರ್ಮಾ ಅವರನ್ನು ರಾಜಸ್ಥಾನದಿಂದ ಹೊರಗೆ ವರ್ಗಾಯಿಸಬೇಕು ಎಂದು ನ್ಯಾ.ಮೆಹ್ತಾ ಒತ್ತಾಯಿಸಿದ್ದಾರೆ. ಇಂತಹ ವಿಚಾರಗಳಲ್ಲಿ ನಿಷ್ಕ್ರಿಯತೆ ಮುಂದುವರಿದರೆ ಅದು ಕೋರ್ಟ್ ಹಿತಾಸಕ್ತಿಗೆ ಸಂಪೂರ್ಣ ಮಾರಕ ಎಂದು ಅವರು ಎಚ್ಚರಿಸಿದ್ದಾರೆ.
ನ್ಯಾ. ಸಂಜೀವ್ ಪ್ರಕಾಶ್ ಶರ್ಮಾ ಅವರು ಸೆಪ್ಟೆಂಬರ್ 26 ರಂದು ನಿವೃತ್ತರಾಗುವ ಮುನ್ನವೇ ಈ ಗಂಭೀರ ಆರೋಪ ಕೇಳಿಬಂದಿದ್ದು ತೀವ್ರ ಸಂಚಲನ ಸೃಷ್ಟಿಸಿದೆ.
