Tuesday, 17th September 2019

Recent News

ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

ನವದೆಹಲಿ: ಸ್ಯಾಮ್ ಸಂಗ್ 23.3% ಸ್ಮಾರ್ಟ್ ಫೋನ್ ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) 2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಸಾಗಾಟ ಮಾಡಿದ ಕಂಪೆನಿಗಳ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಸ್ಯಾಮ್ ಸಂಗ್ 7.82 ಕೋಟಿ ಫೋನ್‍ಗಳನ್ನು ಮಾರಾಟ ಮಾಡಿ, 23.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ವರ್ಷ ಈ ಅವಧಿಗೆ ಹೋಲಿಸಿದರೆ 2.4% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

ಜಾಗತಿಕವಾಗಿ ಮೊದಲ ತ್ರೈಮಾಸಿಕದಲ್ಲಿ 33.43 ಕೋಟಿ ಸ್ಮಾರ್ಟ್ ಫೋನ್‍ಗಳು ಮಾರಾಟಗೊಂಡಿದ್ದರೆ 2017ರ ಈ ಅವಧಿಯಲ್ಲಿ 34.44 ಕೋಟಿ ಫೋನ್‍ಗಳು ಮಾರಾಟಗೊಂಡಿತ್ತು. ಈ ವರ್ಷ 2.4% ಮಾರಾಟ ಕಡಿಮೆಯಾಗಿದೆ ಎಂದು ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ತಿಳಿಸಿದೆ.

ಸ್ಮಾರ್ಟ್ ಫೋನ್ ಸಾಗಾಟ ಕಡಿಮೆಯಾಗಲು ಚೀನಾ ಮಾರುಕಟ್ಟೆ ಕಾರಣ. ಚೀನಾದ ಜನತೆ ದುಬಾರಿ ಬೆಲೆ ಫೋನ್ ಖರೀದಿಸುತ್ತಿದ್ದಾರೆ. ಈ ಫೋನ್‍ಗಳು ಹೆಚ್ಚು ದಿನಗಳ ಕಾಲ ಬಳಸುತ್ತಿರುವುದರಿಂದ ಸ್ಮಾರ್ಟ್ ಫೋನ್ ಮಾರಾಟ ಇಳಿಕೆಯಾಗಿದೆ ಎಂದು ಐಡಿಸಿ ತಿಳಿಸಿದೆ.

ಜಾಗತಿಕವಾಗಿ ಹಾಗೂ ಚೈನಾದಲ್ಲಿ ಜನರು ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್‍ಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಅವುಗಳು ಹೆಚ್ಚು ಕಾಲ ಬಳಕೆಯಲ್ಲಿರುತ್ತವೆ ಹಾಗಾಗಿ ಸ್ಮಾರ್ಟ್ ಫೋನ್ ಸಾಗಾಟ ಇಳಿಕೆ ಕಂಡಿದೆ ಎಂದು ಐಡಿಸಿ ಸಂಶೋಧಕಿ ಮೆಲಿಸಾ ಚೌ ತಿಳಿಸಿದ್ದಾರೆ. ಡಾಲರ್ ಲೆಕ್ಕದಲ್ಲಿ ನೋಡಿದರೆ ಸ್ಮಾರ್ಟ್ ಫೋನ್ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬಳಕೆದಾರರು ತಮ್ಮ ಬಹುತೇಕ ಕೆಲಸಗಳ ಲೆಕ್ಕಾಚಾರಗಳಿಗೆ ಸ್ಮಾರ್ಟ್ ಫೋನ್ ಅನ್ನು ಅವಲಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆಪಲ್ 5.22 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 15.6% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 2.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಹುವಾವೇ 3.93 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿದ್ದು, 11.8% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 13.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ.

ಕ್ಸಿಯೋಮಿ 2.80 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 8.4% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 87.8% ಅಷ್ಟು ಮಾರುಕಟ್ಟೆ ಪಾಲು ಹೆಚ್ಚಾಗಿದೆ. ಒಪ್ಪೊ 2.39 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಮಾರಾಟ ಮಾಡಿ, 7.1% ಮಾರುಕಟ್ಟೆ ಪಾಲನ್ನು ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 7.5% ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

ಇತರೆ ಕಂಪೆನಿಗಳು ಒಟ್ಟು 11.27 ಕೋಟಿ ಸ್ಮಾರ್ಟ್ ಫೋನ್‍ಗಳನ್ನು ಸಾಗಾಟ ಮಾಡಿದ್ದು, 33.7% ಮಾರುಕಟ್ಟೆ ಪಾಲನ್ನು ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 18.5% ಅಷ್ಟು ಮಾರುಕಟ್ಟೆ ಪಾಲು ಕಡಿಮೆಯಾಗಿದೆ.

 

Leave a Reply

Your email address will not be published. Required fields are marked *