ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಈಗ ಶೋಕಛಾಯೆ ವ್ಯಕ್ತವಾಗಿದೆ. ಕಳೆದ ತಿಂಗಳು ಕಾಡಾನೆ ದಾಳಿಯಲ್ಲಿ ಬಿಡಾರದ ಹಿರಿಯಾನೆ ಟಸ್ಕರ್ ಮೃತಪಟ್ಟಿತ್ತು. ಈ ದು:ಖ ಮರೆಯಾಗುವ ಮುನ್ನವೇ ಇಲ್ಲಿಂದ ವಿವಿಧ ವಯೋಮಾನದ ಐದು ಆನೆಗಳನ್ನು ಉತ್ತರ ಪ್ರದೇಶ ರಾಜ್ಯಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ.
ಶಿವಮೊಗ್ಗ ಸಮೀಪ ಇರುವ ಸಕ್ರೆಬೈಲು ಆನೆ ಬಿಡಾರದಲ್ಲಿನ ಆನೆಗಳನ್ನು ಉತ್ತರ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಗೆ ಕಳಿಸಲಾಗುತ್ತಿದೆ. ಪ್ರವಾಸಿಗರ ಆಕರ್ಷಣೆಯಾಗಿರುವುದು ಬಿಡಾರದಲ್ಲಿನ 22 ಆನೆಗಳಿದ್ದು, ಇವುಗಳಲ್ಲಿ ಈಗ ಉತ್ತರ ಪ್ರದೇಶಕ್ಕೆ ಕೊಡಲು ಐದು ಆನೆಗಳನ್ನು ಗುರುತಿಸಲಾಗಿದೆ. ರಾಜ್ಯದಿಂದ ಐದು ಆನೆಗಳನ್ನು ಒಟ್ಟಿಗೆ ಬೇರೆ ರಾಜ್ಯಕ್ಕೆ ಕೊಡುಗೆಯಾಗಿ ಕೊಡುತ್ತಿರುವುದು ಇದೇ ಮೊದಲಾಗಿದೆ.
Advertisement
ಒಂದೂವರೆ ವರ್ಷದ ಪಾರ್ವತಿ, ನಾಲ್ಕು ವರ್ಷದ ಕಿರಣ, ಐದು ವರ್ಷದ ಭಾಸ್ಕರ, ಹದಿಮೂರು ವರ್ಷದ ಅಮೃತಾ, ಮೂವತ್ತು ವರ್ಷದ ರಾಘವೇಂದ್ರ ಈಗ ಉತ್ತರ ಪ್ರದೇಶಕ್ಕೆ ಹೊರಡಲಿರುವ ಆನೆಗಳು. ಈ ಆನೆಗಳನ್ನು ಪ್ರದೇಶದ ದುದ್ವಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಫಾರಿಗಾಗಿ ಬಳಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
Advertisement
ಈ ಐದು ಆನೆಗಳಿಗೆ ಹೊಂದಿಕೊಳ್ಳಲು ಉತ್ತರ ಪ್ರದೇಶದ ಮಾವುತರು ಇಲ್ಲಿಗೆ ಬಂದು ತರಬೇತಿ ಪಡೆಯಲಿದ್ದಾರೆ. ನಂತರ ನವೆಂಬರ್ ಮೊದಲ ವಾರದಲ್ಲಿ ಈ ಆನೆಗಳನ್ನು ಸಾಗಿಸಲಾಗುವುದು. ಇಲ್ಲಿಂದ ಕೆಲ ಮಾವುತರು ಅಲ್ಲಿಗೆ ತೆರಳಿ ಆನೆಗಳು ಹೊಂದಿಕೊಂಡ ನಂತರ ಹಿಂತಿರುಗಲಿದ್ದಾರೆಂದು ವನ್ಯಜೀವಿ ವಿಭಾಗ ಇಲಾಖೆ ಅರಣ್ಯಾಧಿಕಾರಿ ಮುಕುಂದ್ ರಾಜ್ ತಿಳಿಸಿದರು.
Advertisement