ಟೆಹರಾನ್: ಇರಾನ್ (Iran) ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ali Khamenei) ಅವರ ಅಂತ್ಯಕ್ರಿಯೆ ಮತ್ತು ವಿದಾಯ ಕಾರ್ಯಕ್ರಮಗಳು ಜುಲೈ 4 ರಿಂದ ಜುಲೈ 9 ರ ನಡುವೆ ನಡೆಯಲಿವೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಗಳು ಅಧಿಕೃತವಾಗಿ ವರದಿ ಮಾಡಿವೆ.
ಕಳೆದ ಫೆಬ್ರವರಿ 28 ರಂದು ಅಮೆರಿಕ(USA) ಮತ್ತು ಇಸ್ರೇಲ್ (Isreal) ಜಂಟಿ ವಾಯುದಾಳಿ ನಡೆಸಿ 86 ವರ್ಷದ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿತ್ತು. ಆದರೆ ಯುದ್ಧದ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದಾಗಿ ಅವರ ಅಂತ್ಯಸಂಸ್ಕಾರವನ್ನು ಸುಮಾರು ನಾಲ್ಕು ತಿಂಗಳುಗಳ ಕಾಲ ಮುಂದೂಡಲಾಗಿತ್ತು.
ಅಂತ್ಯ ಸಂಸ್ಕಾರ ಕಾರ್ಯಕ್ರಮಗಳು ಜುಲೈ 4 ರಿಂದ ಪ್ರಾರಂಭವಾಗಲಿದ್ದು, ಜುಲೈ 9 ರಂದು ಅಂತ್ಯಕ್ರಿಯೆ ನೆರವೇರಲಿದೆ. ಖಮೇನಿರಾಷ್ಟ್ರೀಯ ಅಂತ್ಯಸಂಸ್ಕಾರದ ಕಾರ್ಯಕ್ರಮಗಳು ಅಮೆರಿಕದ ಸ್ವಾತಂತ್ರ್ಯ ದಿನವಾದ ಜುಲೈ 4 ರಂದೇ ಆರಂಭವಾಗುತ್ತಿರುವುದು ವಿಶೇಷ.
ಅಲಿ ಖಮೇನಿ ಅವರು ತಮ್ಮ 37 ವರ್ಷಗಳ ಆಡಳಿತದುದ್ದಕ್ಕೂ ಅಮೆರಿಕದ ನೀತಿಗಳನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದರು. ಅಮೆರಿಕದ ದಾಳಿಯಲ್ಲೇ ಮರಣ ಹೊಂದಿದ ಇರಾನ್ ನಾಯಕನ ವಿದಾಯ ಸಮಾರಂಭವು, ಅದೇ ಅಮೆರಿಕದ ಅತ್ಯಂತ ಪ್ರಮುಖ ರಾಷ್ಟ್ರೀಯ ಹಬ್ಬದ ದಿನದಂದೇ ಆರಂಭವಾಗುತ್ತಿರುವುದು ಈಗ ಜಾಗತಿಕ ರಾಜಕೀಯ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಅಮೆರಿಕ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ: ಶೆಹಬಾಜ್ ಷರೀಫ್

ವಿಳಂಬಕ್ಕೆ ಕಾರಣ ಏನು?
ಫೆಬ್ರವರಿಯಲ್ಲಿ ಜಂಟಿ ವಾಯುದಾಳಿ ನಡೆದ ತಕ್ಷಣವೇ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವೆ ತೀವ್ರ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಅಂತ್ಯಕ್ರಿಯೆಯ ವೇಳೆ ದೇಶ ವಿದೇಶಗಳ ಲಕ್ಷಾಂತರ ಜನ ಸೇರುವುದರಿಂದ, ಆ ಸಂದರ್ಭವು ಇಸ್ರೇಲ್‌ನ ಮತ್ತೊಂದು ವೈಮಾನಿಕ ದಾಳಿಗೆ ಸುಲಭ ತುತ್ತಾಗಬಹುದು ಎಂಬ ಭೀತಿ ಇರಾನ್ ಸರ್ಕಾರಕ್ಕೆ ಇತ್ತು.
ಸದ್ಯ ಏಪ್ರಿಲ್ 8 ರಿಂದ ಕದನ ವಿರಾಮ ಜಾರಿಯಲ್ಲಿದ್ದು, ದೇಶಗಳ ನಡುವೆ ಶಾಂತಿ ಒಪ್ಪಂದದ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪುತ್ತಿರುವುದರಿಂದ ಈಗ ಅಂತ್ಯಕ್ರಿಯೆಗೆ ಸುರಕ್ಷಿತ ದಿನಾಂಕವನ್ನು ನಿಗದಿಪಡಿಸಲಾಗಿದೆ.
6 ದಿನಗಳ ಅಂತಿಮ ವಿದಾಯ
ಜುಲೈ 4 ಮತ್ತು 5: ಟೆಹರಾನ್‌ನ ಗ್ರಾಂಡ್ ಮೊಸಲ್ಲಾದಲ್ಲಿ (Tehran Mosalla) ಅಲಿ ಖಮೇನಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗುವುದು.
ಜುಲೈ 6 : ರಾಜಧಾನಿ ಟೆಹರಾನ್‌ನಲ್ಲಿ ಬೃಹತ್ ಸಾರ್ವಜನಿಕ ಶೋಕಯಾತ್ರೆ ಮತ್ತು ಅಂತಿಮ ವಿದಾಯ ಮೆರವಣಿಗೆ ಜರುಗಲಿದೆ.
ಜುಲೈ 7: ಶಿಯಾ ಮುಸ್ಲಿಮರ ಪವಿತ್ರ ಧಾರ್ಮಿಕ ನಗರಿ ‘ಕೋಮ್’ (Qom) ನಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಜುಲೈ 9: ಖಮೇನಿ ಅವರ ಸ್ವಂತ ಊರಾದ ಮಶಹದ್ (Mashhad) ನಗರದಲ್ಲಿ ಕೊನೆಯ ಅಂತ್ಯಕ್ರಿಯೆ ನಡೆಸಿ, ಅಲ್ಲಿನ ಪ್ರಸಿದ್ಧ ‘ಇಮಾಮ್ ರೆಜಾ’ ಪವಿತ್ರ ದರ್ಗಾದಲ್ಲಿ ಅವರ ಪಾರ್ಥಿವ ಶರೀರವನ್ನು ದಫನ್ ಮಾಡಲಾಗುತ್ತದೆ.
ಜುಲೈ 9 ರ ದಿನವು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಇಮಾಮ್ ಸಜ್ಜದ್ ಅವರ ಪುಣ್ಯತಿಥಿಯ ಮುನ್ನಾದಿನವಾಗಿದೆ. ಇಮಾಮ್ ಸಜ್ಜದ್ ಅವರು ಶಿಯಾ ಇಸ್ಲಾಂ ಧರ್ಮದಲ್ಲಿ 4ನೇ ಅತ್ಯಂತ ಪವಿತ್ರ ಇಮಾಮ್ ಆಗಿದ್ದಾರೆ. ಶಿಯಾ ಸಮುದಾಯದಲ್ಲಿ ಇಮಾಮ್ ಸಜ್ಜದ್ ಅವರಿಗೆ ಅತ್ಯುನ್ನತ ಮತ್ತು ಗೌರವಾನ್ವಿತ ಸ್ಥಾನವಿದೆ. ಈ ಕಾರಣಕ್ಕೆ ಶಿಯಾ ಮುಸ್ಲಿಮರಿಗೆ ಜುಲೈ 9 ಅತ್ಯಂತ ಭಾವನಾತ್ಮಕ ಮತ್ತು ಪವಿತ್ರ ದಿನವಾಗಿದೆ.
ಕುಟುಂಬಸ್ಥರ ಶವಸಂಸ್ಕಾರ:
ದಾಳಿಯ ವೇಳೆ ಅಲಿ ಖಮೇನಿ ಅವರೊಂದಿಗೆ ಮೃತಪಟ್ಟಿದ್ದ ಹೊಂದಿದ ಅವರ ಕುಟುಂಬದ ನಾಲ್ಕು ಸದಸ್ಯರ ಶವಸಂಸ್ಕಾರವೂ ಇದೇ ಸಮಯದಲ್ಲಿ ನೆರವೇರಲಿದೆ.
