Tuesday, 16th July 2019

ಒಳ್ಳೆಯ ಕಥೆ ಬಂದ್ರೆ ದರ್ಶನ್ ಜೊತೆ ಸಿನಿಮಾ ಮಾಡ್ತೀನಿ: ಯಶ್

ಮಂಡ್ಯ: ಒಂದು ವೇಳೆ ಒಳ್ಳೆಯ ಕಥೆ ಬಂದರೆ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಮುಗಿದ ಬಳಿಕ ಯಶ್ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ದರು. ಈ ವೇಳೆ ಕೇಳಿದ ಪ್ರಶ್ನೆಗೆ, ದರ್ಶನ್ ಜೊತೆ ಸಿನಿಮಾ ಮಾಡಬೇಕೆಂದರೆ ಅವರೊಬ್ಬ ದೊಡ್ಡ ಸ್ಟಾರ್. ಒಳ್ಳೆಯ ಕಥೆ ಸಿಗಬೇಕು. ಒಂದು ವೇಳೆ ಒಳ್ಳೆಯ ಕಥೆ ಬಂದರೆ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ ಎಂದು ಹೇಳಿದರು.

ಜೋಡೆತ್ತು ಸಿನೆಮಾ ಸೆಟ್ಟೇರುವ ವಿಚಾರವಾಗಿ ಮಾತನಾಡಿದ ಅವರು, ದರ್ಶನ್ ಪ್ರೀತಿಯಿಂದ ಜೋಡೆತ್ತು ಎಂದು ಹೇಳಿದ್ದರು. ದರ್ಶನ್ ನನಗಿಂತ ಸೀನಿಯರ್ ನಟ. ದರ್ಶನ್ ಹೇಳಿದ್ದು ತುಂಬಾ ಫೇಮಸ್ ಆಯಿತು. ಜೋಡೆತ್ತು ಟೈಟಲ್ ರಿಜಿಸ್ಟ್ರರ್ ಆಗಿದೆ. ನಾನೇನು ಆ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಎಂದರು.

ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶ್, ಚುನಾವಣೆ ಮುಗಿದ ಮೇಲೆ ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿಲ್ಲ. ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಬಾರಿ ಮಂಡ್ಯಕ್ಕೆ ಬಂದಿದ್ದೆ. ನಮಗೇನು ಮಂಡ್ಯ ಹೊಸದಲ್ಲ, ಚುನಾವಣೆಗೂ ಮುನ್ನವೂ ಮಂಡ್ಯ ಗೊತ್ತು. ಚುನಾವಣೆ ಆದ ಮೇಲೂ ಗೊತ್ತು. ಚುನಾವಣೆ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಾ ಮಾತನಾಡುತ್ತಿದ್ದೆ. ಈಗ ನಮ್ಮ ಹುಡುಗರೊಬ್ಬರ ಗೃಹ ಪ್ರವೇಶ ಇತ್ತು ಅದಕ್ಕೆ ಮಂಡ್ಯಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಚುನಾವಣೆ ಮುಗಿದ ಬಳಿಕ ಸುಮಲತಾ ರನ್ನು ಭೇಟಿ ಮಾಡಿದ್ದೆ. ಸುಮಲತಾ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಒಳ್ಳೆ ವಾತಾವರಣ ಇದೆ. ಮಂಡ್ಯ ಫಲಿತಾಂಶವನ್ನ ನಿರ್ದಿಷ್ಟವಾಗಿ ಹೇಳುವುದಕ್ಕೆ ಆಗಲ್ಲ. ಫಲಿತಾಂಶದ ಬಗ್ಗೆ ಪಾಸಿಟೀವ್ ಅಭಿಪ್ರಾಯವಿದೆ. ಒಳ್ಳೆದಾಗುತ್ತದೆ ಎಂಬ ಭರವಸೆ ಇದೆ. ಈಗಲೇ ಗೆಲುವಿನ ಅಂತರ ಹೇಳಿದರೆ ಕೊಚ್ಚಿಕೊಂಡತಾಗುತ್ತೆ. ಅದು ತೂಕವಿಲ್ಲದ ಮಾತಾಗುತ್ತದೆ. ಹೀಗಾಗಿ ಜನರೇ ತೀರ್ಮಾನ ಮಾಡುತ್ತಾರೆ. ಜನರು ಕೊಟ್ಟ ಉತ್ತರದ ಮೇಲೆ ಮಾತನಾಡೋಣ ಎಂದು ಚುನಾವಣೆ ಫಲಿತಾಂಶದ ಬಗ್ಗೆ ಯಶ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಜನರು ಆಯ್ಕೆ ಮಾಡಿದ ಬಳಿಕ ಸಾರ್ವಜನಿಕರ ಕೆಲಸವನ್ನು ಮಾಡುವುದು ಅವರ ಕರ್ತವ್ಯವಾಗಿದೆ. ಅದನ್ನು ಜನರಿಗೆ ಒಳ್ಳೆಯದು ಮಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಜನರ ಜೊತೆ ನಾವು ಇದ್ದೀವೆ ಗೆಲ್ಲಿಸಿ ಅನ್ನುವುದು ಬೇರೆ. ಚುನಾವಣೆ ಗೆಲ್ಲಲಿ, ಬಿಡಲಿ ನಾನು ದರ್ಶನ್ ಜನರ ಜೊತೆ ಇರುತ್ತೇವೆ. ಚುನಾವಣೆಗೂ ಅದಕ್ಕೂ ಸಂಬಂಧ ಇಲ್ಲ. ಮಂಡ್ಯಕ್ಕೂ ಬರುತ್ತೇನೆ. ನಾನು ಮಂಡ್ಯ ರಾಜಕಾರಣಕ್ಕೆ ಬರಲ್ಲ. ಸ್ಪರ್ಧೆ ಕೂಡ ಮಾಡಲ್ಲ. ಸುಮಲತಾ ಗೆದ್ದರೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *