Connect with us

Cricket

ಸಚಿನ್, ವಿರೇಂದ್ರರಂತೆ ಪಂತ್ ಶ್ರೇಷ್ಠ ಆಟಗಾರ: ರೈನಾ

Published

on

ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್, ಮಾಜಿ ಕ್ರಿಕೆಟರ್‌ಗಳಾದ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಅವರಂತೆ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಅನುಭವಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

ಸುರೇಶ್ ರೈನಾ ಇತ್ತೀಚೆಗೆ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರೊಂದಿಗೆ ಇನ್‍ಸ್ಟಾಗ್ರಾಮ್ ಲೈವ್‍ನಲ್ಲಿ ಚಾಟ್ ನಡೆಸಿದ್ದರು. ಈ ವೇಳೆ ಭಾರತೀಯ ಕ್ರಿಕೆಟ್ ತಂಡ, ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ರೈನಾ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅವರನ್ನು ಹೊಗಳಿದ್ದಾರೆ.

“ನನ್ನ ಪ್ರಕಾರ ರಿಷಬ್ ಪಂತ್ ಅಗ್ರ ಕ್ರಿಕೆಟಿಗ, ಅತ್ಯಂತ ಪ್ರಬಲ ಆಟಗಾರ. ಅವರ ಆಟ ನೋಡಲು ಖುಷಿ ಪಡುತ್ತೇನೆ. ಶ್ರೇಷ್ಠ ಬ್ಯಾಟ್ಸ್‌ಮನ್‍ಗಳಾದ ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರಂತೆ ಪಂತ್ ಕೂಡ ಪ್ರಾಬಲ್ಯ ಹೊಂದಿದ್ದಾರೆ” ಎಂದು ರೈನಾ ಹೇಳಿದರು.

2017ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಪಂತ್, ಒಮ್ಮೆ ಮಾಜಿ ನಾಯಕ ಎಂ.ಎಸ್.ಧೋನಿ ಅವರ ಉತ್ತರಾಧಿಕಾರಿ ಎಂದು ಕರೆಯಲ್ಪಟ್ಟರು. ಆದರೆ ಪಂತ್ ನಿರೀಕ್ಷೆಗಳಿಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ.

ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 2020ರ ಜನವರಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ರಿಷಭ್ ಪಂತ್ ಸರಣಿಯಿಂದ ಹೊರಗುಳಿದಿದ್ದರು. ಪ್ಯಾಟ್ ಕಮ್ಮಿನ್ಸ್ ಎಸೆದ ಇನ್ನಿಂಗ್ಸ್ 44ನೇ ಓವರ್ ನಲ್ಲಿ ಪಂತ್ ಅವರ ಹೆಲ್ಮೆಟ್‍ಗೆ ಬಾಲ್ ಬಡೆದು ಗಾಯಗೊಂಡಿದ್ದರು. ನಂತರದ ನ್ಯೂಜಿಲೆಂಡ್ ಪ್ರವಾಸದಲ್ಲಿಯೂ ಪಂತ್ ತಂಡದಿಂದ ಹೊರಗೆ ಉಳಿದಿದ್ದರು. ಸದ್ಯ ಕೆ.ಎಲ್.ರಾಹುಲ್ ಅವರನ್ನು ವೈಟ್ ಬಾಲ್ ಕ್ರಿಕೆಟ್‍ನಲ್ಲಿ ಮೊದಲ ಆಯ್ಕೆಯ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ.

ಕೆ.ಎಲ್.ರಾಹುಲ್ ಕಿವೀಸ್ ವಿರುದ್ಧದ ಟಿ20 ಸರಣಿಯಲ್ಲಿ 5 ಪಂದ್ಯಗಳಲ್ಲಿ 224 ರನ್ ಗಳಿಸಿ ಮಿಂಚಿದ್ದರು. ಅಷ್ಟೇ ಅಲ್ಲದೆ ಕೇವಲ ಮೂರು ಏಕದಿನ ಪಂದ್ಯಗಳಲ್ಲಿ 204 ರನ್ ಗಳಿಸಿ ಸೈ ಎನಿಸಿಕೊಂಡಿದ್ದರು.