– ಸ್ಪೀಕರ್‌ಗೆ ಪತ್ರ ಬರೆದು ನಮ್ಮದೇ ಅಸಲಿ ಟಿಎಂಸಿ ಎಂದು ಗುರುತಿಸುವಂತೆ ಮನವಿ ಸಾಧ್ಯತೆ
ಕೋಲ್ಕತ್ತಾ: ಶಿವಸೇನೆ ಆಯ್ತು, ಈಗ ಟಿಎಂಸಿ (TMC) ಸರದಿ ಬಂದಿದೆ. ಮಮತಾ ಬ್ಯಾನರ್ಜಿ (Mamata Banerjee) ಹೊರಗಿಟ್ಟು ಅಸಲಿ ಟಿಎಂಸಿ ಪಕ್ಷ ರಚನೆಗೆ 50ಕ್ಕೂ ಹೆಚ್ಚು ಶಾಸಕರ ನಿರ್ಧರಿಸಿದ್ದಾರೆ. ಸ್ಪೀಕರ್‌ಗೆ ಪತ್ರ ಬರೆದು ನಮ್ಮದೇ ಅಸಲಿ ಟಿಎಂಸಿ ಎಂದು ಗುರುತಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಈಚೆಗೆ ತೃಣಮೂಲ ಕಾಂಗ್ರೆಸ್‌ನಿಂದ ಅಮಾನತುಗೊಂಡ ಟಿಎಂಸಿ ನಾಯಕ ರಿಜು ದತ್ತಾ ಅವರು, ಪಕ್ಷದ 50 ಶಾಸಕರು ಒಗ್ಗಟ್ಟಾಗಿದ್ದಾರೆ. ಇತ್ತೀಚೆಗೆ ಹೋಟೆಲ್‌ನಲ್ಲಿ ಭೇಟಿಯಾಗಿ ಮೂರನೇ ಎರಡರಷ್ಟು ಬಹುಮತವನ್ನು ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಬಿಜೆಪಿಯಿಂದ ದೊಡ್ಡ ಸೋಲನ್ನು ಅನುಭವಿಸಿದ ವಾರಗಳ ನಂತರ ಇವರನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು. ಅಮಾನತು ಬೆನ್ನಲ್ಲೇ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ – ಇಬ್ಬರು ಶಾಸಕರನ್ನು ಉಚ್ಚಾಟಿಸಿದ ಟಿಎಂಸಿ
ಸಿಐಡಿ ತನಿಖೆಗೆ ಕಾರಣವಾಗಿರುವ ʼಸಹಿ ಹಗರಣʼ ಬಗ್ಗೆ ವಿವರಗಳನ್ನು ನೀಡಿದ ದತ್ತಾ, ಪಶ್ಚಿಮ ಬಂಗಾಳ ವಿಧಾನಸಭೆಗೆ ಸಲ್ಲಿಸಿದ ದಾಖಲೆಗಳಲ್ಲಿ ತಮ್ಮ ಸಹಿಗಳನ್ನು ನಕಲಿ ಎಂದು ಹೇಳಿಕೊಂಡಿದ್ದ ಇಬ್ಬರು ಉಚ್ಚಾಟಿತ ತೃಣಮೂಲ ಶಾಸಕರಾದ ಋತಬ್ರತ ಬಂಡೋಪಾಧ್ಯಾಯ ಮತ್ತು ಸಂದೀಪನ್ ಸಹಾ ಬಗ್ಗೆ ಮಾತನಾಡಿದ್ದಾರೆ.
ಕೆಲವು ಪಕ್ಷದ ನಾಯಕರು ಇಂದು ಮಧ್ಯಾಹ್ನ ವಿಧಾನಸಭಾಧ್ಯಕ್ಷರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆಂದು ತಿಳಿಸಿದ್ದಾರೆ.
ಬಂಗಾಳದಲ್ಲಿ ‘ಮಹಾರಾಷ್ಟ್ರ ಮಾದರಿ’ ಜಾರಿಯಲ್ಲಿದೆ ಎಂದು ರಿಜು ದತ್ತ ಹೇಳಿದ್ದಾರೆ. ನಾವು ಮೂರನೇ ಎರಡರಷ್ಟು ಬಹುಮತ ಹೊಂದಿದ್ದೇವೆ. ಸುಮಾರು 50 ಶಾಸಕರು ನಮ್ಮೊಂದಿಗಿದ್ದಾರೆ. ನಾವು ನಿಜವಾದ ತೃಣಮೂಲ ಕಾಂಗ್ರೆಸ್ ಆಗಿರುವುದರಿಂದ, ವಿರೋಧ ಪಕ್ಷದ ನಾಯಕ ಋತಬ್ರತ ಬಂಡೋಪಾಧ್ಯಾಯ ಆಗಿರುತ್ತಾರೆ, ಶೋಭಂದೇಬ್ ಚಟ್ಟೋಪಾಧ್ಯಾಯ ಅಲ್ಲ ಎಂದು ದತ್ತ ತಿಳಿಸಿದ್ದಾರೆ. ಈ ಶಾಸಕರು ಬಹುಮತ ಹೊಂದಿರುವುದರಿಂದ, ಅವರು ಪಕ್ಷದ ಚಿಹ್ನೆಯನ್ನು ಉಳಿಸಿಕೊಳ್ಳಲು ಸಹ ಅವಕಾಶ ನೀಡಬೇಕು ಎಂದಿದ್ದಾರೆ. ಇದನ್ನೂ ಓದಿ: 3,000 ರೂ.ಗೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಈಗ ಸಚಿವೆ
2022 ರಲ್ಲಿ ಶಿವಸೇನೆ ಎರಡು ಬಣಗಳಾಗಿ ವಿಭಜನೆಯಾಯಿತು. ನಂತರ ಅಂದಿನ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ಹೊರಹಾಕಲಾಯಿತು. ಆಗಲೂ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಹೋರಾಟ ಭುಗಿಲೆದ್ದಿತ್ತು. ಅದು ಅಂತಿಮವಾಗಿ ರಾಜ್ಯ ವಿಧಾನಸಭೆಯಲ್ಲಿ ಏಕನಾಥ್ ಶಿಂಧೆ ನೇತೃತ್ವದ ಬಣದ ಪರವಾಗಿ ಹೋಯಿತು.
