– ಇಂಧನ ಮಿತವ್ಯಯ ಸೂತ್ರ ಪುನರುಚ್ಚರಿಸಿದ ಮೋದಿ
ನವದೆಹಲಿ: ಕೇಂದ್ರ ಸರ್ಕಾರ (Central Government) ತನ್ನ ವಿವಿಧ ಸಚಿವಾಲಯಗಳು (Ministries) ಮತ್ತು ಯೋಜನೆಗಳ ಮೌಲ್ಯಮಾಪನಕ್ಕಾಗಿ ಪ್ರಧಾನಿ ಮೋದಿಯವರ (Narendra Modi) ನೇತೃತ್ವದಲ್ಲಿ ನಡೆದ ಮಂತ್ರಿಮಂಡಲ ಸಭೆಯಲ್ಲಿ 2025ರ ಅಧಿಕೃತ ಕಾರ್ಯಕ್ಷಮತೆಯ ರಿಪೋರ್ಟ್ ಕಾರ್ಡ್ (Report Cards) ಬಿಡುಗಡೆ ಮಾಡಿದೆ.
ಕ್ಯಾಬಿನೆಟ್ ಕಾರ್ಯದರ್ಶಿ ಟಿವಿ ಸೋಮನಾಥನ್ ಅವರು ಸಚಿವಾಲಯಗಳ ಸಾಧನೆ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದರು. ರಿಪೋರ್ಟ್ ಕಾರ್ಡ್‌ನಲ್ಲಿ ಗ್ರಾಹಕ ವ್ಯವಹಾರಗಳು, ಕಲ್ಲಿದ್ದಲು, ಇಂಧನ ಮತ್ತು ಆರೋಗ್ಯ ಸಚಿವಾಲಯಗಳು ಅತ್ಯುತ್ತಮ ಸಾಧನೆ (Best Performers) ತೋರಿದ ಇಲಾಖೆಗಳಾಗಿ ಹೊರಹೊಮ್ಮಿವೆ. ಇದರ ಜೊತೆ ಕಳಪೆ ಪ್ರದರ್ಶನ ತೋರಿದ ಇಲಾಖೆಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ. ಇದನ್ನೂ ಓದಿ: ಇಂದು 19ನೇ ಉದ್ಯೋಗ ಮೇಳ – ಮೋದಿಯಿಂದ 50,000ಕ್ಕೂ ಹೆಚ್ಚು ಯುವಕರಿಗೆ ನೇಮಕಾತಿ ಪತ್ರ ವಿತರಣೆ
Had a fruitful meeting of the Council of Ministers yesterday. We exchanged perspectives and best practices relating to boosting ‘Ease of Living, ‘Ease of Doing Business’ and how to further reforms in order to realise our shared dream of a Viksit Bharat. pic.twitter.com/ifKpB8le17
— Narendra Modi (@narendramodi) May 22, 2026
ಈ ಬಗ್ಗೆ ಸಚಿವಾಲಯಗಳ ಬಳಿ ಮಾಹಿತಿಗಾಗಿ ಮಾಧ್ಯಮಗಳು ಸಂಪರ್ಕಿಸಿವೆ. ಆದರೆ ಕಲ್ಲಿದ್ದಲು, ವಿದ್ಯುತ್, ಉಕ್ಕು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯಗಳ ಅಧಿಕಾರಿಗಳು ಮಾತ್ರ ರಿಪೋರ್ಟ್ ಕಾರ್ಡ್ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಇನ್ನುಳಿದ ಇಲಾಖೆಗಳಿಂದ ಮಾಹಿತಿ ಲಭ್ಯವಾಗಿಲ್ಲ. ಸಭೆಯ ನಡಾವಳಿಗಳ ಬಗ್ಗೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ವರದಿಯಾಗಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯ ಕುಂದುಕೊರತೆ ಪರಿಹಾರ ಮತ್ತು ಪಶ್ಚಿಮ ಏಷ್ಯಾ ಯುದ್ಧದಿಂದ ಉಂಟಾದ ಬಿಕ್ಕಟ್ಟಿನ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆಗೈದ ಇಲಾಖೆ ಎಂದು ಪರಿಗಣಿಸಲಾಗಿದೆ. ಫೈಲ್ ವಿಲೇವಾರಿ ಮತ್ತು ನಿರ್ವಹಣೆ ವಿಭಾಗದಲ್ಲಿ ಕಲ್ಲಿದ್ದಲು ಸಚಿವಾಲಯ ಅತ್ಯುತ್ತಮ ಅಂಕ ಪಡೆದಿದೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಇತರ ಸಚಿವಾಲಯಗಳಲ್ಲಿ ವಿದ್ಯುತ್ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಸೇರಿವೆ.
ಎಲ್ಲಾ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ಸುಗಮಗೊಳಿಸಲು ಮತ್ತು ಅವು ಎಲ್ಲಿ ಹಿಂದುಳಿದಿವೆ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸುವುದು ಮೌಲ್ಯಮಾಪನ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ಸೋಮನಾಥನ್ ಹೇಳಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ವೆಚ್ಚವನ್ನು ನಿಯಂತ್ರಿಸಲು ನಾಗರಿಕರಿಗೆ ತಮ್ಮ ಸಲಹೆಯನ್ನು ಪುನರುಚ್ಚರಿಸಿದರು. ಎಲ್ಲಾ ಸಚಿವರು ಮತ್ತು ಅಧಿಕಾರಿಗಳಿಗೆ ಇದು ನಿಯಮವಾಗಬೇಕು. ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಪ್ರಯೋಜನಕಾರಿಯಾಗದ ಅಥವಾ ಭಾರತದ ಭವಿಷ್ಯಕ್ಕೆ ಪ್ರಯೋಜನವಾಗದ ಹೊರತು ಯಾವುದೇ ವಿದೇಶಿ ಪ್ರಯಾಣ ಮಾಡಬಾರದು ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ದೊಡ್ಡ ಬೆಂಗಾವಲು ಪಡೆಗಳನ್ನುಕೈಬಿಡುವಂತೆ ಸಚಿವರಿಗೆ ಸಲಹೆ ನೀಡಿದ ಅವರು, ಈ ಬಗ್ಗೆ ಸರ್ಕಾರವು ಹೊಸ ಅಭಿಯಾನವನ್ನು ಪರಿಚಯಿಸಲು ಯೋಚಿಸುತ್ತಿದೆ ಎಂಬ ಸುಳಿವು ನೀಡಿದರು. ಇದರ ಜೊತೆಗೆ ಎಲ್ಲಾ ಸಚಿವಾಲಯಗಳಿಗೂ ಅಂತರರಾಷ್ಟ್ರೀಯ ಶೃಂಗಸಭೆಗಳನ್ನು ರದ್ದುಗೊಳಿಸುವಂತೆ ತಿಳಿಸಲಾಯಿತು. ಅಲ್ಲದೇ ಆಫ್ರಿಕಾ ಮತ್ತು ಬಿಗ್ ಕ್ಯಾಟ್ ಮೈತ್ರಿಕೂಟದ (IBCA) ಸಭೆಗಳನ್ನು ರದ್ದುಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.
ಹಾರ್ಮುಜ್ ಜಲಸಂಧಿಯ ಮೇಲಿನ ಬಿಕ್ಕಟ್ಟು ಮತ್ತು ಅದರ ಪರಿಣಾಮವಾಗಿ ತೈಲ, ಅನಿಲ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೈವಿಕ ಅನಿಲ ಮತ್ತು ಇತರ ನವೀಕರಿಸಬಹುದಾದ ಇಂಧನ ಮೂಲಗಳಂತಹ ಪರಿಹಾರ ಹುಡುಕುವ ಅಗತ್ಯತೆ ಬಗ್ಗೆ ಅವರು ಗಮನಸೆಳೆದರು.
ಜೂ.9 ರಂದು ಮೋದಿಯವರ ಮೂರನೇ ಅವಧಿಯ ಎರಡನೇ ವಾರ್ಷಿಕೋತ್ಸವಕ್ಕೆ ಮುಂಚಿತವಾಗಿ ವಿವಿಧ ನೀತಿಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನವನ್ನು ನಿರ್ಣಯಿಸಲು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಈ ಸಭೆ ನಡೆಯಿತು. ಸಭೆಯಲ್ಲಿ ಸಂಪುಟ ಸಚಿವರು, ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು ಭಾಗವಹಿಸಿದ್ದರು. ಇದನ್ನೂ ಓದಿ: ಯುದ್ಧದಿಂದ ಜನರ ಮೇಲಾಗುವ ಪರಿಣಾಮ ತಪ್ಪಿಸಲು ಕ್ರಮ ಕೈಗೊಳ್ಳಿ – ಸಂಪುಟ ಸಚಿವರಿಗೆ ಮೋದಿ ಕರೆ

