ನವದೆಹಲಿ: ಇಂದು 19ನೇ ಆವೃತ್ತಿಯ ಉದ್ಯೋಗ ಮೇಳ ನಡೆಯಲಿದ್ದು, 51,000ಕ್ಕೂ ಹೆಚ್ಚು ಯುವಕರಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಈ ರೋಜ್‌ಗಾರ್ ಮೇಳ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು, ದೇಶದಲ್ಲಿ ಒಟ್ಟು 42 ಸ್ಥಳಗಳಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ.
ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ ಯುವಕರಿಗೆ 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಮೇಳವು ಪ್ರಧಾನಿ ನರೇಂದ್ರ ಮೋದಿಯವರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಉದ್ದೇಶ ಹೊಂದಿದೆ. ದೇಶಾದ್ಯಂತ ಈವರೆಗೆ ಆಯೋಜಿಸಿರುವ 18 ಉದ್ಯೋಗ ಮೇಳಗಳಲ್ಲಿ ಸುಮಾರು 12 ಲಕ್ಷ ನೇಮಕಾತಿ ಪತ್ರ ನೀಡಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿಯಿಂದ ತಿಳಿಸಲಾಗಿದೆ.
ದೇಶಾದ್ಯಂತ ನಮ್ಮ ಯುವಕರ ಉಜ್ವಲ ಭವಿಷ್ಯ ಮತ್ತು ಸಬಲೀಕರಣಕ್ಕೆ ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮತ್ತೊಂದು ಉದ್ಯೋಗ ಮೇಳದಲ್ಲಿ ನಾನು ಭಾಗವಹಿಸಲಿದ್ದೇನೆ. ಯುವಕರಿಗೆ ವಿವಿಧ ಸರ್ಕಾರಿ ಇಲಾಖೆಗಳ ನೇಮಕಾತಿ ಪತ್ರ ಹಸ್ತಾಂತರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತದ ಎಲ್ಲಾ ಭಾಗಗಳಿಂದ ಆಯ್ಕೆಯಾದ ಯುವ ಉದ್ಯೋಗಿಗಳು ರೈಲ್ವೇ, ಗೃಹ ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಗಳು ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

