– ಆಗಸ್ಟ್ 11 ರಿಂದ ಶಾರ್ಟ್‌ಲಿಸ್ಟ್ ಅಭ್ಯರ್ಥಿಗಳ ಸಂದರ್ಶನ
ಅಯೋಧ್ಯೆ: ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ನಂತರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ (Shri Ram Janmbhoomi Teerth Kshetra Trust) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ನೇಮಕ ಮಾಡುವ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ.
ರಾಮ ಮಂದಿರ (Ram Mandir) ಟ್ರಸ್ಟ್ ಸಿಇಒ ಹುದ್ದಗೆ ಸಲ್ಲಿಕೆಯಾಗಿರುವ 5,300 ಕ್ಕೂ ಹೆಚ್ಚು ಅರ್ಜಿಗಳ ಪೈಕಿ ಕೇವಲ 18 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಆಯ್ಕೆ ಮಾಡಲಾದ ಅಭ್ಯರ್ಥಿಗಳು ಮಂಗಳವಾರ (ಆ.11) ಮತ್ತು ಬುಧವಾರ (ಆ.12) ದೇವಾಲಯದ ಆವರಣದಲ್ಲಿ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಆಡಳಿತಾತ್ಮಕ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಪ್ರಮುಖ ಹುದ್ದೆಗೆ ಆದ್ಯತೆ ನೀಡುವ ಸಾಧ್ಯತೆಯಿದೆ.

ಸಿಇಒ ಸಂದರ್ಶನ ನಡೆಸಲು ಮೂವರು ಸದಸ್ಯರ ಸಮಿತಿ
ಇನ್ನೂ ತೀರ್ಥಕ್ಷೇತ್ರ ಟ್ರಸ್ಟ್‌ನ ಸಿಇಒ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನ ಸಂದರ್ಶನದ ಮೂಲಕ ಆಯ್ಕೆ ಮಾಡಲು ಮೂವರು ಸದಸ್ಯರ ಸಮಿತಿಯನ್ನ ರಚನೆ ಮಾಡಲಾಗಿದೆ. ಸಂದರ್ಶನ ಸಮಿತಿಯಲ್ಲಿ ಮಾಜಿ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿಷ್ಣುಕಾಂತ್ ಚತುರ್ವೇದಿ ಮತ್ತು ಈ ಹಿಂದೆ ಶಿರಡಿ ಸಾಯಿ ಬಾಬಾ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಿಜ್ಞಾನಿ ಸುರೇಶ್ ಇದ್ದಾರೆ.
ಸಂದರ್ಶನದ ಬಳಿಕ ಆಯ್ಕೆಯಾದ ಹೊಸ ಸಿಇಒಗೆ ರಾಮ ಮಂದಿರದ ಒಟ್ಟಾರೆ ಆಡಳಿತ ಮತ್ತು ನಿರ್ವಹಣೆ ಮೇಲ್ವಿಚಾರಣೆಯ ಜವಾಬ್ದಾರಿ ವಹಿಸಲಾಗುತ್ತದೆ.
ಸಿಇಒ ಜವಾಬ್ದಾರಿಗಳೇನು?
ರಾಮ ಮಂದಿರದ ಸಿಇಒ ಹುದ್ದೆಗೇರಿದವರು ಕೇವಲ ಆಡಳಿತ ಅಧಿಕಾರಿಯಾಗಿರುವುದಿಲ್ಲ. ಇಡೀ ಸಂಕೀರ್ಣದ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ.
* ಪ್ರತಿದಿನ ಭೇಟಿ ನೀಡುವ ಲಕ್ಷಾಂತರ ಭಕ್ತರ ಭದ್ರತೆ ಮತ್ತು ದರ್ಶನಕ್ಕೆ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುವುದು.
* ದೇವಾಲಯ ಟ್ರಸ್ಟ್‌ನ ನಿಧಿಗಳು, ಕಾಣಿಕೆಗಳು ಮತ್ತು ಹಣಕಾಸಿನ ವಹಿವಾಟುಗಳ ಲೆಕ್ಕ ಪರಿಶೋಧಿಸುವುದು.
* ದೇವಾಲಯ ಸಂಕೀರ್ಣದೊಳಗೆ ನಡೆಯುತ್ತಿರುವ ಇತರ ಅಭಿವೃದ್ಧಿ ಕಾರ್ಯಗಳನ್ನ ಮೇಲ್ವಿಚಾರಣೆ ಮಾಡುವುದು.

ಸಿಇಒಗೆ ಸಿಗುವ ಸವಲತ್ತುಗಳೇನು?
ಸಿಇಒ ಹುದ್ದೆಯು ಜವಾಬ್ದಾರಿಯುತ ಹುದ್ದೆಯಾಗಿರುವುದರಿಂದ ವಿಐಪಿಗೆ ಸಮನಾದ ವೇತನ ಪ್ಯಾಕೇಜ್‌ಗಳನ್ನ ನೀಡಲಾಗುತ್ತದೆ. ಇದೆಲ್ಲವನ್ನು ನೇರವಾಗಿ ಟ್ರಸ್ಟ್ ನಿಧಿಯಿಂದಲೇ ಪಾವತಿಸಲಾಗುತ್ತದೆ.
ಆಕರ್ಷಕ ವೇತನ ಪ್ಯಾಕೇಜ್
ಸಿಇಒ ವೇತನವು ಪ್ರಮುಖ ಸರ್ಕಾರಿ ಇಲಾಖೆಯಲ್ಲಿ (ಕ್ಯಾಬಿನೆಟ್ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಯಂತಹ) ಉನ್ನತ ಅಧಿಕಾರಿ ಅಥವಾ ಪ್ರಮುಖ ಕಂಪನಿಯಲ್ಲಿನ ಉನ್ನತ ಕಾರ್ಯನಿರ್ವಾಹಕರಿಗೆ ಸಮನಾಗಿರುತ್ತದೆ.
ಅಯೋಧ್ಯೆಯಲ್ಲಿ ಐಷಾರಾಮಿ ಬಂಗಲೆ
ಸಿಇಒಗೆ ಅಯೋಧ್ಯೆಯಲ್ಲೇ ಸುಸಜ್ಜಿತ ಸರ್ಕಾರಿ ಅಥವಾ ಟ್ರಸ್ಟ್ ಒಡೆತನದ ಬಂಗಲೆ ಸೌಲಭ್ಯ ಒದಗಿಸಲಾಗುತ್ತದೆ. ಇದರಲ್ಲಿ ಕಚೇರಿ ಮತ್ತು ಭದ್ರತಾ ಸಿಬ್ಬಂದಿಗೂ ವಸತಿ ಸೌಕರ್ಯ ಇರುತ್ತದೆ.
ಅಧಿಕೃತ ವಾಹನಗಳು ಮತ್ತು ಭದ್ರತೆ
ಅಯೋಧ್ಯೆಯಲ್ಲಿ ಸುಗಮ ಕಾರ್ಯನಿರ್ವಹಣೆ ಮತ್ತು ವಿಐಪಿ ವ್ಯವಸ್ಥೆಯನ್ನ ಖಚಿತಪಡಿಸಿಕೊಳ್ಳಲು, ಸಿಇಒಗೆ ಐಷಾರಾಮಿ ವಾಹನಗಳು (ಎಸ್‌ಯುವಿ) ಮತ್ತು ಪ್ರತ್ಯೇಕ ಚಾಲಕನ ಸೌಲಭ್ಯ ನೀಡಲಾಗುತ್ತದೆ. ಅವರ ಭದ್ರತೆಗಾಗಿ ವಿಶೇಷ ಗಾರ್ಡ್‌ಗಳನ್ನ ಸಹ ನಿಯೋಜಿಸಲಾಗುತ್ತದೆ.
ಇತರ ಸವಲತ್ತುಗಳು
ವೈದ್ಯಕೀಯ ವಿಮೆ, ಪ್ರಯಾಣ ಭತ್ಯೆ, ಫೋನ್ ಮತ್ತು ಇಂಟರ್ನೆಟ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನ ಒದಗಿಸಲಾಗುತ್ತದೆ.
ನಿಧಿ ಎಲ್ಲಿಂದ ಬರುತ್ತದೆ?
ಸಿಇಒಗೆ ನೀಡಲಾಗುವ ಎಲ್ಲಾ ಸೌಲಭ್ಯಗಳ ಸಂಪೂರ್ಣ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಅಥವಾ ಕೇಂದ್ರ ಸರ್ಕಾರ ಭರಿಸುವುದಿಲ್ಲ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿಯಿಂದಲೇ ಭರಿಸಲಾಗುತ್ತದೆ.

