– ಪತ್ನಿ, ಪುತ್ರನ ಹೆಸರಲ್ಲಿ ಆಸ್ತಿ ಖರೀದಿ
ಕಲಬುರಗಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿರುವ ಹೊತ್ತಿನಲ್ಲೇ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ (Shivashankarappa Sahukar) ಅವರಿಗೆ ಸಂಬಂಧಿಸಿದ ಆಸ್ತಿ ಖರೀದಿ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೆಪಿಎಸ್‌ಸಿಗೆ (KPSC) ಸೇರಿದ ಬಳಿಕ 2019 ರಿಂದ 2026ರ ಅವಧಿಯಲ್ಲಿ ಸುಮಾರು 100 ಎಕರೆ ಜಮೀನು ಖರಿದಿ ಮಾಡಿರೋದು ಬಟಾಬಯಲಾಗಿದೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜಮೀನು ಖರೀದಿಯಾಗಿರುವ ಮಾಹಿತಿ ʻಪಬ್ಲಿಕ್ ಟಿವಿʼಗೆ (PUBLiC TV) ಲಭ್ಯವಾಗಿದೆ.

ಶಿವಶಂಕರಪ್ಪ ಸಾಹುಕಾರ್ ಅವರ ಹೆಸರಿನ ಜೊತೆಗೆ ಪತ್ನಿ ವಿಜಯಲಕ್ಷ್ಮಿ ಸಾಹುಕಾರ್ ಹಾಗೂ ಪುತ್ರನ ಹೆಸರಿನಲ್ಲೂ ಜಮೀನು ಖರೀದಿ ಮಾಡಿದ್ದಾರೆ. ಈ ಜಮೀನು ಖರೀದಿಗೆ ಕೆಪಿಎಸ್‌ಸಿ ನಲ್ಲಿ ನಡೆಸಿದ ಅಕ್ರಮ ಹಣ ಬಳಕೆಯಾಗಿದೆ ಎಂದು ಹೇಳಲಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ಸಿಐಡಿಗೆ ದಾಖಲೆ ಸಲ್ಲಿಸಲು ಸಜ್ಜು
ಆಸ್ತಿ ರಹಸ್ಯ ಬಯಲಾಗಿರುವ ಬೆನ್ನಲ್ಲೇ ಶಿವಶಂಕರಪ್ಪ ಸಾಹುಕಾರ್ ಅವರ ಆಸ್ತಿ ಖರೀದಿ ಹಾಗೂ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನ ಸಿಐಡಿ ಅಧಿಕಾರಿಗಳಿಗೆ ಸಲ್ಲಿಸಲು ಸಾಮಾಜಿಕ ಕಾರ್ಯಕರ್ತ ಶರಣ್ ಐಟಿ ಮುಂದಾಗಿದ್ದಾರೆ.
