ಬಾಗಲಕೋಟೆ: ಹಕ್ಕುಪತ್ರ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಗಾಗಿ ಬೆಂಗಳೂರಿನತ್ತ(Bengaluru) ಬರಿಗಾಲಲ್ಲಿ ಪಾದಯಾತ್ರೆ ಆರಂಭಿಸಿದ್ದ ಬಾಗಲಕೋಟೆಯ(Bagalkote) ಕೊಣ್ಣೂರು ಮಡ್ಡಿ ಪ್ಲಾಟ್ ನಿವಾಸಿಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.
‘ಪಬ್ಲಿಕ್ ಟಿವಿ’ ಪ್ರಕಟಿಸಿದ ವಿಸ್ತೃತ ವರದಿಗೆ ಎಚ್ಚೆತ್ತ ಜಿಲ್ಲಾಡಳಿತ, ಗ್ರಾಮಸ್ಥರ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡಿದ ಬೆನ್ನಲ್ಲೇ ಪ್ರತಿಭಟನಾಕಾರರು ತಮ್ಮ 550 ಕಿಲೋಮೀಟರ್ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿ ಸ್ವಗ್ರಾಮಕ್ಕೆ ಮರಳಿದ್ದಾರೆ.
ಜಮಖಂಡಿ ತಾಲೂಕಿನ ಕೊಣ್ಣೂರು(Konnuru) ಗ್ರಾಮದ ಮಡ್ಡಿ ಪ್ಲಾಟ್‌ನಲ್ಲಿ ವಾಸವಾಗಿರುವ ಸುಮಾರು 300 ಬಡ ಕುಟುಂಬಗಳು ಹಕ್ಕುಪತ್ರ, ಇ-ಸ್ವತ್ತು, ರಸ್ತೆಗಳ ಡಾಂಬರೀಕರಣ ಹಾಗೂ ಸರ್ಕಾರಿ ಪಿಯು ಕಾಲೇಜು ಮಂಜೂರಾತಿಗಾಗಿ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದವು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಂಗೆಟ್ಟಿದ್ದ ಗ್ರಾಮಸ್ಥರು, ಅಂತಿಮ ಅಸ್ತ್ರವಾಗಿ ಬೆಂಗಳೂರಿನ ವಿಧಾನಸೌಧಕ್ಕೆ ತಲುಪಿ ಸರ್ಕಾರವನ್ನು ಎಚ್ಚರಿಸಲು ನಿರ್ಧರಿಸಿದ್ದರು. ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ರೊಟ್ಟಿ-ಬುತ್ತಿ ಕಟ್ಟಿಕೊಂಡು ಕಳೆದ ಒಂದು ವಾರದ ಹಿಂದೆ ಬೃಹತ್ ಪಾದಯಾತ್ರೆ ಕೈಗೊಂಡಿದ್ದರು. ಇದನ್ನೂ ಓದಿ: ಹಕ್ಕುಪತ್ರಕ್ಕಾಗಿ ಬೆಂಗಳೂರಿಗೆ 550 ಕಿ.ಮೀ ಪಾದಯಾತ್ರೆ ಆರಂಭಿಸಿದ ಬಾಗಲಕೋಟೆಯ ಗ್ರಾಮಸ್ಥರು
ಈ ನೊಂದ ಜನರ ಧ್ವನಿಯಾಗಿ ‘ಪಬ್ಲಿಕ್ ಟಿವಿ’ ಸಮಗ್ರ ಸುದ್ದಿಯನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕೂಡಲೇ ಎಚ್ಚೆತ್ತ ಬಾಗಲಕೋಟೆ ಜಿಲ್ಲಾಡಳಿತ, ತಕ್ಷಣವೇ ಗ್ರಾಮದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿತು. ಸೆಪ್ಟೆಂಬರ್ 30ರ ಒಳಗಾಗಿ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ, ಹಕ್ಕುಪತ್ರ ಹಾಗೂ ಆಶ್ರಯ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದೆ
ಗ್ರಾಮದ ಪ್ರಮುಖ ರಸ್ತೆಗಳ ಡಾಂಬರೀಕರಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಕ್ಕೆ ಸರ್ಕಾರಿ ಪಿಯು ಕಾಲೇಜು ಮಂಜೂರು ಮಾಡುವ ಕುರಿತು ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆಶ್ವಾಸನೆ ನೀಡಿದೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ನೀಡಿದ ಲಿಖಿತ ಭರವಸೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ. “ಕೊಟ್ಟ ಭರವಸೆಯಂತೆ ನಿಗದಿತ ಅವಧಿಯಲ್ಲಿ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ನೇರವಾಗಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ” ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಜತೆಗೆ ತಮ್ಮ ಹೋರಾಟಕ್ಕೆ ಸ್ಪಂದಿಸಿ, ನ್ಯಾಯ ದೊರಕಿಸಿಕೊಡಲು ಕಾರಣವಾದ ‘ಪಬ್ಲಿಕ್ ಟಿವಿ’ಗೆ ಗ್ರಾಮಸ್ಥರು ತುಂಬುಹೃದಯದ ಧನ್ಯವಾದ ಅರ್ಪಿಸಿದ್ದಾರೆ.


