ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ನಡೆಸಲಾಗಿದ್ದ ಬಳ್ಳಾರಿ ಪಾದಯಾತ್ರೆಗಳ(Ballari Chalo Padayatra) ಭರ್ಜರಿ ಯಶಸ್ಸಿನ ಬೆನ್ನಲ್ಲೇ, ರಾಜ್ಯ ಬಿಜೆಪಿಯು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಮತ್ತೊಂದು ಬೃಹತ್ ಯಾತ್ರೆಗೆ ಸಜ್ಜಾಗಿದೆ. ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಲು ಹಾಗೂ ಪಕ್ಷ ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸಲು ರಾಜ್ಯಾದ್ಯಂತ “ಬೂತ್ ವಿಜಯ ಸಂಕಲ್ಪ ಯಾತ್ರೆ”ಯನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ(BJP Office) ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ(Preetam Gowda) ಅವರು ಈ ಮಹತ್ವದ ಯಾತ್ರೆಯ ಕುರಿತು ವಿವರಗಳನ್ನು ಹಂಚಿಕೊಂಡರು.
ಅಕ್ಟೋಬರ್ 1 ರಂದು ಕೋಲಾರ ಜಿಲ್ಲೆಯ ಪ್ರಸಿದ್ಧ ಕುರುಡುಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ಯಾತ್ರೆಗೆ ಅಧಿಕೃತ ಚಾಲನೆ ಸಿಗಲಿದೆ. ಮೊದಲ ಹಂತವಾಗಿ ಅಕ್ಟೋಬರ್ 1 ರಿಂದ 10 ರವರೆಗೆ 16 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ. ನಂತರದ ದಿನಗಳಲ್ಲಿ ವಿಸ್ತರಿಸಿ, ಮುಂದಿನ ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳನ್ನೂ ಈ ಯಾತ್ರೆಯು ತಲುಪಲಿದೆ. ಇದನ್ನೂ ಓದಿ: ವಜ್ರಕ್ಕಿಂತ ಕಠಿಣ ವಕ್ತಿತ್ವ ಇದ್ದರೂ, ಡಿಕೆಶಿ ಹೃದಯ ಮೃದು ಸ್ವಭಾವದ್ದು: ನೂಣನವಿನಕೆರೆ ಶ್ರೀ
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಯಶಸ್ವಿ 25 ವರ್ಷಗಳ ಸಾರ್ವಜನಿಕ ಜೀವನದ ‘ಸೇವಾ ಸಂಕಲ್ಪ ಯಾತ್ರೆ’ಯ ಜೊತೆಜೊತೆಯಲ್ಲೇ ಈ ‘ಬೂತ್ ವಿಜಯ ಸಂಕಲ್ಪ ಯಾತ್ರೆ’ಯೂ ಸಾಗಲಿದೆ. ದಿನವೊಂದಕ್ಕೆ 2 ವಿಧಾನಸಭಾ ಕ್ಷೇತ್ರಗಳಂತೆ ಈ ಯಾತ್ರೆ ಮುಂದುವರಿಯಲಿದ್ದು, ಪ್ರತಿ ಕ್ಷೇತ್ರಕ್ಕೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಖುದ್ದು ಭೇಟಿ ನೀಡಿ ಸಂಘಟನೆಯ ನೇತೃತ್ವ ವಹಿಸಲಿದ್ದಾರೆ.
ಯಾತ್ರೆಯ ಸಂದರ್ಭದಲ್ಲಿ ಸ್ಥಳೀಯ ಮಟ್ಟದಲ್ಲಿ ಪಾದಯಾತ್ರೆ, ಸಾರ್ವಜನಿಕ ಸಮಾವೇಶಗಳು ಹಾಗೂ ಆಯ್ದ ಪ್ರಮುಖ ಚುನಾವಣಾ ಕಾರ್ಯಕರ್ತರೊಂದಿಗೆ ವಿಶೇಷ ಸಮಾಲೋಚನಾ ಸಭೆಗಳು ಜರುಗಲಿವೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳು, ಭ್ರಷ್ಟಾಚಾರದ ಹಗರಣಗಳು ಹಾಗೂ ಸ್ಥಳೀಯ ಜ್ವಲಂತ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದ ಪ್ರೀತಂಗೌಡ, “ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಹಾಗೂ ಕಾಂಗ್ರೆಸ್‌ಗೆ ಬಿಜೆಪಿಯೇ ಏಕೈಕ ಬಲಿಷ್ಠ ಪರ್ಯಾಯ ಎಂದು ಜನತೆಗೆ ಮನವರಿಕೆ ಮಾಡಿಕೊಡುವುದೇ ಈ ಯಾತ್ರೆಯ ಮುಖ್ಯ ಉದ್ದೇಶ,” ಎಂದು ಸ್ಪಷ್ಟಪಡಿಸಿದರು.

