ಮುಂಬೈ: SIR (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಅಲ್ಲದೇ EVMಗಳ ಬದಲಿಗೆ ಮತಪತ್ರ ಬಳಸಿ ಚುನಾವಣೆ ನಡೆಸ ಬೇಕು. ಇದಕ್ಕಾಗಿ ವಿರೋಧ ಪಕ್ಷಗಳು ದೇಶಾದ್ಯಂತ ಹೋರಾಟ ನಡೆಸಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಪಕ್ಷದ (MNS) ಮುಖ್ಯಸ್ಥ ರಾಜ್ ಠಾಕ್ರೆ ಅವರ ಕರೆ ನೀಡಿದ್ದಾರೆ.
ಅಧಿಕಾರದ ಮೇಲೆ ನಿರಂತರ ಹಿಡಿತ ಸಾಧಿಸಲು ಪ್ರಮುಖ ಸಾಂಸ್ಥಿಕ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕೇಳಿಬಂದಿರುವ ಅಕ್ರಮಗಳ ಆರೋಪಗಳ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: SIR ವಿವಾದದ ನಡುವೆ ಯುಪಿಯಲ್ಲಿ ಜ್ಞಾನೇಶ್ ಕುಮಾರ್ ಕಾರ್ಯಕ್ರಮ ಮುಂದೂಡಿಕೆ
ಪೌರಾಣಿಕ ಉದಾಹರಣೆಯೊಂದನ್ನು ನೀಡಿರುವ ಅವರು, ಸಂತ ಜ್ಞಾನೇಶ್ವರರು ಒಮ್ಮೆ ಎಮ್ಮೆಯೊಂದರಿಂದ ವೇದಗಳನ್ನು ಪಠಿಸುವಂತೆ ಮಾಡಿದ್ದರು. ಈಗ, ಅಧಿಕಾರದಲ್ಲಿರುವ ಎಮ್ಮೆಗಳು ಈ ‘ಜ್ಞಾನೇಶ್’ ಮೂಲಕ ತಮ್ಮದೇ ಆದ ವೇದಗಳನ್ನು ಪಠಿಸುವಂತೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣಾ ಆಯೋಗದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಆಡಳಿತಾತ್ಮಕ ನಿರ್ಧಾರಗಳ ಬಗ್ಗೆ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಇದರ ನಡುವೆಯೂ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕಳೆದ ಎರಡು ದಿನಗಳಿಂದ ಮೌನವಾಗಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಮತದಾರರ ಪಟ್ಟಿಗಳನ್ನು ತಿರುಚಲು 2025 ರಿಂದ ಜಾರಿಗೆ ತರಲಾದ SIR ಒಂದು “ಹೊಸ ಅಸ್ತ್ರ” ಎಂದು ಟೀಕಿಸಿದ್ದಾರೆ.
ಮತಪತ್ರದ ಮೂಲಕ ಚುನಾವಣೆಗೆ ಕರೆ
EVM ಬಗ್ಗೆ ವಿರೋಧ ವ್ಯಕ್ತಪಡಿಸಿದ ಅವರು, ಭವಿಷ್ಯದ ಎಲ್ಲಾ ಚುನಾವಣೆಗಳನ್ನು ಕಟ್ಟುನಿಟ್ಟಾಗಿ ಸಾಂಪ್ರದಾಯಿಕ ಮತಪತ್ರಗಳ ಮೂಲಕವೇ ನಡೆಸಬೇಕು ಎಂದು ಆಗ್ರಹಿಸಿದರು. ಈ ಹೋರಾಟಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಬೆಳಕಿಗೆ ಬಂದಿರುವ ಅಕ್ರಮಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ನಂತರ ಹೊಸ ಪರಿಶೀಲನಾ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: PUBLiC TV Explainer| SIR ಭಾರೀ ವಿವಾದ – ಒಂದು ಸಣ್ಣ ಬದಲಾವಣೆ ಇಷ್ಟೊಂದು ಚರ್ಚೆಯಾಗುತ್ತಿರೋದು ಯಾಕೆ?

